ADVERTISEMENT

ಷೇರು ಮೌಲ್ಯ ಏರಿಳಿತ | ಅದಾನಿ ಸಮೂಹ ತಪ್ಪೆಸಗಿಲ್ಲ: ತಜ್ಞರ ಸಮಿತಿ ವರದಿ

ಸುಪ್ರೀಂಕೋರ್ಟ್‌ಗೆ ತಜ್ಞರ ಸಮಿತಿ ಸಲ್ಲಿಸಿರುವ ಮಧ್ಯಂತರ ವರದಿಯಲ್ಲಿ ಉಲ್ಲೇಖ

ಪಿಟಿಐ
Published 19 ಮೇ 2023, 16:16 IST
Last Updated 19 ಮೇ 2023, 16:16 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ‘ಅದಾನಿ ಸಮೂಹವು ಷೇರುಗಳ ಮೌಲ್ಯವನ್ನು ಕೃತಕವಾಗಿ ಏರಿಳಿತ ಮಾಡಿಲ್ಲ. ಈ ವಿದ್ಯಮಾನಕ್ಕೆ ಸಂಬಂಧಿಸಿದ ನಿಯಂತ್ರಣ ವ್ಯವಸ್ಥೆಯಲ್ಲಿ ಯಾವುದೇ ಲೋಪವಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿಲ್ಲ’ ಎಂದು ಸುಪ್ರೀಂಕೋರ್ಟ್ ನೇಮಿಸಿದ್ದ ತಜ್ಞರ ಸಮಿತಿ ಶುಕ್ರವಾರ ಹೇಳಿದೆ.

ಸಾಗರೋತ್ತರ ಕಂಪನಿಗಳು ಅದಾನಿ ಸಮೂಹದಲ್ಲಿ ಹೂಡಿಕೆ ಮಾಡುವ ವೇಳೆ ನಿಯಮಗಳ ಉಲ್ಲಂಘನೆಯಾಗಿತ್ತು ಎಂಬ ಆರೋಪಗಳ ಕುರಿತು ಸೆಬಿ ತನಿಖೆ ನಡೆಸಿದ್ದು, ಯಾವುದೇ ತಪ್ಪು ಕಂಡುಬಂದಿಲ್ಲ ಎಂದೂ ಸಮಿತಿ ತನ್ನ ವರದಿಯಲ್ಲಿ ಹೇಳಿದೆ.

ಅದಾನಿ ಸಮೂಹವು ತನ್ನ ಷೇರುಗಳ ಮೌಲ್ಯದಲ್ಲಿ ಕೃತಕವಾಗಿ ಏರಿಳಿತ ಮಾಡಿತ್ತು ಎಂಬುದಾಗಿ ಅಮೆರಿಕದ ಹಿಂಡನ್‌ಬರ್ಗ್‌ ರಿಸರ್ಚ್‌ ಸಂಸ್ಥೆ ವರದಿ ಪ್ರಕಟಿಸಿತ್ತು. ಇದು ದೇಶದ ಷೇರು ಮಾರುಕಟ್ಟೆಯಲ್ಲಿ ತಲ್ಲಣಕ್ಕೆ ಕಾರಣವಾಗಿತ್ತು.

ADVERTISEMENT

ಈ ಆರೋಪಗಳ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸಲು ನಿವೃತ್ತ ನ್ಯಾಯಮೂರ್ತಿ ಎ.ಎಂ.ಸಪ್ರೆ ನೇತೃತ್ವದ ಆರು ಸದಸ್ಯರಿರುವ ತಜ್ಞರ ಸಮಿತಿಯನ್ನು ಸುಪ್ರೀಂಕೋರ್ಟ್‌ ರಚಿಸಿತ್ತು. ಒ.ಪಿ.ಭಟ್, ಕೆ.ವಿ.ಕಾಮತ್, ನಂದನ್‌ ನಿಲೇಕಣಿ ಹಾಗೂ ಸೋಮಶೇಖರ್ ಸುಂದರೇಶನ್‌ ಈ ಸಮಿತಿ ಸದಸ್ಯರಾಗಿದ್ದಾರೆ. ಸಮಿತಿಯು ಸುಪ್ರೀಂಕೋರ್ಟ್‌ಗೆ ಶುಕ್ರವಾರ ಸಲ್ಲಿಸಿರುವ ಮಧ್ಯಂತರ ವರದಿಯಲ್ಲಿ ಈ ಮಾಹಿತಿ ನೀಡಿದೆ.

