ADVERTISEMENT

ಲಾಭ ಗಳಿಸುತ್ತಿರುವ ‘ದೊಡ್ಡವರ’ ಹೆಸರು ತಿಳಿಸಿ: ಸೆಬಿಗೆ ರಾಹುಲ್‌ ಆಗ್ರಹ

ಪಿಟಿಐ
Published 24 ಸೆಪ್ಟೆಂಬರ್ 2024, 15:50 IST
Last Updated 24 ಸೆಪ್ಟೆಂಬರ್ 2024, 15:50 IST
ರಾಹುಲ್ ಗಾಂಧಿ  
ರಾಹುಲ್ ಗಾಂಧಿ     

ನವದೆಹಲಿ: ಕಳೆದ ಮೂರು ವರ್ಷಗಳ ಅವಧಿಯಲ್ಲಿ ಸಣ್ಣ ಹೂಡಿಕೆದಾರರ ಪೈಕಿ ಶೇ 90ರಷ್ಟು ಜನರು  ‘ಫ್ಯೂಚರ್ಸ್ ಮತ್ತು ಆಪ್ಷನ್‌’ (ಎಫ್‌ ಅಂಡ್‌ ಒ) ವಹಿವಾಟಿನಲ್ಲಿ ₹1.8 ಲಕ್ಷ ಕೋಟಿ ಕಳೆದುಕೊಂಡಿದ್ದಾರೆ ಎಂದಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಸಣ್ಣ ಹೂಡಿಕೆದಾರರಿಗೆ ಹಾನಿ ಉಂಟು ಮಾಡಿ, ಲಾಭ ಗಳಿಸುತ್ತಿರುವ ‘ದೊಡ್ಡ ವ್ಯಕ್ತಿಗಳ’ ಹೆಸರುಗಳನ್ನು ಸೆಬಿ ಬಹಿರಂಗಪಡಿಸಬೇಕು ಎಂದು ಮಂಗಳವಾರ ಆಗ್ರಹಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ಅನಿಯಂತ್ರಿತ ‘ಫ್ಯೂಚರ್ಸ್ ಮತ್ತು ಆಪ್ಷನ್‌’ ವಹಿವಾಟು ಕಳೆದ ಐದು ವರ್ಷಗಳಲ್ಲಿ 45 ಪಟ್ಟು ಹೆಚ್ಚಾಗಿದೆ’ ಎಂದಿದ್ದಾರೆ.

‘ಫ್ಯೂಚರ್ಸ್‌ ಮತ್ತು ಆಪ್ಷನ್‌’ ವಹಿವಾಟು ನಡೆಸುತ್ತಿರುವವರ ಪೈಕಿ, ಶೇ 91ರಷ್ಟು ಅಥವಾ 73 ಲಕ್ಷ ಮಂದಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಹಣ ಕಳೆದುಕೊಂಡಿದ್ದಾರೆ. ಒಬ್ಬ ವ್ಯಕ್ತಿ ಸರಾಸರಿ ₹1.2 ಲಕ್ಷದಷ್ಟು ನಷ್ಟ ಅನುಭವಿಸಿದ್ದಾನೆ ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.

ADVERTISEMENT

ಕಳೆದ ಮೂರು ವರ್ಷಗಳ ಅವಧಿಯಲ್ಲಿ, ‘ಫ್ಯೂಚರ್ಸ್ ಮತ್ತು ಆಪ್ಷನ್‌’ ವಹಿವಾಟು ನಡೆಸಿದ್ದ ಒಂದು ಕೋಟಿಗೂ ಅಧಿಕ ಮಂದಿ ಪೈಕಿ, ಶೇ 93ರಷ್ಟು ಜನರು ಪ್ರತಿ ವಹಿವಾಟಿನಲ್ಲಿ ಸರಾಸರಿ ₹2 ಲಕ್ಷದಷ್ಟು ಹಣ ಕಳೆದುಕೊಂಡಿದ್ದಾರೆ. ಈ ವಹಿವಾಟುದಾರರು ಅನುಭವಿಸಿದ ಸರಾಸರಿ ನಷ್ಟ ₹1.8 ಲಕ್ಷ ಕೋಟಿಗೂ ಅಧಿಕ ಎಂದೂ ವರದಿಯಲ್ಲಿ ವಿವರಿಸಲಾಗಿದೆ.

ಇದೇ ಅವಧಿಯಲ್ಲಿ, ‘ಫ್ಯೂಚರ್ಸ್ ಮತ್ತು ಆಪ್ಷನ್‌’ ವಹಿವಾಟು ನಡೆಸಿದವರ ಪೈಕಿ, ಶೇ 7.2ರಷ್ಟು ಮಂದಿ ಮಾತ್ರ ಲಾಭ ಗಳಿಸಿದ್ದಾರೆ. ಶೇ 1ರಷ್ಟು ಮಂದಿ ಮಾತ್ರ, ಎಲ್ಲ ವೆಚ್ಚಗಳ ಹೊಂದಾಣಿಕೆ ನಂತರ, ₹1ಲಕ್ಷಕ್ಕೂ ಅಧಿಕ ಲಾಭ ಮಾಡಿಕೊಳ್ಳುವಲ್ಲಿ ಯಶ ಕಂಡಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಎಸ್‌ಬಿಐ ನಿರ್ಧಾರ ಪರಿಶೀಲನೆಗೆ ಕಾಂಗ್ರೆಸ್‌ ಆಗ್ರಹ

ಸುಪ್ರೀಂ ಇನ್‌ಫ್ರಾಸ್ಟ್ರಕ್ಚರ್ ಇಂಡಿಯಾ ಲಿಮಿಟೆಡ್‌ (ಎಸ್‌ಐಐಎಲ್‌) ಕಂಪನಿಯ ಬಾಕಿ ಸಾಲವನ್ನು ಈಕ್ವಿಟಿಯಾಗಿ ಪರಿವರ್ತಿಸಲು ಎಸ್‌ಬಿಐ ನಿರ್ಧರಿಸಿದೆ ಎನ್ನಲಾಗುತ್ತಿದ್ದು ಈ ನಡೆ ಖಂಡನೀಯ ಎಂದು ಕಾಂಗ್ರೆಸ್‌ ಮಂಗಳವಾರ ಹೇಳಿದೆ.

ಈ ವಿಚಾರದಲ್ಲಿ ಆರ್‌ಬಿಐ ತಕ್ಷಣವೇ ಮಧ್ಯಪ್ರವೇಶಿಸಿ ಪರಿಶೀಲಿಸಬೇಕು ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಆಗ್ರಹಿಸಿದ್ದಾರೆ. ‘ಎಸ್‌ಐಐಎಲ್‌ಗೆ ಸಾಲ ನೀಡಿರುವ ಬ್ಯಾಂಕುಗಳ ಪೈಕಿ ಎಸ್‌ಬಿಐ ಪ್ರಮುಖ ಸಾರ್ವಜನಿಕ ವಲಯದ ಸಂಸ್ಥೆಯಾಗಿದೆ. ಈಗ ಬಾಕಿ ಸಾಲವನ್ನು ಈಕ್ವಿಟಿಯನ್ನಾಗಿ ಪರಿವರ್ತಿಸುವ ನಿರ್ಧಾರದ ಮೂಲಕ ಕಂಪನಿಯಲ್ಲಿ ಪಾಲುದಾರಿಕೆ ಹೊಂದಲು ಎಸ್‌ಬಿಐ ಹೊರಟಿದೆ’ ಎಂದು ಅವರು ‘ಎಕ್ಸ್‌’ನಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.