ತಿರುವನಂತಪುರ: ಮುಸ್ಲಿಮರ ವಿರುದ್ಧ ಆಕ್ಷೇಪಾರ್ಹ ಮಾತುಗಳನ್ನು ಆಡಿದ್ದ ಕೇರಳದ ಮಾಜಿ ಶಾಸಕ ಪಿ.ಸಿ.ಜಾರ್ಜ್(70) ಅವರನ್ನು ಭಾನುವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೊಟ್ಟಾಯಂನ ಎರಟ್ಟುಪೆಟ್ಟದಲ್ಲಿರುವ ನಿವಾಸದಿಂದ ಜಾರ್ಜ್ ಅವರನ್ನು ಫೋರ್ಟ್ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಭಾಷಣದಲ್ಲಿ ಧಾರ್ಮಿಕ ವೈಷಮ್ಯ ಹರಡುವ ಮಾತುಗಳನ್ನು ಆಡಿರುವ ಬಗ್ಗೆ ಜಾರ್ಜ್ ವಿರುದ್ಧ ಪೊಲೀಸರು ಶನಿವಾರ ಪ್ರಕರಣ ದಾಖಲಿಸಿದ್ದರು.
ಮುಸ್ಲಿಮರು ನಡೆಸುವ ರೆಸ್ಟೊರೆಂಟ್‌ಗಳಿಗೆ ತೆರಳದಂತೆ ಕೇರಳದ ಮುಸ್ಲಿಮೇತರ ಜನರಿಗೆ ಜಾರ್ಜ್ ಆಗ್ರಹಿಸಿದ್ದರು. ಮುಸ್ಲಿಮರು ನಡೆಸುವ ವ್ಯಾಪಾರಗಳನ್ನೂ ಬಹಿಷ್ಕರಿಸುವಂತೆ ಕರೆ ನೀಡಿದ್ದರು.
ಅನಂತಪುರಿ ಹಿಂದೂ ಮಹಾ ಸಮ್ಮೇಳನ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದ್ದ ಅವರು, 'ಮುಸ್ಲಿಮರು ನಡೆಸುತ್ತಿರುವ ರೆಸ್ಟೊರೆಂಟ್‌ಗಳಲ್ಲಿ ನಿರ್ವೀಯಗೊಳಿಸುವಂತಹ ಅಂಶಗಳನ್ನು ಒಳಗೊಂಡಿರುವ ಟೀ ಮಾರಾಟ ಮಾಡಲಾಗುತ್ತಿದೆ. ಅದರಿಂದ ಜನರ ಸಂತಾನವೃದ್ಧಿ ಸಾಮರ್ಥ್ಯವನ್ನು ಕುಂದಿಸುವ ಮೂಲಕ ದೇಶದಲ್ಲಿ ನಿಯಂತ್ರಣ ಸಾಧಿಸುವ ಪ್ರಯತ್ನ ನಡೆಸಲಾಗಿದೆ' ಎಂದು ಆರೋಪಿಸಿದ್ದರು.
ರಾಜ್ಯದ ಪೊಲೀಸ್ ಮುಖಸ್ಥ ಅನಿಲ್ ಕಾಂತ್ ಅವರ ನಿರ್ದೇಶನಗಳ ಅನ್ವಯ ಕಾಂಗ್ರೆಸ್‌ನ ಮಾಜಿ ಮುಖಂಡ ಜಾರ್ಜ್ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಕ್ರಮಕೈಗೊಂಡಿದ್ದಾರೆ. ಐಪಿಸಿ ಸೆಕ್ಷನ್ 153–ಎ (ಎರಡು ಗುಂಪುಗಳ ನಡುವೆ ದ್ವೇಷ ಹರಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಅವರನ್ನು ತಿರುವನಂತಪುರಕ್ಕೆ ಕರೆತರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೂಂಜರ್ ವಿಧಾನಸಭೆ ಕ್ಷೇತ್ರವನ್ನು ಜಾರ್ಜ್ 33 ವರ್ಷ ಪ್ರತಿನಿಧಿಸಿದ್ದಾರೆ. 2021ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಅವರು ಸೋತಿದ್ದರು. ಆಡಳಿತಾರೂಢ ಸಿಪಿಐ(ಎಂ) ಮತ್ತು ವಿರೋಧ ಪಕ್ಷ ಕಾಂಗ್ರೆಸ್, ಜಾರ್ಜ್ ಅವರು ಆಡಿರುವ ಮಾತುಗಳನ್ನು ಖಂಡಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.