‘ಹಿಂಡನ್‌ಬರ್ಗ್ ರಿಸರ್ಚ್‌ ಸಂಸ್ಥೆಯು ವರದಿ ಸಲ್ಲಿಸುವ ಮುನ್ನವೇ, ಅದಾನಿ ಸಮೂಹದ ಷೇರುಗಳ ‘ಶಾರ್ಟ್‌ ಸೆಲ್ಲಿಂಗ್‌’ ಮಾಡುವುದು. ಸಮೂಹದ ವಿರುದ್ಧದ ಆರೋಪಗಳಿರುವ ವರದಿಯನ್ನು ಬಹಿರಂಗಪಡಿಸಿದ ನಂತರ ಷೇರುಗಳ ಮೌಲ್ಯದಲ್ಲಿ ಭಾರಿ ಕುಸಿತ ಕಂಡು ಬಂದಾಗ ದೊಡ್ಡ ಪ್ರಮಾಣದ ಲಾಭ ಮಾಡಿಕೊಳ್ಳುವುದಕ್ಕೆ ಸಂಬಂಧಿಸಿ ಸಿದ್ಧತೆ ನಡೆದಿತ್ತು ಎಂಬ ಬಗ್ಗೆ ಪುರಾವೆ ಲಭಿಸಿದೆ’ ಎಂದು ಸಮಿತಿಯು ಹೇಳಿದೆ.

ಯಾವುದೇ ಷೇರು ಕುಸಿಯುತ್ತದೆ ಎಂಬುದು ವಿಶ್ಲೇಷಣೆಯಿಂದ ಗೊತ್ತಾದಾಗ, ಟ್ರೇಡರ್ ಅದನ್ನು ‘ಶಾರ್ಟ್‌ ಸೆಲ್‌’ ಮಾಡಲು ನಿರ್ಧರಿಸುತ್ತಾನೆ. ಈ ವಹಿವಾಟಿನಲ್ಲಿ ಷೇರುಗಳನ್ನು ಖರೀದಿಸುವ ಮುನ್ನವೇ ಮಾರಾಟ ಮಾಡಲಾಗುತ್ತದೆ.

‘ಸೆಬಿಯು ಅನುಸರಿಸುವ ನಿಯಮಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಸಂಬಂಧಿಸಿ ಸ್ಥಿರ ಹಾಗೂ ಏಕರೂಪದ ನೀತಿಯ ಅಗತ್ಯ ಇದೆ’ ಎಂದೂ ಸಮಿತಿ ಅಭಿಪ್ರಾಯಪಟ್ಟಿದೆ.

ಅದಾನಿ ಸಮೂಹದ ಕಂಪನಿಗಳಲ್ಲಿ ಕನಿಷ್ಠ ಹೂಡಿಕೆಗೆ ಸಂಬಂಧಿಸಿದ ನಿಯಮಗಳು ಅಥವಾ ವಹಿವಾಟಿಗೆ ಸಂಬಂಧಿಸಿ ಸೆಬಿಯಿಂದ ಲೋಪವಾಗಿರುವುದು ಕಂಡುಬಂದಿಲ್ಲ ಎಂದು ವರದಿಯಲ್ಲಿ ವಿವರಿಸಲಾಗಿದೆ.

