ADVERTISEMENT

ರಫೇಲ್ ರಹಸ್ಯ ದಾಖಲೆ ಕಳವು: ಸುಪ್ರೀಂ ಕೋರ್ಟ್‌ಗೆ ಕೇಂದ್ರ ಮಾಹಿತಿ

‘ಅರ್ಜಿದಾರರ ಕೈಯಲ್ಲಿ ಕಳವಾದ ದಾಖಲೆ’

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2019, 9:15 IST
Last Updated 6 ಮಾರ್ಚ್ 2019, 9:15 IST
   

ನವದೆಹಲಿ: ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ರಹಸ್ಯ ದಾಖಲೆಗಳು ಕಳವಾಗಿವೆ ಎಂದು ಕೇಂದ್ರ ಸರ್ಕಾರ ಬುಧವಾರ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ.

ರಹಸ್ಯ ದಾಖಲೆಗಳನ್ನು ಬಳಸಿಕೊಂಡು ಅರ್ಜಿದಾರರು ‘ಅಧಿಕೃತರಹಸ್ಯ ಕಾಯ್ದೆ’ಯನ್ನು ಉಲ್ಲಂಘಿಸುತ್ತಿದ್ದಾರೆ ಎಂದೂ ಸರ್ಕಾರ ಆರೋಪಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಇದನ್ನೂ ಓದಿ:ರಫೇಲ್‌ ಡೀಲ್‌: ಮೋದಿ ನಿರಾಳ

ADVERTISEMENT

‘ರಕ್ಷಣಾ ಇಲಾಖೆಯಿಂದ ಈ ದಾಖಲೆಗಳನ್ನು ಹಾಲಿ ಅಥವಾ ಮಾಜಿ ಉದ್ಯೋಗಿಗಳು ಕಳವು ಮಾಡಿರಬಹುದು. ಈ ದಾಖಲೆಗಳು ತುಂಬಾ ರಹಸ್ಯವಾಗಿರಬೇಕಾದವುಗಳಾಗಿದ್ದು ಸಾರ್ವಜನಿಕರಿಗೆ ಲಭ್ಯವಾಗಬಾರದು’ ಎಂದು ಅಟಾರ್ನಿ ಜನರಲ್ ಅವರು ಕೋರ್ಟ್‌ಗೆ ತಿಳಿಸಿದರು.

ಈ ವಿಚಾರವಾಗಿ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಪ್ರಶ್ನಿಸಿದರು. ಇದಕ್ಕುತ್ತರಿಸಿದಅಟಾರ್ನಿ ಜನರಲ್, ದಾಖಲೆಗಳು ಹೇಗೆ ಕಳವಾಗಿವೆ ಎಂಬ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದರು.

‘ರಹಸ್ಯ ದಾಖಲೆಗಳನ್ನು ಅರ್ಜಿಯ ಜತೆ ಸೇರಿಸಬಾರದು. ಇದು ಅಪರಾಧವಾಗುತ್ತದೆ. ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ಮರುಪರಿಶೀಲನಾ ಮತ್ತು ಸುಳ್ಳು ಅರ್ಜಿಗಳನ್ನು ವಜಾ ಮಾಡಬೇಕು’ ಎಂದು ಸುಪ್ರೀಂ ಕೋರ್ಟ್‌ಗೆ ಅಟಾರ್ನಿ ಜನರ್ ಮನವಿ ಮಾಡಿದರು.

ರಫೇಲ್ ಒಪ್ಪಂದಕ್ಕೆ ಸಂಬಂಧಿಸಿ2018ರ ಡಿಸೆಂಬರ್ 14ರಂದು ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಕ್ಲೀನ್‌ಚಿಟ್ ನೀಡಿತ್ತು. ಈ ತಿರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಕೆಯಾದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.