ADVERTISEMENT

‘ಉಗ್ರರ ತಂತ್ರಗಳಿಗೆ ಪ್ರತಿತಂತ್ರ ಹೆಣೆಯುವುದರಲ್ಲಿ ವಿಫಲವಾದದ್ದೇ ದಾಳಿಗೆ ಕಾರಣ’

ಜಮ್ಮು ಮತ್ತು ಕಾಶ್ಮೀರದ ಹಿರಿಯ ಪೊಲೀಸ್ ಅಧಿಕಾರಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2019, 0:58 IST
Last Updated 15 ಫೆಬ್ರುವರಿ 2019, 0:58 IST
   

ಶ್ರೀನಗರ: ‘ಉಗ್ರರ ತಂತ್ರಗಳಿಗೆ ಪ್ರತಿತಂತ್ರಗಳನ್ನು ಹೆಣೆಯುವುದರಲ್ಲಿ ವಿಫಲವಾದದ್ದೇ ಗುರುವಾರ ಸಿಆರ್‌ಪಿಎಫ್‌ ಬಸ್‌ ಮೇಲಿನ ದಾಳಿಗೆ ಕಾರಣ’ ಎಂದು ಜಮ್ಮು ಮತ್ತು ಕಾಶ್ಮೀರದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಶ್ರೀನಗರ–ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಭದ್ರತಾ ಸಿಬ್ಬಂದಿ ಮೇಲೆಈಚಿನ ವರ್ಷಗಳಲ್ಲಿ ಹಲವು ದಾಳಿಗಳು ನಡೆದಿವೆ. ದಾಳಿಗಳನ್ನು ತಡೆಯಲು ಅಗತ್ಯ ಕ್ರಮಗಳನ್ನು ಸೂಚಿಸಲಾಗಿತ್ತು. ಆದರೆ ಅವು ಸರಿಯಾಗಿ ಅನುಷ್ಠಾನಕ್ಕೆ ಬಂದಿಲ್ಲ’ ಎಂದು ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರವನ್ನು ದೇಶದೊಂದಿಗೆ ಸಂಪರ್ಕ ಕಲ್ಪಿಸುವ ಏಕೈಕ ಹೆದ್ದಾರಿ ಇದು. ಶ್ರೀನಗರ ಮತ್ತು ಕಾಶ್ಮೀರದಲ್ಲಿರುವ ಭದ್ರತಾ ಸಿಬ್ಬಂದಿಗೆ ಸಕಲ ಸಾಮಗ್ರಿಗಳೂ ಈ ಹೆದ್ದಾರಿಯ ಮೂಲಕವೇ ಸರಬರಾಜು ಆಗಬೇಕು. ಹೀಗಾಗಿ ಇದು ಅತ್ಯಂತ ಮಹತ್ವದ ಹೆದ್ದಾರಿ. ಇಲ್ಲೇ ಭದ್ರತಾ ಸಿಬ್ಬಂದಿ ಮೇಲೆ ಹಲವು ದಾಳಿ ನಡೆದಿವೆ. ಇಂತಹ ದಾಳಿಗಳನ್ನು ತಡೆಯಲು ಭಿನ್ನ ಸ್ವರೂಪದ ಕ್ರಮ ತೆಗೆದುಕೊಳ್ಳಬೇಕು ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಉಗ್ರರ ಪ್ರಬಲ ಜಾಲ

ಹೆದ್ದಾರಿಯ ಈ ಭಾಗದ ಇಕ್ಕೆಲಗಳಲ್ಲಿ ಇರುವ ಪ್ರದೇಶಗಳಲ್ಲಿಲಷ್ಕರ್ ಎ ತಯಬಾ, ಹಿಜ್ಬುಲ್ ಮುಜಾಹಿದೀನ್ ಮತ್ತು ಜೈಷ್‌ ಎ ಮೊಹಮ್ಮದ್ ಉಗ್ರ ಸಂಘಟನೆಗಳ ಬಗ್ಗೆ ಒಲವು ಇರುವವರು ಹೆಚ್ಚು ಮಂದಿ ಇದ್ದಾರೆ. ಉಗ್ರ ಸಂಘಟನೆಗಳ ಜಾಲ ಇಲ್ಲಿ ಪ್ರಬಲವಾಗಿದೆ. ಈ ದಾಳಿಯನ್ನು ಮೂರೂ ಸಂಘಟನೆಗಳು ಜಂಟಿಯಾಗಿ ನಡೆಸಿರುವ ಸಾಧ್ಯತೆ ಇದೆ ಎಂದು ಭದ್ರತಾ ಸಂಸ್ಥೆಗಳು ಶಂಕಿಸಿವೆ.