‘ಅದಾನಿ ಸಮೂಹದ ಕಂಪನಿಗಳಲ್ಲಿ ವಿದೇಶದ 13 ಕಂಪನಿಗಳು ಹೂಡಿಕೆ ಮಾಡಿವೆ. ಆದರೆ, ಈ ವಿದೇಶಿ ಕಂಪನಿಗಳ ಮಾಲೀಕತ್ವದ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಹೀಗಾಗಿ, ಅದಾನಿ ಸಮೂಹದ ಕಂಪನಿಗಳಲ್ಲಿ ವಿದೇಶಿ ಹೂಡಿಕೆದಾರರು ಮಾಡಿರುವ ಹೂಡಿಕೆ ಪಾರದರ್ಶಕವಾಗಿಲ್ಲ ಎಂದು ಸೆಬಿ ಸಂಶಯ ವ್ಯಕ್ತಪಡಿಸಿತ್ತು. ಈ ಸಂಶಯವೇ ತನಿಖೆಗೆ ಕಾರಣವಾಗಿದೆ’ ಎಂದು ವರದಿಯಲ್ಲಿ ವಿವರಿಸಲಾಗಿದೆ.

‘ಕಂಪನಿಗಳ ಪ್ರವರ್ತಕರೇ ಸಾರ್ವಜನಿಕರ ಹೆಸರಿನಲ್ಲಿ ಹೂಡಿಕೆ ಮಾಡಿದ್ದಾರೆ ಎಂಬ ಬಗ್ಗೆ ಸೆಬಿ ಬಹಳ ಹಿಂದಿನಿಂದಲೂ ಶಂಕೆ ವ್ಯಕ್ತಪಡಿಸುತ್ತಿದೆ. ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ ನೆರವಿನಿಂದ ತನಿಖೆ ಕೈಗೊಂಡಿದ್ದರೂ, ಈ 13 ಕಂಪನಿಗಳ ಮಾಲೀಕತ್ವವನ್ನು ಸೆಬಿಗೆ ಪತ್ತೆ ಮಾಡಲು ಆಗಿಲ್ಲ’ ಎಂದು ವರದಿಯಲ್ಲಿ ಹೇಳಲಾಗಿದೆ.

‘ಈ 13 ವಿದೇಶಿ ಕಂಪನಿಗಳ ಮಾಲೀಕತ್ವದ ಕುರಿತು 2020ರ ಅಕ್ಟೋಬರ್‌ನಿಂದಲೇ ಸೆಬಿ ತನಿಖೆ ನಡೆಸುತ್ತಿದೆ. ಆದರೆ, ತಾನು ವ್ಯಕ್ತಪಡಿಸಿರುವ ಸಂಶಯಕ್ಕೆ ಉತ್ತರ ಕಂಡುಕೊಳ್ಳುವುದು ಸೆಬಿಗೆ ಸಾಧ್ಯವಾಗುತ್ತಿಲ್ಲ’ ಎಂದು ವಿವರಿಸಲಾಗಿದೆ.

‘ಕೆಲ ವಿಷಯಗಳಲ್ಲಿ ತಪ್ಪು ಮಾಡಿರುವ ಬಗ್ಗೆ ಸೆಬಿ ಸಂಶಯ ವ್ಯಕ್ತಪಡಿಸಿದ್ದರೂ, ಹಲವಾರು ಷರತ್ತುಗಳನ್ನು ಪಾಲನೆ ಮಾಡಿರುವುದು ಕಂಡುಬಂದಿದೆ. ಹೀಗಾಗಿ, ಇಲ್ಲಿ ಕೋಳಿ ಮೊದಲೋ ಮೊಟ್ಟೆ ಮೊದಲೋ ಎಂಬ ಪರಿಸ್ಥಿತಿ ಇದೆ ಎಂಬುದು ದಾಖಲೆಗಳ ಪರಿಶೀಲನೆಯಿಂದ ತಿಳಿದು ಬರುತ್ತದೆ’ ಎಂದು ಸಮಿತಿ ಹೇಳಿದೆ.

‘ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅದಾನಿ ಸಮೂಹದ ಷೇರುಗಳನ್ನು ಮಾರುಕಟ್ಟೆ ಮರುಮೌಲ್ಯಮಾಪನಕ್ಕೆ ಒಳಗಪಡಿಸಿ, ಅವುಗಳ ಮೌಲ್ಯವನ್ನು ಮರುನಿಗದಿ ಮಾಡಿದೆ. ಷೇರುಗಳ ಮೌಲ್ಯವು ಜನವರಿ 24ಕ್ಕೂ ಮುಂಚಿನ ಮಟ್ಟಕ್ಕೆ ಬಂದಿಲ್ಲದೇ ಇರಬಹುದು, ಅದರೆ, ಹೊಸ ಮೌಲ್ಯದಲ್ಲಿ ಸ್ಥಿರತೆ ಕಂಡಿವೆ’ ಎಂದು ಹೇಳಿದೆ.

