ನವದೆಹಲಿ: ಕೋವಿಡ್–19ನಿಂದ ಉಂಟಾಗಿರುವ ಆರ್ಥಿಕ ಸಂಕಷ್ಟ ಮಾನವ ಕಳ್ಳಸಾಗಣೆಗೆ ದಾರಿ ಮಾಡಿಕೊಡಬಹುದು ಎಂಬ ಆತಂಕವನ್ನು ಕೇಂದ್ರ ಗೃಹ ಸಚಿವಾಲಯವು ವ್ಯಕ್ತಪಡಿಸಿದೆ.
ಇದನ್ನು ತಡೆಯಲುಎಲ್ಲ ಜಿಲ್ಲೆಗಳಲ್ಲಿಮಾನವ ಕಳ್ಳಸಾಗಣೆ ತಡೆ ಘಟಕಗಳನ್ನು (ಎಟಿಎಚ್‌ಯು) ಸ್ಥಾಪಿಸಿ,ಪೊಲೀಸರಿಗೆವಿಶೇಷ ತರಬೇತಿ ನೀಡಬೇಕು. ಗಡಿ ಠಾಣೆಗಳ ವ್ಯಾಪ್ತಿಯಲ್ಲಿ ದುಷ್ಕರ್ಮಿಗಳ ಮೇಲೆ ನಿಗಾ ಇಡುವ ಮತ್ತು ಕಳ್ಳಸಾಗಣೆಗೆ ಗುರಿಯಾಗಿರುವ ಸಂತ್ರಸ್ತರು ಮತ್ತು ಮಕ್ಕಳನ್ನು ಗುರುತಿಸಲು ಪಂಚಾಯಿತಿಗಳ ಸಹಾಯವನ್ನೂ ಪಡೆಯಬೇಕು ಎಂದು ರಾಜ್ಯ ಸರ್ಕಾರಗಳಿಗೆ ಸಚಿವಾಲಯ ಪತ್ರ ಬರೆದಿದೆ.
ಅಪರಾಧಿಗಳು ಪರಿಸ್ಥಿತಿಯ ಲಾಭವನ್ನು ಪಡೆದು ಕಳ್ಳಸಾಗಣೆ ಮಾಡುವುದನ್ನು ತಡೆಯಲು ಎಲ್ಲ ಇಲಾಖೆಗಳು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಬೇಕು. ಇದಕ್ಕಾಗಿ ಪೊಲೀಸ್, ರೈಲ್ವೆ, ಕಾರ್ಮಿಕ ಇಲಾಖೆ ಮತ್ತು ಗಡಿ ರಕ್ಷಣಾ ಪಡೆಗಳಾದ ಬಿಎಸ್‌ಎಫ್ ಹಾಗೂ ಎಸ್‌ಎಸ್‌ಬಿಗಳು ಸಾಂಘಿಕವಾಗಿ ಕೆಲಸ ಮಾಡುವ ರೂಪುರೇಷೆ ಸಿದ್ಧಪಡಿಸಬೇಕು ಎಂದೂ ಹೇಳಿದೆ.
ಎಟಿಎಚ್‌ಯುಗಳನ್ನು ಎಲ್ಲ ಜಿಲ್ಲೆಗಳಲ್ಲಿ ತೆರೆಯಬೇಕು. 332 ಜಿಲ್ಲೆಗಳಲ್ಲಿ ಈ ಘಟಕಗಳ ಸ್ಥಾಪನೆಗೆ 2010–2019ರ ಅವಧಿಯಲ್ಲಿ ₹ 25.16 ಕೋಟಿ ಬಿಡುಗಡೆ ಮಾಡಲಾಗಿದೆ. ಇದೇ ಮಾರ್ಚ್‌ನಲ್ಲಿ ನಿರ್ಭಯಾ ನಿಧಿಯಿಂದ ₹ 100 ಕೋಟಿ ಬಿಡುಗಡೆ ಮಾಡಲಾಗಿದ್ದು, ಗಡಿ ಕಾವಲು ಪಡೆ ಕಾರ್ಯನಿರ್ವಹಿಸುವ 739 ಜಿಲ್ಲೆಗಳಿಗೂ ಈ ಯೋಜನೆಯನ್ನು ವಿಸ್ತರಿಸಲಾಗಿದೆ ಎಂದು ಮಾಹಿತಿ ನೀಡಿದೆ.
ಘಟಕಗಳಲ್ಲಿ ಪೊಲೀಸರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪರಿಣತರು ಇರಲಿದ್ದಾರೆ. ಕೂಲಿ ಕಾರ್ಮಿಕರಾಗಿ, ಕಳ್ಳಸಾಗಣಿಕೆ ಮತ್ತು ವೇಶ್ಯಾವಾಟಿಕೆಗಾಗಿ ದೊಡ್ಡ ಪ್ರಮಾಣದಲ್ಲಿ ಮಕ್ಕಳನ್ನು ಸಾಗಿಸಬಹುದು. ಇದನ್ನು ತಡೆಯಲು ವಾಸಿಸುವ ಜನರ ನೋಂದಣಿ ಮತ್ತು ಚಲನವಲನಗಳ ಮೇಲೆ ನಿಗಾ ಇಡುವಂತೆ ಪಂಚಾಯಿತಿಗಳ ಸಹಕಾರ ಪಡೆಯುವಂತೆ ಸಚಿವಾಲಯ ಸೂಚಿಸಿದೆ.
