ADVERTISEMENT

ಉತ್ತರ ಪ್ರದೇಶದಲ್ಲಿ ಗುಂಡಿಕ್ಕಿ ಪತ್ರಕರ್ತನ ಹತ್ಯೆ

ಪಿಟಿಐ
Published 13 ಮೇ 2024, 14:13 IST
Last Updated 13 ಮೇ 2024, 14:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜೌನ್‌ಪುರ: ಉತ್ತರಪ್ರದೇಶದ ಶಾಹ್‌ಗಂಜ್‌ ಎಂಬ ಪ್ರದೇಶದಲ್ಲಿ 43 ವರ್ಷದ ಪತ್ರಕರ್ತರೊಬ್ಬರನ್ನು ಸೋಮವಾರ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಹತ್ಯೆಗೀಡಾದ ಪತ್ರಕರ್ತರನ್ನು ಸಬರಹದ್ ಎಂಬ ಹಳ್ಳಿಯ ಆಶುತೋಷ್‌ ಶ್ರೀವಾಸ್ತವ್‌ ಎಂದು ಗುರುತಿಸಲಾಗಿದ್ದು, ಇಮ್ರಾನ್‌ಗಂಜ್‌ನ ಮಾರುಕಟ್ಟೆಗೆ ತೆರಳುತ್ತಿದ್ದ ಸಮಯದಲ್ಲಿ, ಅಪರಿಚಿತ ದಾಳಿಕೋರರು ಬೆಳಿಗ್ಗೆ 9.30ರ ಸುಮಾರಿನಲ್ಲಿ ಜೌನ್‌ಪುರ್‌–ಶಹ್‌ಗಂಜ್‌ ರಸ್ತೆ ಬಳಿ ಗುಂಡು ಹಾರಿಸಿದ್ದಾರೆ ಎಂದು ಸರ್ಕಲ್‌ ಆಫೀಸರ್‌ ಅಜಿತ್‌ ಸಿಂಗ್‌ ಚೌಹಾನ್‌ ತಿಳಿಸಿದ್ದಾರೆ.

ಮೃತ ಶ್ರೀವಾಸ್ತವ್‌ ಅವರು ಭದ್ರತೆ ಒದಗಿಸುವಂತೆ ಶಾಹ್‌ಗಂಜ್‌ನ ಪೊಲೀಸ್‌ ಠಾಣೆಯ ಅಧಿಕಾರಿಗಳಿಗೆ ಒಂದು ತಿಂಗಳ ಹಿಂದೆಯೇ ಪತ್ರ ಬರೆದಿದ್ದು, ಆದರೆ ಅಧಿಕಾರಿಗಳು ಅವರ ಮನವಿಯನ್ನು ನಿರ್ಲಕ್ಷಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ADVERTISEMENT

ಹತ್ಯೆ ಖಂಡಿಸಿ ಸ್ಥಳೀಯರು ರಸ್ತೆ ತಡೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು. ಸ್ಥಳೀಯ ಅಧಿಕಾರಿಗಳು ಸೂಕ್ತ ಕ್ರಮದ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ಶ್ರೀವಾಸ್ತವ ಅವರು ಆ ಪ್ರದೇಶದಲ್ಲಿ ನಡೆಯುತ್ತಿದ್ದ ಗೋಹತ್ಯೆ ವಿರುದ್ಧ ಬರೆಯುತ್ತಿದ್ದರು ಮತ್ತು ಅಕ್ರಮ ಗೋ ಸಾಗಣೆದಾರರಿಂದ ಹಲವಾರು ಬೆದರಿಕೆಗಳನ್ನು ಎದುರಿಸಿದ್ದರು ಎಂದು ಸ್ಥಳೀಯ ಪತ್ರಕರ್ತರೊಬ್ಬರು ಪೊಲೀಸರಿಗೆ ಲಿಖಿತವಾಗಿ ತಿಳಿಸಿದ್ದಾರೆ.

ಪೊಲೀಸ್‌ ವರಿಷ್ಠಾಧಿಕಾರಿ ಅಜಯ್‌ಪಾಲ್‌ ಶರ್ಮಾ ದಾಳಿಕೋರರ ಬಂಧನಕ್ಕಾಗಿ ತಂಡವೊಂದನ್ನು ನಿಯೋಜಿಸಿದ್ದಾರೆ. ಜೌನ್‌ಪುರ ಪತ್ರಕರ್ತರ ಸಂಘವು ಹತ್ಯೆಯನ್ನು ಖಂಡಿಸಿದ್ದು, ಹತ್ಯೆ ಮಾಡಿದವರನ್ನು ಶೀಘ್ರ ಬಂಧಿಸುವಂತೆ ಒತ್ತಾಯಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.