ನವದೆಹಲಿ: 2001ರಲ್ಲಿ ನಡೆದ ಸಂಸತ್ ಭವನ ಮೇಲಿನ ದಾಳಿಗೆ 22 ವರ್ಷಗಳು ಪೂರೈಸಿದ ದಿನವೇ ಲೋಕಸಭೆಯ ಪ್ರೇಕ್ಷಕರ ಗ್ಯಾಲರಿಯಿಂದ ಸದನದೊಳಗೆ ನುಗ್ಗಿದ ಉತ್ತರ ಪ್ರದೇಶ ಮೂಲದ ಸಾಗರ್ ಶರ್ಮಾ ಎಂಬಾತನಿಗೆ ಮೈಸೂರು ಸಂಸದ ಪ್ರತಾಪ್ ಸಿಂಹ ಪಾಸ್ ನೀಡಲು ಶಿಫಾರಸು ಮಾಡಿದ್ದರು ಎಂದು ಪಿಟಿಐ ವರದಿ ಮಾಡಿದೆ.
ಬುಧವಾರ ನಡೆದ ಲೋಕಸಭಾ ಕಲಾಪ ವೀಕ್ಷಣೆಗಾಗಿ ವೀಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಸಾಗರ್ ಶರ್ಮಾ ಹಾಗೂ ಮನೋರಂಜನ್ ಎಂಬ ಇಬ್ಬರು ವ್ಯಕ್ತಿಗಳು ಮಧ್ಯಾಹ್ನ 1ರ ಸುಮಾರಿಗೆ ಏಕಾಏಕಿ ಸದನದೊಳಗೆ ನುಗ್ಗಿ, ಹಳದಿ ಬಣ್ಣದ ಹೊಗೆ ಸಿಂಪಡಿಸಿ, ‘ಸರ್ವಾಧಿಕಾರ ನಡೆಯುವುದಿಲ್ಲ’ ಎಂದು ಘೋಷಣೆ ಕೂಗಿದ್ದರು. ಇದೇ ಸಂದರ್ಭದಲ್ಲಿ ಸಂಸತ್ ಭವನದ ಹೊರಗೂ ಇಬ್ಬರು ಘೋಷಣೆ ಕೂಗಿದ್ದಾರೆ. ಮಹಿಳೆ ಸೇರಿದಂತೆ ಒಟ್ಟು ನಾಲ್ಕು ಜನರನ್ನು ಈವರೆಗೆ ವಶಕ್ಕೆ ಪಡೆಯಲಾಗಿದೆ.
ಘಟನೆ ಕುರಿತು ವಿವರಿಸಿದ ಸಂಸದ ಡ್ಯಾನಿಶ್ ಅಲಿ, ‘ಹಳದಿ ಬಣ್ಣದ ಹೊಗೆ ಸಿಂಪಡಿಸಿ ಘೋಷಣೆ ಕೂಗುತ್ತಿದ್ದ ಇಬ್ಬರನ್ನು ಸಂಸದರು ಹಾಗೂ ಭದ್ರತಾ ಸಿಬ್ಬಂದಿ ಹಿಡಿದರು. ಅದರಲ್ಲಿ ಒಬ್ಬನ ಹೆಸರು ಸಾಗರ್. ಆತನಿಗೆ ಮೈಸೂರಿನ ಸಂಸದ ಪ್ರತಾಪ್ ಸಿಂಹ ಪಾಸ್ ನೀಡಲು ಶಿಫಾರಸು ಮಾಡಿದ್ದಾರೆ’ ಎಂದು ತಿಳಿಸಿದ್ದಾರೆ.
‘ಸದನದೊಳಗೆ ನುಗ್ಗಿದ ವ್ಯಕ್ತಿಗಳಲ್ಲಿ ಒಬ್ಬ, ‘ನಾನೊಬ್ಬ ದೇಶಪ್ರೇಮಿ. ಇಲ್ಲಿ ಪ್ರತಿಭಟನೆ ಮಾಡಲು ಬಂದಿದ್ದೇನೆ’ ಎಂದು ಹೇಳಿದ ಎಂಬ ಸಂಗತಿಯನ್ನು ಸಂಸದರೊಬ್ಬರು ಹಂಚಿಕೊಂಡಿದ್ದಾರೆ. ಈ ಇಬ್ಬರನ್ನು ಸೆರೆಹಿಡಿದ ಸಂಸದರು ಥಳಿಸಿದ್ದಾರೆ. ನಂತರ ಇವರನ್ನು ಭದ್ರತಾ ಸಿಬ್ಬಂದಿಗೆ ಹಸ್ತಾಂತರಿಸಿದ್ದಾರೆ.
‘ಲೋಕಸಭೆಯ ಪ್ರೇಕ್ಷಕರ ಗ್ಯಾಲರಿಗೆ ಬಂದಿದ್ದ ಈ ಇಬ್ಬರು ತಮ್ಮ ಪಾದರಕ್ಷೆಯೊಳಗೆ ಹೊಗೆ ಉಗುಳುವ ಗ್ಯಾಸ್ ಕ್ಯಾನ್ ಇಟ್ಟುಕೊಂಡು ಬಂದಿದ್ದರು. ಇವರನ್ನು ಆರ್‌ಎಲ್‌ಪಿ ಸದಸ್ಯ ಹನುಮಾನ್ ಬೆನಿವಾಲ್ ಹಾಗೂ ಇತರರು ಹಿಡಿದರು’ ಎಂದು ಜೆಡಿಯು ಸಂಸದ ರಾಮ್‌ಪ್ರೀತ್ ಮಂಡಲ್ ಹೇಳಿದ್ದಾರೆ.
ಘಟನೆ ಸಂದರ್ಭದಲ್ಲಿ ಸಭಾಧ್ಯಕ್ಷರ ಪೀಠದಲ್ಲಿ ಬಿಜೆಪಿ ಸಂಸದ ರಾಜೇಂದ್ರ ಅಗರ್ವಾಲ್ ಇದ್ದರು. ಸಭೆಯನ್ನು ತಕ್ಷಣವೇ ಮುಂದೂಡಿದರು. ತನಿಖೆ ಮುಂದುವರಿಸಿರುವ ಪೊಲೀಸರು ಈ ನಾಲ್ವರು ಆಗಂತುಕರು ಯಾವ ಸಂಘಟನೆಗೆ ಸೇರಿದವರು ಎಂಬುದನ್ನು ಪತ್ತೆ ಮಾಡಲಾಗುತ್ತಿದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.