ಸವಾಲು ಮತ್ತು ಲೋಪಗಳು

* ದಾಳಿ ನಡೆದಿರುವ ಪ್ರದೇಶದಲ್ಲಿ ಭದ್ರತೆ ಕೈಗೊಳ್ಳಲು ಇರುವ ಸವಾಲುಗಳು ಮತ್ತು ಭದ್ರತೆಯಲ್ಲಿ ಆಗುತ್ತಿರುವ ಲೋಪಗಳ ಬಗ್ಗೆ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ

* ಈ ಪ್ರದೇಶದಲ್ಲಿ ಹೆದ್ದಾರಿಯ ಎಲ್ಲಾ ಭಾಗಗಳ ಮೇಲೆ ಕಣ್ಗಾವಲು ನಡೆಸಲು ಅಗತ್ಯವಿರುವಷ್ಟು ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಿಲ್ಲ.ಎಲ್ಲಾ ಸಿ.ಸಿ.ಟಿ.ವಿ ಕ್ಯಾಮೆರಾಗಳು ಕೆಲಸ ಮಾಡುತ್ತಿಲ್ಲ. ಹೀಗಾಗಿ ಶೇ 100ರಷ್ಟು ಕಣ್ಗಾವಲು ಸಾಧ್ಯವಿಲ್ಲ

* ಭದ್ರತಾ ಸಿಬ್ಬಂದಿಯ ವಾಹನ ಪಡೆಗಳು ಹೋಗುವಾಗ, ಅವುಗಳ ಮಧ್ಯೆ ಯಾವುದೇ ನಾಗರಿಕ ವಾಹನಗಳು ನುಸುಳಬಾರದು ಎಂಬ ನಿರ್ಬಂಧವಿದೆ. ಭದ್ರತಾ ಸಿಬ್ಬಂದಿ ಭಾರಿ ಸಂಖ್ಯೆಯಲ್ಲಿ ಹೋಗುವಾಗ ಸಾರ್ವಜನಿಕರ ಸಂಚಾರವನ್ನು ಕೆಲಕಾಲ ತಡೆಯಲಾಗುತ್ತದೆ. ಹೀಗಿದ್ದೂ ಸ್ಫೋಟಕವಿದ್ದ ತಮ್ಮ ವಾಹವನ್ನು ಉಗ್ರರು ಸಿಆರ್‌ಪಿಎಫ್ ವಾಹನದತ್ತ ನುಗ್ಗಿಸಿದ್ದಾರೆ. ಇದು ಅತ್ಯಂತ ದೊಡ್ಡ ಭದ್ರತಾ ಲೋಪ

* ಈ ಭಾಗದಲ್ಲಿ ಹೆದ್ದಾರಿಯ ಜತೆಯಲ್ಲೇ ರೈಲುಮಾರ್ಗವೂ ಸಾಗುತ್ತದೆ. ಇವೆರಡೂ ಜೇಲಂ ನದಿಯ ದಂಡೆಯಲ್ಲೇ ಇವೆ. ಹೆದ್ದಾರಿಯ ಒಂದೆಡೆ ಪರ್ವತ ಪ್ರದೇಶವಿದ್ದರೆ, ಮತ್ತೊಂದೆಡೆ ಕಣಿವೆ ಇದೆ. ಮಾರ್ಗವು ಹಲವು ತಿರುವುಗಳಿಂದ ಕೂಡಿದೆ. ಉಗ್ರರು ಅವಿತುಕೊಳ್ಳಲು ಸಾಕಷ್ಟು ಅವಕಾಶವಿದೆ. ಹೀಗಾಗಿ ಅವರು ದಾಳಿ ನಡೆಸಿ, ಸುಲಭವಾಗಿ ಪರಾರಿಯಾಗುತ್ತಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.