ADVERTISEMENT

ಚೀತಾಗಳ ಸಾವು ತಡೆಗೆ ಕ್ರಮ, ಪರಿಣತರಿಗೆ ಬಿಡುವುದು ಸೂಕ್ತ: ಸುಪ್ರೀಂ ಕೋರ್ಟ್‌

ಪಿಟಿಐ
Published 7 ಆಗಸ್ಟ್ 2023, 14:30 IST
Last Updated 7 ಆಗಸ್ಟ್ 2023, 14:30 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಚೀತಾಗಳ ಸಾವು ತಡೆಯಲು ಎಲ್ಲ ಪ್ರಯತ್ನಗಳನ್ನು ಕೈಗೊಳ್ಳಲಾಗಿದೆ ಎಂಬ ಕೇಂದ್ರ ಸರ್ಕಾರದ ಹೇಳಿಕೆಯನ್ನು ನಂಬದೇ ಇರಲು ಯಾವುದೇ ಕಾರಣ ಕಾಣುತ್ತಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

‘ಕೋರ್ಟ್‌ಗೆ ಈ ವಿಷಯದಲ್ಲಿ ಪರಿಣತಿ ಇಲ್ಲ. ಇದನ್ನು ಪರಿಣತರ ಪರಿಶೀಲನೆಗೆ ಬಿಡುವುದೇ ಸೂಕ್ತ’ ಎಂದು ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ, ಪಿ.ಎಸ್.ನರಸಿಂಹ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರಿದ್ದ ಪೀಠ ಸೋಮವಾರ ಅಭಿಪ್ರಾಯಪಟ್ಟಿತು.

ಆದರೆ, ಮೃತಪಟ್ಟಿರುವ ಚೀತಾಗಳ ಸಂಖ್ಯೆ ಕಡಿಮೆಯಲ್ಲ ಎಂಬ ಅಂಶವನ್ನು ಪರಿಗಣಿಸಿದ ಪೀಠವು, ‘ಚೀತಾಗಳ ಸಾವು ತಡೆಗೆ ಕೈಗೊಳ್ಳುವ ಕ್ರಮಗಳಿಗೆ ಪೂರಕವಾಗಿ ಕೋರ್ಟ್ ರಚಿಸಿರುವ ಪರಿಣತರ ತಂಡದ ಅಭಿಪ್ರಾಯಗಳನ್ನೂ ಪಡೆಯಬೇಕು‘ ಎಂದು ಸೂಚಿಸಿತು.

ADVERTISEMENT

‘ದಕ್ಷಿಣ ಆಫ್ರಿಕಾದ ನಮೀಬಿಯಾದಿಂದ 20 ಚೀತಾಗಳನ್ನು ಕರೆತರಲಾಗಿತ್ತು. ಇವುಗಳಲ್ಲಿ ಆರು ಮೃತ‍ಪಟ್ಟಿವೆ. ಚೀತಾಗಳ ಸಾವು ಕುರಿತಂತೆ ಮಾಧ್ಯಮಗಳಲ್ಲಿ ತಪ್ಪುವರದಿಗಳು ಪ್ರಕಟವಾಗಿವೆ’ ಎಂದು ಕೇಂದ್ರ ಸರ್ಕಾರ ನ್ಯಾಯಪೀಠಕ್ಕೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ತಿಳಿಸಿದೆ.

ಕೇಂದ್ರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಅವರು ಪ್ರಮಾಣಪತ್ರ ಸಲ್ಲಿಸಿದ್ದು, ‘ಹೆಚ್ಚುವರಿಯಾಗಿ ಮೃತಪಟ್ಟಿವೆ ಎಂದು ಉಲ್ಲೇಖಿಸಿರುವ 3 ಚೀತಾಗಳು, ನಮೀಬಿಯಾದಿಂದ ಕರೆತರಲಾಗಿದ್ದ ಚೀತಾಗಳ ಮರಿಗಳಾಗಿವೆ’ ಎಂದು ತಿಳಿಸಿದರು.

‘ಅಂತರರಾಷ್ಟ್ರೀಯ ಪರಿಣತರಿರುವ 11 ಜನರ ಸಮಿತಿ ರಚಿಸಲಾಗಿದೆ. ಚೀತಾಗಳ ಸಾವು ತಡೆಗೆ ಕೈಗೊಳ್ಳಬೇಕಾದ ಕ್ರಮಗಳನ್ನು ಕುರಿತು ಈ ಎಲ್ಲ ಪರಿಣತರನ್ನು ಸಂಪರ್ಕಿಸಿ ಅಭಿಪ್ರಾಯಗಳನ್ನು ಪಡೆಯಲಾಗಿದೆ’ ಎಂಬ ಕೇಂದ್ರದ ಹೇಳಿಕೆಯನ್ನು ನ್ಯಾಯಪೀಠ ಪರಿಗಣಿಸಿತು.

ಕೇಂದ್ರದ ಹೇಳಿಕೆಯನ್ನು ನಂಬದಿರಲು ಕಾರಣಗಳಿಲ್ಲ ಎಂದ ನ್ಯಾಯಪೀಠವು, ‘ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಚೀತಾಗಳ ಸಾವು ತಡೆಗೆ ಕೇಂದ್ರವು ಪರಿಣಾಮಕಾರಿ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಲೇವಾರಿ ಮಾಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.