ನವದೆಹಲಿ: ಹಿತಾಸಕ್ತಿ ಸಂಘರ್ಷ ಆರೋಪ ಎದುರಿಸುತ್ತಿರುವ ಸೆಬಿ ಅಧ್ಯಕ್ಷೆ ಮಾಧವಿ ಪುರಿ ಬುಚ್ ಮತ್ತು ಸೆಬಿಯ ಇತರ ಅಧಿಕಾರಿಗಳು ವೈಯಕ್ತಿಕ ತುರ್ತಿನ ಕಾರಣ ನೀಡಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ (ಪಿಎಸಿ) ಮುಂದೆ ಗುರುವಾರ ಗೈರಾದರು. ಹೀಗಾಗಿ ಸಮಿತಿಯ ಮುಖ್ಯಸ್ಥ ಕೆ.ಸಿ. ವೇಣುಗೋಪಾಲ್ ಅವರು ಸಭೆಯನ್ನು ಮುಂದೂಡಿದರು.
ವೇಣುಗೋಪಾಲ್ ಅವರು ಸಭೆಯಲ್ಲಿ ನಡೆದುಕೊಂಡ ರೀತಿ ಹಾಗೂ ಸಭೆಯ ಕಾರ್ಯಸೂಚಿಯ ಬಗ್ಗೆ ಸರಿಯಾದ ಮಾಹಿತಿ ನೀಡದ ಕುರಿತು ಸಮಿತಿಯಲ್ಲಿನ ಬಿಜೆಪಿ ಸದಸ್ಯರು ಗುರುವಾರ ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ದೂರ ನೀಡಿದರು.
‘ಮಾಧವಿ ಅವರು ಗುರುವಾರ ಹಾಜರಾಗುವುದಿಲ್ಲ. ಆದ್ದರಿಂದ ಸಭೆಯನ್ನು ಮುಂದೂಡಲಾಗಿದೆ’ ಎಂದು ವೇಣುಗೋಪಾಲ್ ಅವರು ಸಭೆಗೆ ಮಾಹಿತಿ ನೀಡಿದರು. ಬಿಜೆಪಿ ಸದಸ್ಯರು ಸಭೆಯಲ್ಲಿ ಹಾಜರಿರುವಂತೆಯೇ ವೇಣುಗೋಪಾಲ್ ಅವರು ವಿರೋಧ ಪಕ್ಷದ ಇತರ ಸದಸ್ಯರ ಜೊತೆಯಲ್ಲಿ ಹೊರನಡೆದರು ಎಂದು ಮೂಲಗಳು ತಿಳಿಸಿವೆ. ಈ ವೇಳೆ ವಿರೋಧ ಪಕ್ಷಗಳು ಹಾಗೂ ಎನ್‌ಡಿಎ ಸಂಸದರ ನಡುವೆ ಮಾತಿನ ಚಕಮಕಿ ನಡೆಯಿತು.
ವೇಣುಗೋಪಾಲ್ ಅವರ ಈ ನಡೆಯ ಕುರಿತು ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು, ‘ವೇಣುಗೋಪಾಲ್ ಅವರು ಸಭೆಯನ್ನು ಮುಂದೂಡುವ ಕುರಿತು ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದಾರೆ’ ಎಂದು ದೂರಿದರು.
ಮಧ್ಯಾಹ್ನದ ವೇಳೆ ಸಮಿತಿಯು ಮತ್ತೊಮ್ಮೆ ಸಭೆ ಸೇರಿತು. ಈ ವೇಳೆ ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ಕುರಿತು ಚರ್ಚಿಸಲು ನಿಗದಿಯಾಗಿತ್ತು. ಆದರೆ, ಬಿಜೆಪಿ ಸದಸ್ಯರು ಸೆಬಿಯ ಕುರಿತು ಚರ್ಚಿಸಲು ಪಟ್ಟುಹಿಡಿದರು. ಈ ಆಗ್ರಹವನ್ನು ತಳ್ಳಿಹಾಕಿದ ವೇಣುಗೋಪಾಲ್, ‘ಟ್ರಾಯ್ ಕುರಿತು ಚರ್ಚಿಸಬೇಕು ಎಂದು ಈ ಮೊದಲೇ ನಿರ್ಧಾರವಾಗಿದೆ’ ಎಂದರು.
ಮಹಾಲೇಖಪಾಲರು (ಸಿಎಜಿ) ತಮ್ಮ ವರದಿಯಲ್ಲಿ ಸೆಬಿಯನ್ನು ಉಲ್ಲೇಖಿಸಿದ್ದರೆ ಮಾತ್ರವೇ ಸೆಬಿ ಅಧ್ಯಕ್ಷರಿಗೆ ಹಾಗೂ ಸೆಬಿಯ ಅಧಿಕಾರಿಗಳಿಗೆ ಸಮಿತಿಯು ನೋಟಿಸ್ ನೀಡಬಹುದು. ಸಿಎಜಿ ವರದಿಯಲ್ಲಿ ಸೆಬಿಯ ಉಲ್ಲೇಖವಿಲ್ಲ ಎಂದು ಬಿಜೆಪಿ ಸದಸ್ಯರು ಸಭೆಯಲ್ಲಿ ವಾದಿಸಿದರು.
ಈ ವಾದವನ್ನೂ ತಳ್ಳಿಹಾಕಿದ ವೇಣುಗೋಪಾಲ್ ಅವರು, ‘ಬಿಜೆಪಿ ನಾಯಕ ಮುರಳಿ ಮನೋಹರ ಜೋಷಿ ಅವರು ಇದೇ ಸಮಿತಿಯ ಅಧ್ಯಕ್ಷರಾಗಿದ್ದಾಗ ಸೆಬಿ ಅಧಿಕಾರಿಗಳಿಗೆ ನೋಟಿಸ್ ನೀಡಿದ್ದರು’ ಎಂದು ಉತ್ತರಿಸಿದರು’ ಎಂದು ಮೂಲಗಳು ಹೇಳಿವೆ. ನಂತರ, ವೇಣುಗೋಪಾಲ್ ಅವರು ಸಭೆಯನ್ನೂ ಮುಂದೂಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.