ADVERTISEMENT

ಗೆಹಲೋತ್ ಸ್ಪರ್ಧೆ ಅನುಮಾನ: ಕುತೂಹಲ ಕೆರಳಿಸಿದ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಸೆಪ್ಟೆಂಬರ್ 2022, 9:49 IST
Last Updated 27 ಸೆಪ್ಟೆಂಬರ್ 2022, 9:49 IST
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌    

ನವದೆಹಲಿ:ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆಯಿಂದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಹೊರಗುಳಿಯುವ ಸಾಧ್ಯತೆ ಇದೆ. ಹೀಗಾಗಿ ಶಶಿ ತರೂರ್‌ ಅವರ ಎದುರು ಯಾರು ಕಣಕ್ಕಿಳಿಯಲಿದ್ದಾರೆ ಎಂಬ ವಿಚಾರ ಸಾಕಷ್ಟು ಕುತೂಹಲ ಕೆರಳಿಸಿದೆ. ಇದರ ನಡುವೆಯೇ ಅಖಿಲ ಭಾರತ ಕಾಂಗ್ರೆಸ್‌ ಸಮಿತಿ (ಎಐಸಿಸಿ) ಖಜಾಂಚಿ ಪವನ್‌ ಕುಮಾರ್‌ ಬನ್ಸಲ್‌ ಅವರು ನಾಮಪತ್ರದ ಅರ್ಜಿ ಸ್ವೀಕರಿಸಿದ್ದಾರೆ ಎಂದು ಪಕ್ಷದ ಕೇಂದ್ರ ಚುನಾವಣಾ ಪ್ರಾಧಿಕಾರದ ಮುಖ್ಯಸ್ಥ ಮಧುಸೂದನ್‌ ಮಿಸ್ತ್ರಿ ಮಂಗಳವಾರ ತಿಳಿಸಿದ್ದಾರೆ.

ಕೇರಳದ ತಿರುವನಂತಪುರ ಸಂಸದರಾಗಿರುವ ಶಶಿ ತರೂರ್‌ ಅವರು ಸೆಪ್ಪೆಂಬರ್ 30 ರಂದು ಬೆಳಗ್ಗೆ 11ಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಅವರ ಕಚೇರಿ ಮೂಲಗಳು ತಿಳಿಸಿರುವುದಾಗಿಯೂ ಮಿಸ್ತ್ರಿ ಮಾಹಿತಿ ನೀಡಿದ್ದಾರೆ.

ಮಿಸ್ತ್ರಿ ಅವರು ಇಂದುಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ನಿವಾಸಕ್ಕೆ ತೆರಳಿ,ಅವರ ಮತದಾರರ ಗುರುತಿನ ಚೀಟಿ ತಲುಪಿಸಿದ್ದಾರೆ. ಅದೇ ವೇಳೆ ಯಾರೆಲ್ಲನಾಮಪತ್ರದ ಅರ್ಜಿಗಳನ್ನು ಸ್ವೀಕರಿಸಿದ್ದಾರೆ ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ.

ADVERTISEMENT

ಬಳಿಕ ಪಕ್ಷದ ಪ್ರಧಾನ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಿಸ್ತ್ರಿ, ಬನ್ಸಾಲ್‌ ಸೋಮವಾರ ನಾಮಪತ್ರದ ಅರ್ಜಿ ಪಡೆದಿರುವ ಬಗ್ಗೆ ತಿಳಿಸಿದ್ದಾರೆ.

ಬನ್ಸಲ್‌ ಸ್ಪರ್ಧಿಸಲಿದ್ದಾರೆಯೇ ಅಥವಾ ಬೇರೆಯವರಿಗಾಗಿ ಅರ್ಜಿ ಸ್ವೀಕರಿಸಿದ್ದಾರೆಯೇ ಎಂದು ಕೇಳಿದ್ದಕ್ಕೆ ಪ್ರತಿಕ್ರಿಯಿಸಿರುವ ಮಿಸ್ತ್ರಿ, ಅವರು (ಬನ್ಸಲ್‌) ಅರ್ಜಿ ಪಡೆದದ್ದುಯಾರಿಗಾಗಿ ಎಂಬುದನ್ನು ತಿಳಿಸಿಲ್ಲ. ಪಕ್ಷದ ಯಾವ ಪ್ರತಿನಿಧಿ ಬೇಕಾದರೂ ಅರ್ಜಿ ಸ್ವೀಕರಿಸಲು ಅವಕಾಶವಿರುವುದರಿಂದ ಆ ಬಗ್ಗೆವಿಚಾರಿಸುವುದು ಕ್ರಮವಲ್ಲ ಎಂದು ಗುಟ್ಟು ಕಾಪಾಡಿಕೊಂಡಿದ್ದಾರೆ.

