ADVERTISEMENT

ಸ್ಪೀಕರ್ ಆದೇಶ ವಿರುದ್ಧ ಠಾಕ್ರೆ ಬಣದ ಅರ್ಜಿ; ವಿಚಾರಣೆಗೆ ಸುಪ್ರೀಂಕೋರ್ಟ್ ಒಪ್ಪಿಗೆ

ಪಿಟಿಐ
Published 5 ಫೆಬ್ರುವರಿ 2024, 11:53 IST
Last Updated 5 ಫೆಬ್ರುವರಿ 2024, 11:53 IST
<div class="paragraphs"><p>ಮುಖ್ಯಮಂತ್ರಿ ಏಕನಾಥ ಶಿಂದೆ ಹಾಗೂ&nbsp;ಉದ್ಧವ್ ಠಾಕ್ರೆ</p></div>

ಮುಖ್ಯಮಂತ್ರಿ ಏಕನಾಥ ಶಿಂದೆ ಹಾಗೂ ಉದ್ಧವ್ ಠಾಕ್ರೆ

   

ನವದೆಹಲಿ: ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್‌ ರಾಹುಲ್‌ ನಾರ್ವೇಕರ್‌ ಅವರು, ಮುಖ್ಯಮಂತ್ರಿ ಏಕನಾಥ ಶಿಂದೆ ಬಣವೇ ನಿಜವಾದ ಶಿವಸೇನಾ ಎಂದು ಆದೇಶಿಸಿರುವುದನ್ನು ಪ್ರಶ್ನಿಸಿ ಉದ್ಧವ್‌ ಠಾಕ್ರೆ ಬಣ ಸಲ್ಲಿಸಿರುವ ಮೇಲ್ಮನವಿಯನ್ನು ವಿಚಾರಣೆಗೆ ಪರಿಗಣಿಸಲು ಸುಪ್ರೀಂ ಕೋರ್ಟ್ ಸೋಮವಾರ ಸಮ್ಮತಿಸಿದೆ.

ಶಿಂದೆ ಅವರು, ಶಿವಸೇನಾ, ಕಾಂಗ್ರೆಸ್‌ ಮತ್ತು ಎನ್‌ಸಿಪಿ ನೇತೃತ್ವದ 'ಮಹಾ ವಿಕಾಸ್ ಆಘಾಡಿ' ಸರ್ಕಾರದ ವಿರುದ್ಧ ತಮ್ಮ ಬೆಂಬಲಿಗ ಶಾಸಕರೊಂದಿಗೆ 2022ರ ಜೂನ್‌ನಲ್ಲಿ ಬಂಡಾಯ ಸಾರಿದ್ದರು. ಬಳಿಕ, ಬಿಜೆಪಿಯೊಂದಿಗೆ ಸರ್ಕಾರ ರಚಿಸಿ ಮುಖ್ಯಮಂತ್ರಿಯಾಗಿದ್ದಾರೆ. ಪಕ್ಷದ ಮೇಲಿನ ಹಿಡಿತಕ್ಕಾಗಿ, ಉದ್ಧವ್‌ ಠಾಕ್ರೆ ಹಾಗೂ ಶಿಂದೆ ಬಣಗಳ ನಡುವೆ ಕಾನೂನು ಸಂಘರ್ಷ ನಡೆಯುತ್ತಿದೆ.

ADVERTISEMENT

ಸ್ಪೀಕರ್‌ ಅವರ ಆದೇಶವನ್ನು ಪ್ರಶ್ನಿಸಿ ಠಾಕ್ರೆ ಬಣ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ, ಮುಖ್ಯಮಂತ್ರಿ ಶಿಂದೆ ಹಾಗೂ ಅವರ ಬಣದ ಶಾಸಕರಿಗೆ ಜನವರಿ 22ರಂದು ಸುಪ್ರೀಂ ಕೋರ್ಟ್‌ ನೋಟಿಸ್‌ ನೀಡಿತ್ತು. ಅರ್ಜಿಯನ್ನು ಎರಡು ವಾರಗಳ ಬಳಿಕ ವಿಚಾರಣೆಗೆ ಪರಿಗಣಿಸಲಾಗುವುದು ಎಂದೂ ತಿಳಿಸಿತ್ತು.

ಅದರಂತೆ, 'ಮೇಲ್ಮನವಿಯನ್ನು ಇಂದು ವಿಚಾರಣೆಗೆ ಪರಿಗಣಿಸಬೇಕಿತ್ತು' ಎಂದು ಠಾಕ್ರೆ ಬಣದ ಪರ ವಕೀಲ ಕಪಿಲ್‌ ಸಿಬಲ್‌ ಅವರು, ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ, ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದೀವಾಲ್ ಮತ್ತು ಮನೋಜ್‌ ಮಿಶ್ರಾ ಅವರಿದ್ದ ಪೀಠದ ಎದುರು ವಾದಿಸಿದರು.

ಈ ವೇಳೆ ಸಿಜೆಐ ಅವರು, ಮೇಲ್ಮನವಿಯನ್ನು ವಿಚಾರಣೆಗೆ ಪರಿಗಣಿಸಲಾಗುವುದು ಎಂದು ಪ್ರತಿಕ್ರಿಯಿಸಿದರು.

ಸ್ಪೀಕರ್ ಆದೇಶಕ್ಕೆ ಟೀಕೆ
ಶಿಂದೆ ಹಾಗೂ ಅವರ ಬಣದ 16 ಶಾಸಕರ ಅನರ್ಹತೆಗೆ ಕೋರಿದ್ದ ಠಾಕ್ರೆ ಬಣದ ಮನವಿಯನ್ನು ರಾಜ್ಯಪಾಲ ನಾರ್ವೇಕರ್‌ ಅವರು ಜನವರಿ 10ರಂದು ತಿರಸ್ಕರಿಸಿದ್ದರು.

ಇದನ್ನು ಟೀಕಿಸಿರುವ ಠಾಕ್ರೆ ಬಣ, ಸ್ಪೀಕರ್‌ ಆದೇಶವು ಕಾನೂನು ಬಾಹಿರವಾಗಿದೆ. ಪಕ್ಷಾಂತರಿಗಳನ್ನು ಶಿಕ್ಷಿಸುವ ಬದಲು, ಅವರಿಗೆ ರಾಜಕೀಯ ಪಕ್ಷವನ್ನು ಹೊಂದುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಆರೋಪಿಸಿದೆ.

ಶಿಂದೆ ಅವರು 'ಅಸಾಂವಿಧಾನಿಕವಾಗಿ ಅಧಿಕಾರಕ್ಕೇರಿದ್ದಾರೆ' ಎಂದು ಆರೋಪಿಸಿರುವ ಠಾಕ್ರೆ ಬಣ, 'ಅಸಾಂವಿಧಾನಿಕ ಸರ್ಕಾರ' ಎಂದು ಕಿಡಿಕಾರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.