‘ಜನವರಿ 24ರ ನಂತರ ಚಿಲ್ಲರೆ ಹೂಡಿಕೆದಾರರು ಅದಾನಿ ಕಂಪನಿಗಳಲ್ಲಿ ಹೂಡಿಕೆ ಮಾಡುವುದು ಹೆಚ್ಚಾಗಿರುವುದು ಕಂಡುಬಂದಿದೆ. ಹಾಗಾಗಿ, ಹಿಂಡನ್‌ಬರ್ಗ ರಿಸರ್ಚ್‌ ವರದಿ ಸಲ್ಲಿಸಿದ ನಂತರದ ಅವಧಿಯಲ್ಲಿ ಭಾರತದ ಷೇರು ಮಾರುಕಟ್ಟೆಯಲ್ಲಿ ಅಸ್ಥಿರತೆ ಇತ್ತು ಎಂದು ಹೇಳಲಾಗುವುದಿಲ್ಲ’ ಎಂದೂ ಸಮಿತಿ ಅಭಿಪ್ರಾಯಪಟ್ಟಿದೆ.

ಕ್ಲೀನ್‌ಚಿಟ್‌ ನೀಡಿಲ್ಲ: ಕಾಂಗ್ರೆಸ್ ನವದೆಹಲಿ: ಅದಾನಿ ಸಮೂಹದ ಷೇರುಗಳ ಮೌಲ್ಯವನ್ನು ಕೃತಕವಾಗಿ ಏರಿಳಿತ ಮಾಡಲಾಗಿತ್ತು ಎಂಬ ಆರೋಪಗಳ ಕುರಿತು ತಜ್ಞರ ಸಮಿತಿ ಮಾಡಿರುವ ನಿರ್ಣಯಗಳು ಊಹಾತ್ಮಕವಾಗಿವೆ. ಆದರೆ ಸಮೂಹಕ್ಕೆ ಕ್ಲೀನ್‌ಚಿಟ್‌ ನೀಡಲಾಗಿದೆ ಎಂಬ ರೀತಿಯಲ್ಲಿ ವರದಿಯನ್ನು ತಿರುಚುವುದು ಸಲ್ಲ ಎಂದು ಕಾಂಗ್ರೆಸ್ ಶುಕ್ರವಾರ ಹೇಳಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್ ‘ಸುಪ್ರೀಂಕೋರ್ಟ್‌ ನೇಮಿಸಿದ ತಜ್ಞರ ಸಮಿತಿ ನಡೆಸುವ ತನಿಖೆ ಸೀಮಿತ ವ್ಯಾಪ್ತಿ ಹೊಂದಿದೆ. ‘ಮೋದಾನಿ’ ಹಗರಣದ ಸಂಪೂರ್ಣ ಸತ್ಯಾಸತ್ಯತೆ ಹೊರಬೇಕಾದರೆ ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ಅಗತ್ಯ ಎಂದು ಪಕ್ಷ ಹೇಳುತ್ತಲೇ ಬಂದಿದೆ’ ಎಂದಿದ್ದಾರೆ. ‘ಅದಾನಿ ಸಮೂಹವು ಸೆಬಿ ನಿಯಮಗಳನ್ನು ಉಲ್ಲಂಘಿಸಿದೆ ಎಂಬ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬರಲು ತಜ್ಞರ ಸಮಿತಿಗೆ ಸಾಧ್ಯವಾಗಿಲ್ಲ. ಸ್ಪಷ್ಟ ನಿರ್ಧಾರಕ್ಕೆ ಬರಲು ಆಗದ ಕಾರಣ ಸೆಬಿಯಿಂದ ಯಾವುದೇ ವೈಫಲ್ಯ ಕಂಡುಬಂದಿಲ್ಲ ಎಂಬ ನಿರ್ಣಯಕ್ಕೆ ಸಮಿತಿ ಬಂದಿದೆ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.