ನವದೆಹಲಿ: ‘ಧರ್ಮನಿರಪೇಕ್ಷತೆ’ಯು ದೇಶದ ಸಂವಿಧಾನದ ಮೂಲ ಸ್ವರೂಪದ ಭಾಗ, ತಿದ್ದುಪಡಿಗೆ ಅವಕಾಶ ಇಲ್ಲದ ಸ್ಥಾನವನ್ನು ಇದಕ್ಕೆ ನೀಡಲಾಗಿದೆ ಎಂಬುದನ್ನು ಸ್ಪಷ್ಟಪಡಿಸುವ ಹಲವು ತೀರ್ಪುಗಳು ಇವೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ಸಮಾನತೆಯ ಹಕ್ಕನ್ನು, ಸಂವಿಧಾನದಲ್ಲಿ ಬಳಸಿರುವ ಭ್ರಾತೃತ್ವ ಪದವನ್ನು ಗಮನಿಸಿದಾಗ, ಅವುಗಳ ಜೊತೆಗೆ ಮೂಲಭೂತ ಹಕ್ಕುಗಳನ್ನು ಗಮನಿಸಿದಾಗ, ಧರ್ಮನಿರಪೇಕ್ಷತೆಯು ಸಂವಿಧಾನದ ಮೂಲ ಚಹರೆಗಳಲ್ಲಿ ಒಂದು ಎಂಬುದು ಸ್ಪಷ್ಟವಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಸಂಜಯ್ ಕುಮಾರ್ ಅವರು ಇದ್ದ ವಿಭಾಗೀಯ ಪೀಠವು ಹೇಳಿದೆ.
ಸಂವಿಧಾನದ ಪೀಠಿಕೆಯಲ್ಲಿ ಇರುವ ‘ಸಮಾಜವಾದಿ’ ಪದದ ವಿಚಾರವಾಗಿ ಪೀಠವು, ‘ಪಾಶ್ಚಿಮಾತ್ಯ ಪರಿಕಲ್ಪನೆಗಳನ್ನು ಆಧರಿಸಿದರೆ, ಅದು ಬೇರೆ ಅರ್ಥವನ್ನು ಧ್ವನಿಸುತ್ತದೆ. ಆದರೆ, ಅದನ್ನು ನಾವು ಅನುಕರಿಸಿಲ್ಲ. ಆಗಿರುವ ಬದಲಾವಣೆಗಳ ವಿಚಾರವಾಗಿ ನಾವು ಬಹಳ ಖುಷಿಪಡುತ್ತೇವೆ... ಅಂದರೆ, ಆರ್ಥಿಕವಾಗಿ ಆಗಿರುವ ಬೆಳವಣಿಗೆ’ ಎಂದು ಹೇಳಿದೆ.
ಬಿಜೆಪಿಯ ನಾಯಕ ಸುಬ್ರಮಣಿಯನ್ ಸ್ವಾಮಿ, ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಹಾಗೂ ಇತರರು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ. ಸಂವಿಧಾನದ ಪೀಠಿಕೆಯಲ್ಲಿ ‘ಸಮಾಜವಾದಿ’ ಮತ್ತು ‘ಧರ್ಮನಿರಪೇಕ್ಷ’ ಎಂಬ ಪದಗಳನ್ನು ಸೇರಿಸಿರುವುದನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.
‘ಪೀಠಿಕೆಯ ದಿನಾಂಕ 1949ರ ನವೆಂಬರ್ 26. ಆದರೆ ಅದಕ್ಕೆ ಸೇರಿಸಿರುವ ಪದಗಳು ಮೂಲಕ್ಕೆ ಹೊಂದಿಕೆ ಆಗುತ್ತಿಲ್ಲ. ಇದನ್ನು ಸರಿಪಡಿಸಬೇಕಿದೆ. ಹೊಸದಾಗಿ ಸೇರಿಸಿರುವುದನ್ನು ಪ್ರತ್ಯೇಕವಾಗಿ ತೋರಿಸಬೇಕಿತ್ತು’ ಎಂದು ಸ್ವಾಮಿ ವಾದಿಸಿದರು.
