ನವದೆಹಲಿ:ಸಲಿಂಗಕಾಮವನ್ನು ಅಪರಾಧ ಎಂದು ಪರಿಗಣಿಸುವ ಭಾರತೀಯ ದಂಡಸಂಹಿತೆ(ಐಪಿಸಿ) ಸೆಕ್ಷನ್ 377ರಿಂದ ಭಾರತೀಯ ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯಾಗುತ್ತದೆ. ಸಲಿಂಗಿಗಳು, ದ್ವಿಲಿಂಗಿಗಳು ಅಥವಾ ಲಿಂಗಪರಿವರ್ತನೆ ಮಾಡಿಕೊಂಡ (ಎಲ್‌ಜಿಬಿಟಿಕ್ಯು) ಸಮುದಾಯವರಿಗೆ ಇತರ ನಾಗರಿಕರು ಹೊಂದಿರುವಂತೆ ಸಮಾನ ಹಕ್ಕು ಪಡೆದಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
’ಅಭಿವ್ಯಕ್ತಿಯ ತಡೆಸಾವಿಗೆ ಸಮಾನ’ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಗುರುವಾರ ಅಭಿಪ್ರಾಯ ಪಟ್ಟರು. ಸೆಕ್ಷನ್ 377 ತರ್ಕವಿರದ ಮತ್ತುಸಮರ್ಥಿಸಲಾಗದ್ದುಎಂದರು.ಈ ಮೂಲಕ 2013ರಲ್ಲಿ ಸುಪ್ರೀಂ ಕೋರ್ಟ್ ಸಲಿಂಗಕಾಮ ಅಪರಾಧ ಎಂದು ನೀಡಿದ್ದ ತೀರ್ಪುಅಂತ್ಯಗೊಂಡಿದೆ. ಲೈಂಗಿಕ ನಿಲುವು ಸ್ವಾಭಾವಿಕ ಮತ್ತು ನೈಸರ್ಗಿಕವಾದುರು. ಯಾರ ಮೇಲೆ ಸೆಳೆತ ಉಂಟಾಗುತ್ತದೆ ಎಂಬುದು ಅವನು ಅಥವಾ ಅವಳ ನಿಯಂತ್ರಣದಲ್ಲಿರುವುದಿಲ್ಲ. ಯಾವುದೇ ರೀತಿಯ ನಿಯಂತ್ರಣವು ಅಭಿವ್ಯಕ್ತಿ ಸ್ವಾತಂತ್ರ್ಯದಉಲ್ಲಂಘನೆಯಾಗುತ್ತದೆ ಎಂದರು.
ಸಮ್ಮತಿಯ ಸಲಿಂಗಕಾಮಕ್ಕೆ ಸೆಕ್ಷನ್ 377 ಅನ್ವಯವಾಗುವುದಿಲ್ಲ. ಆದರೆ, ಅಸಮ್ಮತಿ ಮತ್ತು ಲೈಂಗಿಕ ತೃಪ್ತಿಗೆ ಕ್ರೂರವಾಗಿ ನಡೆದುಕೊಳ್ಳುವ ಸಂದರ್ಭಗಳಲ್ಲಿ ಇದರ ವ್ಯಕ್ತಿ ಇರಲಿದೆ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿ ಖಾನ್ವಿಲ್ಕರ್ ಅವರ ಜಂಟಿ ತೀರ್ಪಿನಲ್ಲಿ ಹೇಳಲಾಗಿದೆ.ಸಾಮಾಜಿಕ ತಾರತಮ್ಯದ ವಿರುದ್ಧ ಎಲ್‌ಜಿಬಿಟಿಕ್ಯು ಸಮುದಾಯವನ್ನು ಸಬಲಗೊಳಿಸುವ ಸಮಯ. ಸಾಮಾಜಿಕವಾಗಿ ಬೇರೂರಿರುವ ಪೂರ್ವಾಗ್ರಹಗಳಿಗೆ ಕೊನೆ ಹೇಳುವ ಸಮಯ. ಇದು ಅವರ ಘನತೆ, ಸಮಾನತೆ ಮತ್ತು ಸ್ವತಂತ್ರದ ಹಾದಿಯಾಗಿದ್ದು, ತನ್ನ ಆಯ್ಕೆಯನ್ನು ತಾನು ಮಾಡಿಕೊಳ್ಳಲು ಅವರಿಗೆ ಅವಕಾಶ ನೀಡಬೇಕು ಎನ್ನಲಾಗಿದೆ.