ಕಾಂಗ್ರೆಸ್‌ ಪಕ್ಷದ ಪ್ರಕಟಣೆ ಪ್ರಕಾರ ಸೆಪ್ಟೆಂಬರ್‌ 24 ರಿಂದ 30ರ ವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ. ಅಕ್ಟೋಬರ್‌ 1ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಹಿಂಪಡೆಯಲು ಅಕ್ಟೋಬರ್‌ 8 ಕೊನೇ ದಿನವಾಗಿದೆ. ಅದೇ ದಿನ (ಅ.8) ಸಂಜೆ 5ರ ವೇಳೆಗೆ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟವಾಗಲಿದೆ.

ಅಕ್ಟೋಬರ್‌ 17ರಂದು ಚುನಾವಣೆ ನಡೆಯಲಿದ್ದು, ಎರಡು ದಿನಗಳ ಬಳಿಕ (19ರಂದು) ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ.

ಗೆಹಲೋತ್ ಸ್ಪರ್ಧೆ ಅನುಮಾನ
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಅವರ ಹೆಸರು ಪಕ್ಷದ ಅಧ್ಯಕ್ಷೀಯ ಚುನಾವಣೆಗೆ ಬಲವಾಗಿ ಕೇಳಿ ಬಂದಿತ್ತು. ಆದರೆ, ಮುಂದಿನ ಸಿಎಂ ಆಯ್ಕೆ ವಿಚಾರವಾಗಿರಾಜಸ್ಥಾನ ಕಾಂಗ್ರೆಸ್‌ನಲ್ಲಿ ಗೊಂದಲಗಳು ಮೂಡಿವೆ.

ಸಚಿನ್‌ ಪೈಲಟ್‌ ಅವರನ್ನು ಮುಂದಿನ ಸಿಎಂ ಎಂದು ಘೋಷಿಸಲು ಹೈಕಮಾಂಡ್‌ ಒಲವು ತೋರಿದೆ ಎಂದು ವರದಿಯಾಗಿದ ಬೆನ್ನಲ್ಲೇ, ಗೆಹಲೋತ್‌ ಬಣದ ಶಾಸಕರು ಸಾಮೂಹಿಕ ರಾಜೀನಾಮೆ ನೀಡುವ ಬೆದರಿಕೆ ಹಾಕಿದ್ದಾರೆ.

ಅಷ್ಟಲ್ಲದೆ, ಹೈಕಮಾಂಡ್‌ ವೀಕ್ಷಕರನ್ನಾಗಿ ಕಳುಹಿಸಿದ್ದ ಅಜಯ್‌ ಮಾಕನ್‌ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಭಾನುವಾರ ಸಂಜೆ ಕರೆದಿದ್ದ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಗೆ ಹಾಜರಾಗದೆ ಪ್ರತ್ಯೇಕ ಸಭೆ ನಡೆಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ನಂತರವೇ ರಾಜಸ್ಥಾನ ಸಿಎಂ ಆಯ್ಕೆಯಾಗಬೇಕು, ರಾಜ್ಯದಲ್ಲಿ 2020ರಲ್ಲಿ ರಾಜಕೀಯ ಬಿಕ್ಕಟ್ಟು ಎದುರಾದ ಸಂದರ್ಭದಲ್ಲಿ ಸರ್ಕಾರಕ್ಕೆ ಬೆಂಬಲವಾಗಿ ನಿಂತಿದ್ದ ಶಾಸಕರಲ್ಲಿಯೇ ಯಾರನ್ನಾದರೂ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಬೇಕು ಹಾಗೂ ಕಾಂಗ್ರೆಸ್‌ ವೀಕ್ಷಕರು ಶಾಸಕರೊಂದಿಗೆ ಪ್ರತ್ಯೇಕ ಸಭೆ ನಡೆಸದೆ ಸಾಮೂಹಿಕವಾಗಿ ಚರ್ಚಿಸಬೇಕು ಎಂಬ ಷರತ್ತುಗಳನ್ನು ಹಾಕಿದ್ದಾರೆ.

ಇದರಿಂದಾಗಿ ಬಿಕ್ಕಟ್ಟು ತಲೆದೋರಿದ್ದು, ಗೆಹಲೋತ್‌ ಅವರನ್ನು ಚುನಾವಣೆಯಿಂದ ದೂರ ಇರಿಸುವ ಆಲೋಚನೆ ಸಾಧ್ಯತೆ ಇದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಅವರ ಬದಲು ಹಿರಿಯ ನಾಯಕಿ ಸೆಲ್ಜಾ ಕುಮಾರಿ ಅಥವಾ ರಾಹುಲ್ ಗಾಂಧಿ ಅವರ ಆಪ್ತರೆನಿಸಿಕೊಂಡಿರುವ ಕೆ.ಸಿ. ವೇಣುಗೋಪಾಲ್ ಅವರನ್ನು ಸ್ಪರ್ಧೆಗೆ ನಿಯೋಜಿಸುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.