ಪೀಠಿಕೆಯನ್ನು ಎರಡು ಭಾಗಗಳನ್ನಾಗಿಸಬಹುದು. ಮೂಲ ದಿನಾಂಕದ್ದನ್ನು ಒಂದು ಭಾಗದಲ್ಲಿ, ನಂತರದ ದಿನಾಂಕದ್ದನ್ನು ಇನ್ನೊಂದು ಭಾಗದಲ್ಲಿ ನೀಡಬಹುದು ಎಂದು ಸ್ವಾಮಿ ಹೇಳಿದರು.
‘ಭಾರತವು ಧರ್ಮನಿರಪೇಕ್ಷ ಆಗುವುದು ನಿಮಗೆ ಬೇಕಿಲ್ಲವೇ’ ಎಂದು ಅರ್ಜಿಯ ವಿಚಾರಣೆ ವೇಳೆ ಪೀಠವು ಪ್ರಶ್ನಿಸಿತು. ‘ಭಾರತ ಧರ್ಮನಿರಪೇಕ್ಷ ಅಲ್ಲ ಎಂದು ಹೇಳುತ್ತಿಲ್ಲ. ಆದರೆ ಸಂವಿಧಾನ ತಿದ್ದುಪಡಿಯನ್ನು ನಾವು ಪ್ರಶ್ನಿಸುತ್ತಿದ್ದೇವೆ’ ಎಂದು ಅರ್ಜಿದಾರರಲ್ಲಿ ಒಬ್ಬರಾದ ಬಲರಾಮ್ ಸಿಂಗ್ ಪರ ವಕೀಲ ವಿಷ್ಣು ಶಂಕರ್ ಜೈನ್ ಹೇಳಿದರು.
‘ಸಮಾಜವಾದಿ’ ಎಂಬ ಪದವನ್ನು ಸೇರಿಸುವುದರಿಂದ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಮಿತಿ ಹೇರಿದಂತೆ ಆಗುತ್ತದೆ ಎಂಬ ಅಭಿಪ್ರಾಯ ಬಿ.ಆರ್. ಅಂಬೇಡ್ಕರ್ ಅವರದ್ದಾಗಿತ್ತು ಎಂದು ಜೈನ್ ತಿಳಿಸಿದರು.
ಸಮಾಜವಾದಿ ಅಂದರೆ, ಅವಕಾಶಗಳಲ್ಲಿ ಸಮಾನತೆ ಇರಬೇಕು ಹಾಗೂ ದೇಶದ ಸಂಪತ್ತಿನ ಹಂಚಿಕೆ ಸಮಾನವಾಗಿ ಇರಬೇಕು ಎಂದೂ ಅರ್ಥ ಮಾಡಿಕೊಳ್ಳಬಹುದು. ಈ ಪದಕ್ಕೆ ಪಾಶ್ಚಿಮಾತ್ಯರಲ್ಲಿ ಇರುವ ಅರ್ಥವನ್ನು ಮಾತ್ರವೇ ಪರಿಗಣಿಸಬೇಕಾಗಿಲ್ಲ ಎಂದು ಪೀಠವು ಹೇಳಿತು.
ಆದರೆ, ಈ ಪದಗಳನ್ನು ಸೇರಿಸಿದ 42ನೆಯ ತಿದ್ದುಪಡಿಯು ಸಂಸತ್ತಿನಲ್ಲಿ ಚರ್ಚೆಗೆ ಒಳಗಾಗಿರಲಿಲ್ಲ ಎಂದು ಜೈನ್ ವಾದಿಸಿದರು. ಈ ಪದಗಳನ್ನು ಸೇರಿಸುವಾಗ, ಅದು ಜನರ ಇಚ್ಛೆ ಆಗಿರಲಿಲ್ಲ ಎಂದೂ ಅವರು ಹೇಳಿದರು. ಅರ್ಜಿಗಳ ವಿಚಾರಣೆಯನ್ನು ಮುಂದೂಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.