ನವದೆಹಲಿ: ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್‌ನಿಂದ (ಆರ್‌ಎಚ್‌ಎಫ್‌ಎಲ್) ಹಣವನ್ನು ಬೇರೆಡೆಗೆ ಅಕ್ರಮವಾಗಿ ವರ್ಗಾಯಿಸಿದ ಪ್ರಕರಣದಲ್ಲಿ ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಮತ್ತು ಇತರ 24 ಕಂಪನಿಗಳನ್ನು ಸೆಕ್ಯುರಿಟೀಸ್ ಮಾರುಕಟ್ಟೆಯಿಂದ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಐದು ವರ್ಷ ನಿರ್ಬಂಧಿಸಿದೆ.
ಅನಿಲ್ ಅಂಬಾನಿಗೆ ₹25 ಕೋಟಿ ದಂಡವನ್ನೂ ವಿಧಿಸಿದೆ. ಐದು ವರ್ಷಗಳವರೆಗೆ ಯಾವುದೇ ನೋಂದಾಯಿತ ಕಂಪನಿ ಅಥವಾ ಸೆಬಿಯಿಂದ ನೋಂದಣಿಯಾಗಿರುವ ಸಂಸ್ಥೆಯಲ್ಲಿ ನಿರ್ದೇಶಕ ಅಥವಾ ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿಯಾಗಿ (ಕೆಎಂಪಿ) ಕೆಲಸ ಮಾಡುವುದನ್ನೂ ನಿರ್ಬಂಧಿಸಿದೆ.
24 ಕಂಪನಿಗಳಿಗೆ ₹21 ಕೋಟಿಯಿಂದ ₹25 ಕೋಟಿವರೆಗೆ ದಂಡ ವಿಧಿಸಲಾಗಿದೆ. ಆರ್‌ಎಚ್‌ಎಫ್‌ಎಲ್ ಅನ್ನು 6 ತಿಂಗಳು ಷೇರು ಮಾರುಕಟ್ಟೆಯಿಂದ ನಿರ್ಬಂಧಿಸಿದ್ದು, ₹6 ಲಕ್ಷ ದಂಡ ವಿಧಿಸಿದೆ. ಸೆಬಿ ಕ್ರಮದ ಬಗ್ಗೆ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಗ್ರೂಪ್ ಕಂಪನಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಆರ್‌ಎಚ್‌ಎಫ್‌ಎಲ್‌ನ ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿ ಅಮಿತ್ ಬಾಪ್ನಾ ಅವರಿಗೆ ₹27 ಕೋಟಿ, ರವೀಂದ್ರ ಸುಧಾಲ್ಕರ್ ಅವರಿಗೆ ₹26 ಕೋಟಿ ಮತ್ತು ಪಿಂಕೇಶ್ ಆರ್. ಶಾ ಅವರಿಗೆ ₹21 ಕೋಟಿ ದಂಡ ವಿಧಿಸಲಾಗಿದೆ.
ರಿಲಯನ್ಸ್ ಯುನಿಕಾರ್ನ್ ಎಂಟರ್‌ಪ್ರೈಸಸ್, ರಿಲಯನ್ಸ್ ಎಕ್ಸ್‌ಚೇಂಜ್ ನೆಕ್ಸ್ಟ್ ಲಿಮಿಟೆಡ್, ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ ಲಿಮಿಟೆಡ್, ರಿಲಯನ್ಸ್ ಕ್ಲೀನ್‌ಜೆನ್ ಲಿಮಿಟೆಡ್, ರಿಲಯನ್ಸ್ ಬ್ಯುಸಿನೆಸ್ ಬ್ರಾಡ್‌ಕಾಸ್ಟ್ ನ್ಯೂಸ್ ಹೋಲ್ಡಿಂಗ್ಸ್ ಲಿಮಿಟೆಡ್ ಮತ್ತು ರಿಲಯನ್ಸ್ ಬಿಗ್ ಎಂಟರ್‌ಟೇನ್‌ಮೆಂಟ್ ಪ್ರೈವೆಟ್ ಲಿಮಿಟೆಡ್ ಕಂಪನಿಗಳಿಗೆ ತಲಾ ₹25 ಕೋಟಿ ದಂಡ ವಿಧಿಸಿದೆ.
