ನವದೆಹಲಿ:ರಾಷ್ಟ್ರಪತಿ ಅಂಕಿತ ಹಾಕಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಎಸ್‌ಸಿ/ಎಸ್‌ಟಿ) ಪಟ್ಟಿಯನ್ನು ಬದಲಾಯಿಸಲು ರಾಜ್ಯ ಸರ್ಕಾರಗಳಿಗೆ ಅವಕಾಶ ಇಲ್ಲ. ಹಾಗಾಗಿ, ಒಂದು ರಾಜ್ಯದ ಎಸ್‌ಸಿ/ಎಸ್‌ಟಿ ಪಟ್ಟಿಯಲ್ಲಿ ಸೇರಿದವರು ತಮ್ಮ ಜಾತಿಯು ಎಸ್‌ಸಿ/ಎಸ್‌ಟಿ ಪಟ್ಟಿಯಲ್ಲಿ ಇಲ್ಲದ ರಾಜ್ಯದಲ್ಲಿ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಕೇಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠ ಹೇಳಿದೆ.
ರಾಷ್ಟ್ರಪತಿಯು ಒಂದು ರಾಜ್ಯಕ್ಕೆ ಸಂಬಂಧಿಸಿ ನೀಡಿದ ಆದೇಶವು ಆ ರಾಜ್ಯಕ್ಕೆ ಮಾತ್ರ ಅನ್ವಯವಾಗುತ್ತದೆ. ಹಾಗಾಗಿ ತವರು ರಾಜ್ಯದ ಎಸ್‌ಸಿ/ಎಸ್‌ಟಿ ಪಟ್ಟಿಯಲ್ಲಿ ಇದ್ದರೂ ಬೇರೊಂದು ರಾಜ್ಯದ ಪಟ್ಟಿಯಲ್ಲಿ ಇಲ್ಲದ ಜಾತಿಗಳಿಗೆ ಸೇರಿದ್ದರೆ ಅಲ್ಲಿ ಮೀಸಲಾತಿ ಇಲ್ಲ ಎಂದು ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠ ಸ್ಪಷ್ಟಪಡಿಸಿದೆ.
ಪಟ್ಟಿಯಲ್ಲಿ ಇಲ್ಲದ ಜಾತಿಯನ್ನು ಎಸ್‌ಸಿ/ಎಸ್‌ಟಿ ಪಟ್ಟಿಗೆ ಸೇರಿಸಬೇಕಿದ್ದರೆ ಅದಕ್ಕೆ ಸಂಸತ್ತಿನಲ್ಲಿಯೇ ತಿದ್ದುಪಡಿ ಆಗಬೇಕು ಎಂದೂ ತೀರ್ಪಿನಲ್ಲಿ ಹೇಳಲಾಗಿದೆ.
ಒಂದು ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಸ್ಥಾನ ಹೊಂದಿರುವವರಿಗೆ ಬೇರೊಂದು ರಾಜ್ಯದಲ್ಲಿಯೂ ಅದೇ ಸ್ಥಾನ ದೊರೆಯುತ್ತದೆ ಎಂದು ಹೇಳಲಾಗದು.ಒಂದು ರಾಜ್ಯದಲ್ಲಿ ಪರಿಶಿಷ್ಟ ಜಾತಿ ಅಥವಾ ಪಂಗಡದ ಸ್ಥಾನ ಇದೆ ಎಂಬುದು ಬೇರೊಂದು ರಾಜ್ಯದಲ್ಲಿ ಅದೇ ಸ್ಥಾನ ಪಡೆಯಲು ನೆಲೆಗಟ್ಟಾಗದು ಎಂದು ಪೀಠವು ಸ್ಪಷ್ಟವಾಗಿ ತಿಳಿಸಿದೆ.
ರಾಷ್ಟ್ರ ರಾಜಧಾನಿ ಪ್ರದೇಶ ದೆಹಲಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಎಸ್‌ಸಿ/ಎಸ್‌ಟಿ ಮೀಸಲಾತಿ ನೀತಿ ಅನ್ವಯವಾಗುತ್ತದೆ ಎಂದು ಪೀಠವು ಹೇಳಿದೆ. ನಾಲ್ವರು ನ್ಯಾಯಮೂರ್ತಿಗಳು ಈ ನಿಲುವು ತಾಳಿದ್ದಾರೆ. ಆದರೆ,ನ್ಯಾಯಮೂರ್ತಿ ಆರ್. ಭಾನುಮತಿ ಅವರು ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಒಂದು ರಾಜ್ಯದಲ್ಲಿ ಎಸ್‌ಸಿ/ಎಸ್‌ಟಿ ಸ್ಥಾನ ಇರುವವರು ತಮ್ಮ ಜಾತಿಯು ಈ ಪಟ್ಟಿಯಲ್ಲಿ ಇಲ್ಲದ ರಾಜ್ಯದಲ್ಲಿಯೂ ಮೀಸಲಾತಿ ಪಡೆಯಬಹುದೇ ಎಂಬುದಕ್ಕೆ ಸಂಬಂಧಿಸಿದ ವಿವಿಧ ಅರ್ಜಿಗಳ ವಿಚಾರಣೆ ನಡೆಸಿ ಪೀಠವು ಹೀಗೆ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.