ADVERTISEMENT

ಬಿಹಾರದ ಮಾಜಿ ಉಪ ಮುಖ್ಯಮಂತ್ರಿ, ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ನಿಧನ

ಅವರು ನವದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ

ಪಿಟಿಐ
Published 13 ಮೇ 2024, 17:46 IST
Last Updated 13 ಮೇ 2024, 17:46 IST
ಸುಶೀಲ್ ಕುಮಾರ್ ಮೋದಿ
ಸುಶೀಲ್ ಕುಮಾರ್ ಮೋದಿ   

ಪಟ್ನಾ: ಬಿಜೆಪಿಯ ಹಿರಿಯ ನಾಯಕ ಹಾಗೂ ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ (72) ಅವರು ನವದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ. ಅವರು ಕ್ಯಾನ್ಸರ್‌ಗೆ ತುತ್ತಾಗಿದ್ದರು.

ಮೋದಿ ಅವರು ಬಿಹಾರದ ಉಪ ಮುಖ್ಯಮಂತ್ರಿಯಾಗಿ 2005ರಿಂದ 2013ರವರೆಗೆ ಹಾಗೂ 2017ರಿಂದ 2020ರವರೆಗೆ ಕರ್ತವ್ಯ ನಿರ್ವಹಿಸಿದ್ದರು. ‘ಸುಶೀಲ್ ಕುಮಾರ್ ಮೋದಿ ಅವರ ಸಾವಿನ ಸುದ್ದಿ ಕೇಳಿ ಬಿಜೆಪಿ ಕುಟುಂಬವು ತೀವ್ರ ದುಃಖತಪ್ತವಾಗಿದೆ’ ಎಂದು ಪಕ್ಷದ ಬಿಹಾರ ಘಟಕವು ಹೇಳಿದೆ.

ಸುಶೀಲ್ ಕುಮಾರ್ ಮೋದಿ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರವು ಪಟ್ನಾದಲ್ಲಿ ಮಂಗಳವಾರ ನಡೆಯಲಿದೆ ಎಂದು ಪಕ್ಷದ ಮೂಲಗಳು ಹೇಳಿವೆ. ತಾವು ಕ್ಯಾನ್ಸರ್‌ನೊಂದಿಗೆ ಸೆಣೆಸಾಟ ನಡೆಸುತ್ತಿರುವುದಾಗಿ, ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ಭಾಗಿಯಾಗಲು ಸಾಧ್ಯವಿಲ್ಲ ಎಂಬುದಾಗಿ ಅವರು ಕಳೆದ ತಿಂಗಳು ಹೇಳಿದ್ದರು.

ADVERTISEMENT

ಸುಶೀಲ್ ಕುಮಾರ್ ಮೋದಿ ಅವರು ವಿಧಾನಸಭೆ, ವಿಧಾನ ಪರಿಷತ್ತು, ರಾಜ್ಯಸಭೆ ಹಾಗೂ ಲೋಕಸಭೆಯ ಸದಸ್ಯ ಆಗಿದ್ದರು. 1990ರಲ್ಲಿ ಪಟ್ನಾ ಸೆಂಟ್ರಲ್ ಕ್ಷೇತ್ರದಿಂದ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. 1996ರಿಂದ 2004ರವರೆಗೆ ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಆಗಿದ್ದರು.

2004ರಲ್ಲಿ ಭಾಗಲ್ಪುರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು. 2005ರಲ್ಲಿ ಲೋಕಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿ, ಬಿಹಾರದ ವಿಧಾನ ಪರಿಷತ್ ಸದಸ್ಯರಾದರು. ನಂತರ ಅವರನ್ನು ನಿತೀಶ್ ಕುಮಾರ್ ನೇತೃತ್ವದ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯನ್ನಾಗಿ ನೇಮಿಸಲಾಯಿತು. 2020ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದ ಮೋದಿ ಅವರು ಈ ವರ್ಷ ನಿವೃತ್ತರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.