ನ್ಯಾಯಮೂರ್ತಿ ರೋಹಿಂಟನ್ ಎಫ್.ನಾರಿಮನ್, ಎ.ಎಮ್.ಖಾನ್ವಿಲ್ಕರ್, ಡಿ.ವೈ.ಚಂದ್ರಚೂಡ್ ಹಾಗೂ ಇಂದು ಮಲ್ಹೋತ್ರಾ ಅವರನ್ನು ಒಳಗೊಂಡಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಸಂವಿಧಾನ ಪೀಠ ತೀರ್ಪು ನೀಡಿದೆ.
(ಎಲ್‌ಜಿಬಿಟಿಕ್ಯು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ್ದ ನಗರದ "ಸೆಂಟರ್ ಫಾರ್ ಲಾ ಅಂಡ್ ಪಾಲಿಸಿ ರಿಸರ್ಚ್" ಮುಖ್ಯಸ್ಥೆ ಹಾಗೂ ವಕೀಲರಾದ ಜಯ್ನಾ ಕೊಠಾರಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ–ವಿಡಿಯೊ)
(ತೀರ್ಪಿಗೆ ಸಂಬಂಧಿಸಿದಂತೆ ಹೈಕೋರ್ಟ್ ವಕೀಲ ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಮಾನವ ಹಕ್ಕುಗಳ ಸಂಘಟನೆ ‘ಸಂಗಮ’ದ ಕಾನೂನು ಸಲಹೆಗಾರ ಬಿ.ಟಿ.ವೆಂಕಟೇಶ್ ಅವರ ಪ್ರತಿಕ್ರಿಯೆ– ವಿಡಿಯೊ)
ಅಕ್ಟೋಬರ್ 2ರಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನಿವೃತ್ತಿ ಹೊಂದಲಿದ್ದು, ಆಧಾರ್, ಶಬರಿಮಲೆ ದೇವಾಲಯಕ್ಕೆ ಮಹಿಳೆ ಪ್ರವೇಶ ಕುರಿತಾದ ಪ್ರಕರಣ ಸೇರಿದಂತೆ ಬಾಕಿಯಿರುವ ಪ್ರಮುಖ ಪ್ರಕರಣಗಳ ಪೈಕಿ ತೀರ್ಪು ಹೊರಬಂದಿರುವ ಮೊದಲ ಪ್ರಕರಣ ಇದಾಗಿದೆ.
ಸಮ್ಮತಿಯ ಸಲಿಂಗ ಲೈಂಗಿಕತೆಯು ಪರಿವರ್ತನೆಯೇ ಹೊರತು ಅಡ್ಡದಾರಿ ಅಲ್ಲ. ಸಲಿಂಗ ಲೈಂಗಿಕತೆಯನ್ನು ಅಪರಾಧ ಎಂದು ಪರಿಗಣಿಸುವ ಸೆಕ್ಷನ್ 377ರ ಸಿಂಧುತ್ವವನ್ನು ಪರಿಶೀಲಿಸುವಾಗ ಸಂವಿಧಾನವನ್ನು ಆಧಾರವಾಗಿ ಇಟ್ಟುಕೊಳ್ಳಲಾಗುವುದು. ಬಹುಸಂಖ್ಯಾತರ ನೈತಿಕ ನಿಲುವುಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ ಎಂದು ಈ ಹಿಂದಿನ ವಿಚಾರಣೆ ವೇಳೆ ಜುಲೈನಲ್ಲಿ ಸುಪ್ರೀಂ ಕೋರ್ಟ್ ಹೇಳಿತ್ತು.
ಸೆಕ್ಷನ್ 377 ಏನೆನ್ನುತ್ತದೆ?
