ADVERTISEMENT

ಜೆಎನ್‌ಯು ಕನ್ನಡ ಪೀಠ: ಮುಖ್ಯಸ್ಥರ ನೇಮಕಕ್ಕೆ ಶೋಧನಾ ಸಮಿತಿ ರಚನೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2024, 16:20 IST
Last Updated 13 ನವೆಂಬರ್ 2024, 16:20 IST
<div class="paragraphs"><p>ಜೆಎನ್‌ಯು ಲಾಂಛನ</p></div>

ಜೆಎನ್‌ಯು ಲಾಂಛನ

   

ನವದೆಹಲಿ: ಇಲ್ಲಿನ ಜವಹರ್‌ಲಾಲ್‌ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಕನ್ನಡ ಪೀಠಕ್ಕೆ ಮುಖ್ಯಸ್ಥರ ನೇಮಿಸಲು ಶೋಧನಾ ಸಮಿತಿ ರಚಿಸಲಾಗಿದೆ.

ಶೋಧನಾ ಸಮಿತಿಯಲ್ಲಿ ಪ್ರಾಧ್ಯಾಪಕರಾದ ಶೋಭಾ ಶಿವಶಂಕರನ್‌, ರಮೇಶ್‌ ಸಾಲ್ಯಾನ್‌, ರೀಟಾ ಸೋನಿ ಹಾಗೂ ಸಂಗಮೇಶ್‌ ಇದ್ದಾರೆ.

ADVERTISEMENT

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿಶ್ವವಿದ್ಯಾಲಯ ಪರಸ್ಪರ ಮಾಡಿಕೊಂಡ ಒಪ್ಪಂದದ ಪ್ರಕಾರ ಕನ್ನಡ ಪೀಠವು 2015ರಲ್ಲಿ ಕಾರ್ಯಾರಂಭ ಮಾಡಿತ್ತು. ಪ್ರೊ. ಪುರುಷೋತ್ತಮ ಬಿಳಿಮಲೆ ಅವರನ್ನು ಕನ್ನಡ ಪೀಠದ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿತ್ತು. ಅವರ ಬಳಿಕ ಪ್ರೊ. ವಿಶ್ವನಾಥ್ ಅವರನ್ನು ನೇಮಿಸಲಾಗಿತ್ತು. ವಿಶ್ವನಾಥ್ ಅವರ ಅವಧಿ ಸೆಪ್ಟೆಂಬರ್‌ನಲ್ಲಿ ಮುಗಿದಿತ್ತು. ಕನ್ನಡ ಪೀಠವು ಸ್ಥಗಿತಗೊಳ್ಳುವ ಆತಂಕ ಎದುರಾಗಿತ್ತು. ಕನ್ನಡ ಪೀಠಕ್ಕೆ ಮುಖ್ಯಸ್ಥರ ನೇಮಿಸುವಂತೆ ಆಗ್ರಹಿಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ವಿವಿಯ ಕುಲಪತಿ ಅವರಿಗೆ ಇತ್ತೀಚೆಗೆ ಪತ್ರ ಬರೆದಿದ್ದರು.

ಪೀಠಕ್ಕೆ ಕರ್ನಾಟಕ ಸರ್ಕಾರವು ₹5 ಕೋಟಿ ಆರ್ಥಿಕ ನೆರವು ನೀಡಿದೆ. ಇದರಿಂದ ಲಭಿಸುವ ಬಡ್ಡಿಯಿಂದ ಕನ್ನಡ ಪೀಠ ಕಾರ್ಯನಿರ್ವಹಿಸುತ್ತಿದೆ. ವಾರ್ಷಿಕ ಬಡ್ಡಿ ₹30 ಲಕ್ಷದಷ್ಟು ಬರುತ್ತದೆ. ಈ ಮೊತ್ತವು ಪೀಠದ ಮುಖ್ಯಸ್ಥರ ವೇತನ ಪಾವತಿಗೆ ಸಾಕಾಗುತ್ತದೆ. ಕನ್ನಡ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲು ಅನುದಾನದ ಕೊರತೆ ಉಂಟಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಹೆಚ್ಚುವರಿ ಅನುದಾನ ನೀಡಬೇಕು ಎಂದು ಜೆಎನ್‌ಯು ಪ್ರಾಧ್ಯಾಪಕರೊಬ್ಬರು ಒತ್ತಾಯಿಸಿದರು.

‘ಕನ್ನಡ ಪೀಠ ಬಲಪಡಿಸಲು ವಿಶ್ವವಿದ್ಯಾಲಯದ ಸಹಕಾರ ಅಗತ್ಯ. ಪೀಠದ ಮುಖ್ಯಸ್ಥರಿಗೆ ಯುಜಿಸಿಯಿಂದಲೇ ವೇತನ ಸಿಗಬೇಕು. ಈ ಸಂಬಂಧ ಪ್ರಾಧಿಕಾರದ ನಿಯೋಗವು ಕುಲಪತಿಯವರನ್ನು ಭೇಟಿ ಮಾಡಿ ಒತ್ತಡ ಹೇರಿದೆ’ ಎಂದು ಪುರುಷೋತ್ತಮ ಬಿಳಿಮಲೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.