ಷೇರು ಮೌಲ್ಯ ಕುಸಿತ
ಸೆಬಿ ನಿರ್ಬಂಧದ ಪರಿಣಾಮ ಅನಿಲ್ ಅಂಬಾನಿ ಒಡೆತನದ ಕಂಪನಿಗಳ ಷೇರು ಮೌಲ್ಯ ಶುಕ್ರವಾರ ಕುಸಿತ ಕಂಡಿದೆ. ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್ ಷೇರು ಮೌಲ್ಯ ಶೇ 10.07ರಷ್ಟು ಇಳಿದಿದೆ. ಕಂಪನಿಯ ಷೇರಿನ ಬೆಲೆ ಬಿಎಸ್‌ಇನಲ್ಲಿ ₹211.70 ಹಾಗೂ ಎನ್‌ಎಸ್‌ಇಯಲ್ಲಿ ₹209.99 ಆಗಿದೆ. ರಿಲಯನ್ಸ್ ಹೋಮ್ ಫೈನಾನ್ಸ್ ಮತ್ತು ರಿಲಯನ್ಸ್ ಪವರ್ ಕಂಪನಿಗಳ ಷೇರು ಮೌಲ್ಯ ಶೇ 5 ರಷ್ಟು ಇಳಿಕೆ ಕಂಡಿವೆ.
ಏನಿದು ಪ್ರಕರಣ?
ಆರ್‌ಎಚ್‌ಎಫ್‌ಎಲ್‌ನ ಹಣವನ್ನು ಬೇರೆಡೆ ವರ್ಗಾಯಿಸಲಾಗಿದೆ ಎಂಬ ಬಗ್ಗೆ ಹಲವು ದೂರುಗಳನ್ನು ಸ್ವೀಕರಿಸಿದ್ದ ಸೆಬಿ ಅಕ್ರಮ ನಡೆದಿರುವುದನ್ನು ಖಚಿತಪಡಿಸಿಕೊಳ್ಳಲು 2018–2019ರ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಿದೆ. ಅನಿಲ್ ಅಂಬಾನಿ ಆರ್‌ಎಚ್‌ಎಫ್‌ಎಲ್‌ನ ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿ ಅಮಿತ್ ಬಾಪ್ನಾ ರವೀಂದ್ರ ಸುಧಾಲ್ಕರ್ ಮತ್ತು ಪಿಂಕೇಶ್ ಆರ್. ಶಾ ಅವರು ಹಣ ವಂಚಿಸಲು ಯೋಜನೆ ರೂಪಿಸಿದ್ದರು ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ. ಅನಿಲ್ ಅಂಬಾನಿ ಹಾಗೂ ಇತರರು ಆರ್‌ಎಚ್‌ಎಫ್‌ಎಲ್‌ನ ಹಣವನ್ನು ‘ಸಾಲ’ ಎಂದು ಹೇಳಿ ತಮಗೆ ಸಂಬಂಧಿಸಿದ ಕಂಪನಿಗಳಿಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ಸೆಬಿ ಶುಕ್ರವಾರ ಬಿಡುಗಡೆಗೊಳಿಸಿದ ತನ್ನ 222 ಪುಟಗಳ ಆದೇಶದಲ್ಲಿ ಹೇಳಿದೆ. ಅಂಬಾನಿ ಅವರ ಪ್ರಭಾವದ ಅಡಿಯಲ್ಲಿ ಕೆಲವು ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿ ಈ ಅಕ್ರಮದಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ. ಮಾತ್ರವಲ್ಲ ಉಳಿದ ಕಂಪನಿಗಳು ಅಕ್ರಮವಾಗಿ ವರ್ಗಾಯಿಸಿದ ಸಾಲವನ್ನು ಸ್ವೀಕರಿಸುವ ಪಾತ್ರವನ್ನು ನಿರ್ವಹಿಸಿವೆ ಅಥವಾ ಆರ್‌ಎಚ್‌ಎಫ್‌ಎಲ್‌ನಿಂದ ಹಣವನ್ನು ಬೇರೆಡೆಗೆ ವರ್ಗಾಯಿಸಲು ಅನುವು ಮಾಡಿಕೊಟ್ಟಿವೆ ಎಂದು ಸೆಬಿ ಉಲ್ಲೇಖಿಸಿದೆ. ಆರ್‌ಎಚ್‌ಎಫ್‌ಎಲ್‌ನ ನಿರ್ದೇಶಕ ಮಂಡಳಿಯು ಈ ರೀತಿ ಸಾಲ ನೀಡುವುದನ್ನು ನಿಲ್ಲಿಸುವಂತೆ ನಿರ್ದೇಶನ ನೀಡಿತ್ತು. ಆದರೂ ಕಂಪನಿಯ ಆಡಳಿತ ಮಂಡಳಿ ಈ ನಿರ್ದೇಶಗಳನ್ನು ನಿರ್ಲಕ್ಷಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.