ADVERTISEMENT

ಗೌತಮ ಬುದ್ಧ ನಗರದಲ್ಲಿ ಸೆಕ್ಷನ್‌ 144; ಸಾರ್ವಜನಿಕವಾಗಿ ನಮಾಜ್, ಪೂಜೆಗೆ ನಿರ್ಬಂಧ

ಕೋವಿಡ್‌ ಹೆಚ್ಚಳ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಮೇ 2022, 2:15 IST
Last Updated 2 ಮೇ 2022, 2:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಗೌತಮ ಬುದ್ಧ ನಗರ: ಕೋವಿಡ್‌–19 ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಹಾಗೂ ಹಬ್ಬಗಳ ಆಚರಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮೇ 31ರ ವರೆಗೂ ಉತ್ತರ ಪ್ರದೇಶದ ಗೌತಮ ಬುದ್ಧ ನಗರದಲ್ಲಿ ಸೆಕ್ಷನ್‌ 144 ಸಿಆರ್‌ಪಿಸಿ (ನಿಷೇಧಾಜ್ಞೆ) ಜಾರಿ ಮಾಡಲಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಮೇ 1ರಿಂದ ಮೇ 31ರ ವರೆಗೂ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಯಾಗಿದೆ.

'ಸರ್ಕಾರದಿಂದ ಅನುಮತಿ ಪಡೆಯದೆಯೇ ಯಾವುದೇ ಪ್ರತಿಭಟನೆಗಳು ಅಥವಾ ಉಪವಾಸ ಸತ್ಯಾಗ್ರಹಗಳನ್ನು ನಡೆಸಲು ಅವಕಾಶ ಇರುವುದಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಪೂಜೆ ನಡೆಸುವುದು ಮತ್ತು ನಮಾಜ್‌ ಮಾಡುವುದನ್ನು ನಿರ್ಬಂಧಿಸಲಾಗಿದೆ' ಎಂದು ಗೌತಮ ಬುದ್ಧ ನಗರದ ಪೊಲೀಸ್‌ ಕಮಿಷನರೇಟ್‌ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಶಾಲೆಗಳಲ್ಲಿ ಪರೀಕ್ಷೆ ಸಂದರ್ಭದಲ್ಲಿ ಕೋವಿಡ್‌–19 ಮಾರ್ಗಸೂಚಿ ಅನುಸರಿಸಬೇಕು ಹಾಗೂ ಪರಸ್ಪರ ಅಂತರ ಕಾಯ್ದುಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಶಾಲೆಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ಅಂಗಡಿಯವರು ಸರ್ಕಾರದ ಅನುಮತಿ ಪಡೆಯದೆಯೇ ಧ್ವನಿವರ್ಧಕಗಳು ಅಥವಾ ಅಂಥ ಯಾವುದೇ ಸಾಧನಗಳನ್ನು ಮಾರಾಟ ಮಾಡಲು ಅಥವಾ ಬಾಡಿಗೆಗೆ ನೀಡುವುದನ್ನು ನಿರ್ಬಂಧಿಸಲಾಗಿದೆ.

ಭಾನುವಾರದವರೆಗೂ ದೇಶದಲ್ಲಿ ಕೋವಿಡ್‌–19 ಸಕ್ರಿಯ ಪ್ರಕರಣಗಳ ಸಂಖ್ಯೆ 19,092 ಇದೆ. ಒಟ್ಟು ಪ್ರಕರಣಗಳ ಪೈಕಿ ಶೇಕಡ 0.04ರಷ್ಟು ಪ್ರಕರಣಗಳು ಸಕ್ರಿಯವಾಗಿವೆ. ಉತ್ತರ ಪ್ರದೇಶದಲ್ಲಿ 1,538 ಪ್ರಕರಣಗಳು ಸಕ್ರಿಯವಾಗಿವೆ ಹಾಗೂ ಕೋವಿಡ್‌ ಕಾರಣಗಳಿಂದಾಗಿ ಈವರೆಗೂ 23,507 ಮಂದಿ ಸಾವಿಗೀಡಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.