ಸುಕ್ಮಾ: ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ ಶುಕ್ರವಾರ ಬೆಳಿಗ್ಗೆ ಭದ್ರತಾ ಪಡೆಗಳ ಜೊತೆಗೆ ನಡೆದ ಗುಂಡಿನ ಚಕಮಕಿಯಲ್ಲಿ ಹತ್ತು ಮಂದಿ ನಕ್ಸಲರು ಹತರಾಗಿದ್ದಾರೆ. ಮೃತ ನಕ್ಸಲರಲ್ಲಿ ಮೂವರು ಮಹಿಳೆಯರು ಸೇರಿದ್ದಾರೆ.
‘ಭೇಜಿ ಠಾಣೆ ವ್ಯಾಪ್ತಿಯ ಅರಣ್ಯದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಗೆ ಸಿಬ್ಬಂದಿ ತೆರಳಿದ್ದಾಗ ಚಕಮಕಿ ನಡೆದಿದೆ. ಮೃತರಲ್ಲಿ ಇಬ್ಬರನ್ನು ಮದ್‌ಕಂ ಮಾಸಾ (42) ಮತ್ತು ಲಖ್ಮಾ ಮಾದ್ವಿ ಎಂದು ಗುರುತಿಸಲಾಗಿದೆ’ ಎಂದು ಐಜಿಪಿ ಪಿ.ಸುಂದರರಾಜ್ ತಿಳಿಸಿದ್ದಾರೆ.
ಈ ಇಬ್ಬರ ಸುಳಿವು ನೀಡಿದವರಿಗೆ ಕ್ರಮವಾಗಿ ₹ 8 ಲಕ್ಷ ಮತ್ತು ₹ 5 ಲಕ್ಷ ನಗದು ಬಹುಮಾನ ನೀಡಲಾಗುವುದು ಎಂದು ಘೋಷಿಸಲಾಗಿತ್ತು. ಮಾಸಾ ಪತ್ನಿ ದುಧಿ ಹುನಿ, ರಕ್ಷಕ ಕೊವಾಸಿ ಕೆಸ, ಮದಕಂ ಜಿತು, ಮದ್‌ಕಂ ಕೊಸಿ ಅವರು ಸಾವಿಗೀಡಾಗಿದ್ದಾರೆ. ಹತರಾಗಿರುವ ಇತರ ನಕ್ಸಲರ ಗುರುತು ಪತ್ತೆಯಾಗಬೇಕಿದೆ ಎಂದು ಐಜಿಪಿ ವಿವರಿಸಿದರು.
ಗುಂಡಿನ ಚಕಮಕಿಯಲ್ಲಿ ‘ಸಮವಸ್ತ್ರ’ದಲ್ಲಿದ್ದ 10 ನಕ್ಸಲರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಎಕೆ–47, ಐಎನ್‌ಎಸ್‌ಎಎಸ್ ರೈಫಲ್, ಗ್ರೆನೇಡ್ ಲಾಂಚರ್‌ಗಳು, ಸ್ವಯಂಚಾಲಿತ ರೈಫಲ್ (ಎಸ್‌ಎಲ್‌ಆರ್) ಸೇರಿ ಹಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದೂ ತಿಳಿಸಿದ್ದಾರೆ.
ಕೊಂಟಾ, ಕಿಸ್ತರಂ ಪ್ರದೇಶದ ಸಮಿತಿಗಳ ಮಾವೋವಾದಿಗಳು ಕೋರಜ್‌ಗುಡ, ನಗರಂ, ದಾಂಟೇಸಪುರ ಮತ್ತು ಭಂಡಾರ್‌ಪಡಾರ್ ಗ್ರಾಮ ವ್ಯಾಪ್ತಿಯ ಅರಣ್ಯದಲ್ಲಿದ್ದಾರೆ ಎಂಬ ಖಚಿತ ಸುಳಿವು ಆಧರಿಸಿ ಭದ್ರತಾ ಪಡೆಗಳು ಕಾರ್ಯಾಚರಣೆ ಕೈಗೊಂಡಿದ್ದವು ಎಂದರು.
ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ), ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಕಾರ್ಯಾಚರಣೆ ಕೈಗೊಂಡಿದ್ದವು ಎಂದು ಹೇಳಿದರು.
ಈ ಘಟನೆಯೊಂದಿಗೆ ಛತ್ತೀಸಗಢ ಬಸ್ತರ್ ವಲಯದಲ್ಲಿ ಈ ವರ್ಷ ಗುಂಡಿನ ಚಕಮಕಿಯಲ್ಲಿ ಹತರಾದವರ ನಕ್ಸಲರ ಸಂಖ್ಯೆ 207ಕ್ಕೆ ಏರಿದೆ. ಬಸ್ತರ್ ವಲಯವು ಸುಕ್ಮಾ ಸೇರಿದಂತೆ ಒಟ್ಟು ಏಳು ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿದೆ.
ಈ ವಲಯದಲ್ಲಿ ಇದೇ ವರ್ಷ ಇಲ್ಲಿಯವರೆಗೂ 787 ನಕ್ಸಲರನ್ನು ಬಂಧಿಸಲಾಗಿದೆ. 789 ಮಂದಿ ಶರಣಾಗಿದ್ದಾರೆ. 262 ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹತ್ಯೆ ಕಾರ್ಯಾಚರಣೆ ಯಶಸ್ವಿಯಾದ ಕಾರಣ ಭದ್ರತಾ ಪಡೆಗಳು ಸ್ಥಳೀಯ ಜನಪ್ರಿಯ ಗೀತೆಗಳ ಸಂಗೀತದ ಹಿನ್ನೆಲೆಯಲ್ಲಿ ಕುಣಿದು ಸಂಭ್ರಮಿಸಿದ್ದಾರೆ. ಈ ಕುರಿತ ವಿಡಿಯೊಗಳು ಜಾಲತಾಣದಲ್ಲಿ ಸಾಕಷ್ಟು ಹಂಚಿಕೆಯಾಗಿವೆ.
ಹತ್ಯೆ ಶ್ಲಾಘನೀಯ ಇದು ಶಾಂತಿಯ ಕಾಲ –ಸಿ.ಎಂ
ಸುಕ್ಮಾ: ನಕ್ಸಲರ ಹತ್ಯೆ ಮಾಡಿದ ಭದ್ರತಾ ಪಡೆಗಳ ಕಾರ್ಯ ಶ್ಲಾಘನೀಯ. ಇದು ಶಾಂತಿಯ ಕಾಲ. ಬಸ್ತರ್ ವಲಯ ಪ್ರಗತಿಯತ್ತ ಮರಳುತ್ತಿದೆ’ ಎಂದು ಸಿ.ಎಂ ವಿಷ್ಣುದೇವ್ ಸಾಯ್ ಪ್ರತಿಕ್ರಿಯಿಸಿದರು. ‘ನಕ್ಸಲ್ ಪಿಡುಗಿನ ನಿರ್ಮೂಲನೆಗೆ ಸರ್ಕಾರ ನೀತಿ ರೂಪಿಸುತ್ತಿದೆ. ಬಸ್ತರ್ ವಲಯದಲ್ಲಿ ಶಾಂತಿ ಸ್ಥಾಪನೆ ಮತ್ತು ಅಭಿವೃದ್ಧಿಗೆ ಒತ್ತು ನೀಡುವುದೇ ಆದ್ಯತೆ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. 2026ರ ಮಾರ್ಚ್ ವೇಳೆಗೆ ಛತ್ತೀಸಗಢದಲ್ಲಿ ನಕ್ಸಲ್ ಪಿಡುಗು ಅಂತ್ಯ ಗೊಳಿಸುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಗುರಿ ಸಾಧನೆಗಾಗಿ ಹಂತ ಹಂತವಾಗಿ ಕ್ರಮಜರುಗಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.