ಸೆಕ್ಷನ್ 377, ನಿಸರ್ಗ ವಿರೋಧಿ ಅಪರಾಧಗಳಿಗೆ ಸಂಬಂಧಿಸಿದ್ದಾಗಿದೆ. ಯಾವುದೇ ಗಂಡು, ಹೆಣ್ಣು ಅಥವಾ ಪ್ರಾಣಿಯ ಜತೆಗೆ ನಿಸರ್ಗ ವಿರುದ್ಧವಾಗಿ ಸ್ವಯಂಪ್ರೇರಣೆಯಿಂದ ಲೈಂಗಿಕ ಸಂಪರ್ಕ ನಡೆಸುವುದು ಅಪರಾಧ ಎಂದು ಈ ಸೆಕ್ಷನ್ ಹೇಳುತ್ತದೆ. ಈ ಅಪರಾಧಕ್ಕೆ 10 ವರ್ಷ ಶಿಕ್ಷೆ ಮತ್ತು ದಂಡ ವಿಧಿಸುವುದಕ್ಕೆ ಅವಕಾಶ ಇದೆ.
ಸೆಕ್ಷನ್ ವಿರುದ್ಧದ ವಾದ ಏನು?
* ಸಂವಿಧಾನದ 15ನೇ ವಿಧಿ (ಲಿಂಗಾಧಾರಿತ ತಾರತಮ್ಯ), 14ನೇ ವಿಧಿ (ಸಮಾನತೆ), 19ನೇ ವಿಧಿಯ (ಸ್ವಾತಂತ್ರ್ಯ) ಉಲ್ಲಂಘನೆ
* ಸಲಿಂಗ ಕಾಮ ಸಹಜ ಲೈಂಗಿಕ ಪ್ರವೃತ್ತಿ ಎಂದು ಅಮೆರಿಕದ ಮನಶ್ಶಾಸ್ತ್ರೀಯ ಸಮಿತಿಗಳು ಹೇಳಿವೆ
ಸಲಿಂಗಕಾಮ: ಕಾನೂನು ಹೋರಾಟದ ಹಾದಿ
2001: ಇಬ್ಬರು ವಯಸ್ಕರ ನಡುವಣ ಸಮ್ಮತ ಸಲಿಂಗಕಾಮವನ್ನು ಕಾನೂನುಬದ್ಧಗೊಳಿಸಬೇಕು ಎಂದು ಮನವಿ ಮಾಡಿ ಸಲಿಂಗಿಗಳ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದ ಸ್ವಯಂ ಸೇವಾ ಸಂಸ್ಥೆ (ಎನ್‌ಜಿಒ) ನಾಜ್ ಫೌಂಡೇಷನ್‌ನಿಂದ ದೆಹಲಿ ಹೈಕೋರ್ಟ್‌ಗೆ ಅರ್ಜಿ
2004, ಸೆಪ್ಟೆಂಬರ್ 2: ಅರ್ಜಿ ವಜಾ ಮಾಡಿದ ಹೈಕೋರ್ಟ್. ಅದೇ ತಿಂಗಳು ಮರುಪರಿಶೀಲನಾ ಅರ್ಜಿ ಸಲ್ಲಿಸಿದ ಸಲಿಂಗಿಗಳ ಹಕ್ಕುಗಳ ಕಾರ್ಯಕರ್ತರು
ನವೆಂಬರ್ 3: ಪುನರ್ ಪರಿಶೀಲನಾ ಅರ್ಜಿ ತಿರಸ್ಕರಿಸಿದ ಹೈಕೋರ್ಟ್
ಡಿಸೆಂಬರ್: ಹೈಕೋರ್ಟ್ ಆದೇಶದ ವಿರುದ್ಧ ಸಲಿಂಗಿಗಳ ಹಕ್ಕುಗಳ ಕಾರ್ಯಕರ್ತರಿಂದ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ
ಏಪ್ರಿಲ್, 2006: ಆದ್ಯತೆಯ ಮೇರೆಗೆ ಅರ್ಜಿಯನ್ನು ಪರಿಗಣಿಸುವಂತೆ ಹೈಕೋರ್ಟ್‌ಗೆ ಸೂಚಿಸಿದ ಸುಪ್ರೀಂ ಕೋರ್ಟ್
ಸೆಪ್ಟೆಂಬರ್, 2008: ಸಲಿಂಗಕಾಮ ಅಪರಾಧವೇ ಅಲ್ಲವೇ ಎಂಬ ವಿಚಾರದಲ್ಲಿ ಕೇಂದ್ರ ಗೃಹ ಮತ್ತು ಆರೋಗ್ಯ ಸಚಿವಾಲಯಗಳ ನಡುವೆ ಭಿನ್ನಾಭಿಪ್ರಾಯ. ಪ್ರತಿಕ್ರಿಯೆ ನೀಡಲು ಹೆಚ್ಚುವರಿ ಸಮಯ ನೀಡಲು ಹೈಕೋರ್ಟ್‌ಗೆ ಕೇಂದ್ರ ಸರ್ಕಾರದಿಂದ ಮನವಿ. ಮನವಿ ತಿರಸ್ಕಾರ. ಅಂತಿಮ ವಾದ–ಪ್ರತಿವಾದ ಆರಂಭ
