ನವದೆಹಲಿ: ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಬುಧವಾರ ತಡರಾತ್ರಿ ಅವರನ್ನು ದೆಹಲಿಯ ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದೀಗ ಅಡ್ವಾಣಿ ಅವರ ಆರೋಗ್ಯ ಸ್ಥಿರವಾಗಿದ್ದು, ನರರೋಗ ತಜ್ಞ ಡಾ. ವಿನಿತ್ ಸೂರಿ ಅವರು ಅಡ್ವಾಣಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ನಿನ್ನೆ( ಬುಧವಾರ) ರಾತ್ರಿ 9ಗಂಟೆ ಸುಮಾರಿಗೆ ಅಡ್ವಾಣಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಇತ್ತೀಚೆಗಷ್ಟೇ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಮೂತ್ರಶಾಸ್ತ್ರ ವಿಭಾಗದ ವೈದ್ಯರಿಂದ ಚಿಕಿತ್ಸೆ ಪಡೆದುಕೊಂಡಿದ್ದರು. ಅಡ್ವಾಣಿಯವರ ಅನಾರೋಗ್ಯದ ನಿರ್ದಿಷ್ಟ ಮಾಹಿತಿ ಲಭ್ಯವಾಗಬೇಕಿದೆ.
ಅಯೋಧ್ಯೆ ರಾಮಮಂದಿರ ಹೋರಾಟದ ಮೂಲಕ ಹಿಂದುತ್ವದ ಬದ್ಧ ಪ್ರತಿಪಾದಕ, 'ಲೋಹ ಪುರುಷ' ಎಂದೇ ಗುರುತಿಸಿಕೊಂಡಿದ್ದ ಅಡ್ವಾಣಿ 1927ರ ನವೆಂಬರ್ 8ರಂದು ಅವಿಭಜಿತ ಭಾರತದ ಕರಾಚಿಯಲ್ಲಿ (ಈಗಿನ ಪಾಕಿಸ್ತಾನ) ಜನಿಸಿದ್ದರು.
ಕರಾಚಿಯ ಸೇಂಟ್ ಪ್ಯಾಟ್ರಿಕ್ ಪ್ರೌಢಶಾಲೆಯಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ, ಮುಂದೆ ಸಿಂಧ್ ಪ್ರಾಂತ್ಯದ ಹೈದರಾಬಾದ್‌ನ ಡಿ.ಜಿ.ನ್ಯಾಷನಲ್ ಕಾಲೇಜಿನಲ್ಲಿ ಪದವಿ, ಬಳಿಕ ಬಾಂಬೆಯ ಸರ್ಕಾರಿ ಕಾಲೇಜಿನಲ್ಲಿ ಕಾನೂನು ಶಿಕ್ಷಣ ಪಡೆದರು. 1947ರಲ್ಲಿ ಆರ್‌ಎಸ್‌ಎಸ್ ಸೇರಿದ ಅವರು, ರಾಜಸ್ಥಾನದಲ್ಲಿ ಸಂಘದ ಉಸ್ತುವಾರಿ ವಹಿಸಿಕೊಂಡಿದ್ದರು.
ಅವರ ಸೇವೆಗಾಗಿ ಈ ಬಾರಿಯ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ ನೀಡಿ ಗೌರವಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.