ಸೆಪ್ಟೆಂಬರ್ 25: ನೈತಿಕತೆಯ ಆಧಾರದಲ್ಲಿ ಸಲಿಂಗಕಾಮವನ್ನು ಅಪರಾಧ ಎಂದು ಘೋಷಿಸಿ ತಮ್ಮ ಮೂಲಭೂತಹಕ್ಕುಗಳನ್ನು ಸರ್ಕಾರಕ್ಕೆ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಸಲಿಂಗಿಗಳ ಹಕ್ಕುಗಳ ಕಾರ್ಯಕರ್ತರಿಂದ ವಾದ
ಸೆಪ್ಟೆಂಬರ್ 26: ಸಲಿಂಗಕಾಮ ಕಾನೂನಿನ ವಿಚಾರವಾಗಿ ಕೇಂದ್ರ ಗೃಹ ಮತ್ತು ಆರೋಗ್ಯ ಸಚಿವಾಲಯಗಳು ಭಿನ್ನ ನಿಲುವಿನ ಪ್ರಮಾಣಪತ್ರ ಸಲ್ಲಿಸಿದ್ದಕ್ಕೆ ಕೇಂದ್ರಕ್ಕೆ ಹೈಕೋರ್ಟ್ ತರಾಟೆ
‘ಸಲಿಂಗಕಾಮ ಅನೈತಿಕ. ಅದು ಅಪರಾಧ ಅಲ್ಲ ಎಂದು ಘೋಷಿಸಿದರೆ ಸಮಾಜವು ನೈತಿಕವಾಗಿ ಅಧಃಪತನಕ್ಕೆ ಇಳಿಯುತ್ತದೆ’ ಎಂದು ವಾದಿಸಿದ ಕೇಂದ್ರ
ಅಕ್ಟೋಬರ್ 15, 2008: ಸಲಿಂಗಕಾಮದ ಮೇಲೆ ನಿರ್ಬಂಧ ಹೇರಲು ಧರ್ಮಗ್ರಂಥಗಳನ್ನು ಆಧಾರವಾಗಿಟ್ಟುಕೊಂಡ ಕೇಂದ್ರ ಸರ್ಕಾರವನ್ನು ಮತ್ತೆ ತರಾಟೆಗೆ ತೆಗೆದುಕೊಂಡ ಹೈಕೋರ್ಟ್. ವಾದದ ಸಮರ್ಥನೆಗೆ ವೈಜ್ಞಾನಿಕ ವರದಿಗಳನ್ನು ಮಂಡಿಸುವಂತೆ ಸೂಚನೆ
ನವೆಂಬರ್: ‘ಈ ಬಗ್ಗೆ ನಿರ್ಧಾರ ಕೈಗೊಳ್ಳುವುದು ಸಂಸತ್ತಿನ ಹಕ್ಕು. ನ್ಯಾಯಾಂಗವು ಇಂತಹ ವಿಚಾರಗಳಲ್ಲಿ ಮಧ್ಯಪ್ರವೇಶಿಸಬಾರದು ಎಂದು ಕೇಂದ್ರದಿಂದ ಲಿಖಿತ ಹೇಳಿಕೆ
ನವೆಂಬರ್ 7: ತೀರ್ಪು ಕಾಯ್ದಿರಿಸಿದ ಹೈಕೋರ್ಟ್
ಜುಲೈ, 2009: ಸಲಿಂಗಿ ಕಾರ್ಯಕರ್ತರ ಅರ್ಜಿ ಮಾನ್ಯ ಮಾಡಿದ ದೆಹಲಿ ಹೈಕೋರ್ಟ್, ಸಲಿಂಗಕಾಮ ಅಪರಾಧ ಅಲ್ಲ ಎಂದು ತೀರ್ಪು
ಜುಲೈ: ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ದೆಹಲಿಯ ಜ್ಯೋತಿಷಿ. ತದ ನಂತರ ತೀರ್ಪನ್ನು ವಿರೋಧಿಸಿ ಹಲವರಿಂದ ಅರ್ಜಿ
ಫೆಬ್ರುವರಿ 15, 2012: ಅಂತಿಮ ಹಂತದ ದಿನಂಪ್ರತಿ ವಿಚಾರಣೆ ಆರಂಭಿಸಿದ ಸುಪ್ರೀಂ ಕೋರ್ಟ್
ಮಾರ್ಚ್ 27, 2012: ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್
ಡಿಸೆಂಬರ್ 11,2013: 2009ರ ದೆಹಲಿ ಹೈಕೋರ್ಟ್ ತೀರ್ಪು ವಜಾ ಮಾಡಿದ ‘ಸುಪ್ರೀಂ’. ಸಲಿಂಗಕಾಮ ಅಪರಾಧ ಎಂದು ಘೋಷಣೆ
ಡಿಸೆಂಬರ್ 20, 2013: ಸಲಿಂಗಕಾಮದ ವಿರುದ್ಧ ಹೇರಲಾಗಿರುವ ನಿರ್ಬಂಧವನ್ನು ವಾಪಸ್ ಪಡೆಯುವಂತೆ ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಮನವಿ.
ಜನವರಿ 28, 2014: ಕೇಂದ್ರದ ಅರ್ಜಿಯನ್ನು ವಜಾ ಮಾಡಿದ ‘ಸುಪ್ರೀಂ’
ಜೂನ್ 30, 2016: ಸಲಿಂಗಕಾಮವನ್ನು ಕಾನೂನುಬದ್ಧಗೊಳಿಸುವಂತೆ ಮನವಿ ಮಾಡಿ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಐವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗೆ ಕಳುಹಿಸಿದ ಇಬ್ಬರು ನ್ಯಾಯಮೂರ್ತಿಗಳ ನ್ಯಾಯಪೀಠ
ಆಗಸ್ಟ್ 24, 2017: ‘ಖಾಸಗಿತನವು ಮೂಲಭೂತ ಹಕ್ಕು’ ಎಂದು ಐತಿಹಾಸಿಕ ತೀರ್ಪು ನೀಡಿದ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠ. ‘ಲೈಂಗಿಕ ಪ್ರವೃತ್ತಿಯು ವ್ಯಕ್ತಿಯೊಬ್ಬನ ಖಾಸಗಿತನದ ಅತ್ಯಂತ ಪ್ರಮುಖ ಭಾಗ’ ಎಂದು ಪ್ರತಿಪಾದನೆ.
ಜನವರಿ 8, 2018: ಐಪಿಸಿ ಸೆಕ್ಷನ್ 377 ಅನ್ನು ಸುಪ್ರೀಂಕೋರ್ಟ್‌ನ ವಿಸ್ತೃತ ಪೀಠಕ್ಕೆ ಶಿಫಾರಸು ಮಾಡಿದ ಸುಪ್ರೀಂ ಕೋರ್ಟ್. ‘2013ರ ತೀರ್ಪನ್ನು ಮರುಪರಿಶೀಲಿಸುವ ಅಗತ್ಯವಿದೆ’ ಎಂದು ಹೇಳಿಕೆ
ಜುಲೈ 13, 2018:ಸಮ್ಮತಿಯ ಸಲಿಂಗಕಾಮ ಅಪರಾಧಮುಕ್ತಗೊಂಡರೆ, ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಮೇಲಿನ ಕಳಂಕ ಮತ್ತು ಅವರನ್ನು ತಾರತಮ್ಯದಿಂದ ನೋಡುವ ಮನೋಭಾವ ತನ್ನಿಂತಾನೆ ಬದಲಾಗುತ್ತದೆ ಎಂದು ಅಭಿಪ್ರಾಯಪಟ್ಟ ಸುಪ್ರೀಂ ಕೋರ್ಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.