‘ಕಳ್ಳಸಾಗಣಿಕೆದಾರರು ಉದ್ಯೋಗ, ಆದಾಯ, ಜೀವನಕ್ರಮವನ್ನು ಉತ್ತಮಗೊಳಿಸುವ ಮತ್ತು ಕುಟುಂಬವನ್ನು ಸುಸ್ಥಿತಿಯಲ್ಲಿರಿಸುವ ಆಮಿಷಗಳನ್ನು ಒಡ್ಡಿ ಜನರ ದುರ್ಬಲತೆಯನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ’ ಎಂದು ರಾಜ್ಯಗಳಿಗೆ ಬರೆದಿರುವ ಪತ್ರದಲ್ಲಿ ಸಚಿವಾಲಯದ ಉಪ ಕಾರ್ಯದರ್ಶಿ ಅರುಣ್ ಸೋಬ್ತಿ ಎಚ್ಚರಿಸಿದ್ದಾರೆ.
‘ಕೌಟುಂಬಿಕ, ಭಾವನಾತ್ಮಕ ಮತ್ತು ಮಾನಸಿಕ ಹಿಂಸೆ, ಮನೆಯವರ ನಿರ್ಲಕ್ಷ್ಯ ಮೊದಲಾದವು ವ್ಯಕ್ತಿಯನ್ನು ಕಳ್ಳಸಾಗಣಿಕೆಗೆ ಗುರಿಯಾಗುವಂತೆ ಮಾಡುತ್ತದೆ. ಇಂಥ ದುರ್ಬಲ ಪರಿಸ್ಥಿತಿಯ ಲಾಭ ಪಡೆಯಲು ದುಷ್ಕರ್ಮಿಗಳು ಹವಣಿಸುತ್ತಿರುತ್ತಾರೆ. ವೇಶ್ಯಾವಾಟಿಕೆ, ಬಲವಂತದ ವಿವಾಹ, ದುಡಿಮೆ, ಭಿಕ್ಷಾಟನೆಗೆ ಇವರು ದೂಡುತ್ತಾರೆ. ಇದೀಗ ಕೋವಿಡ್–19 ಪಿಡುಗು ಇಡೀ ಜಗತ್ತನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಜನರ ಜೀವನದ ಮೇಲೆ ಇದು ಪರಿಣಾಮ ಬೀರುತ್ತಿದೆ’ ಎಂದೂ ಅವರು ಹೇಳಿದ್ದಾರೆ.
ಸೂಚನೆ ಮತ್ತು ಸಲಹೆಗಳು
* ಕಳ್ಳಸಾಗಣಿಕೆದಾರರನ್ನು ಗುರುತಿಸಲು ಮತ್ತು ಅವರ ಚಲನವಲನಗಳ ಮೇಲೆ ನಿಗಾ ಇಡಲು ಪೊಲೀಸರು ವಿಶೇಷ ಗುಪ್ತಚರ ಮತ್ತು ಕಣ್ಗಾವಲು ವಿಧಾನಗಳನ್ನು ಅಭಿವೃದ್ಧಿಪಡಿಸಬೇಕು
* ತೊಂದರೆಯಲ್ಲಿರುವ ಮಕ್ಕಳನ್ನು ಗುರುತಿಸಬೇಕು. ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ನಿಗಾ ಇಡಬೇಕು. ಬಸ್, ರೈಲ್ವೆ, ವಿಮಾನ ನಿಲ್ದಾಣ ಮತ್ತು ಗಡಿಭಾಗಗಳಲ್ಲಿ ಜಾಗರೂಕರಾಗಿರಲು ಪೊಲೀಸರಿಗೆ ತರಬೇತಿ ನೀಡಬೇಕು
* ರಾಜ್ಯದ ಗಡಿಯ ಠಾಣೆಗಳ ಕಾರ್ಯನಿರ್ವಹಿಸುವ ಪೊಲೀಸರು ತಪಾಸಣೆ ಮಾಡುವಾಗ ಮಕ್ಕಳ ವರ್ತನೆ ಮತ್ತು ವಯಸ್ಕರ ನಡವಳಿಕೆ ಮೇಲೆ ಕಣ್ಣಿಡಬೇಕು
* ಕಾಣೆಯಾದ, ನಾಪತ್ತೆಯಾದ ವ್ಯಕ್ತಿಗಳ ಮಾಹಿತಿಯನ್ನು ಸಂಗ್ರಹಿಸಲು ಮತ್ತು ಅವರನ್ನು ಹುಡುಕಲು ಸ್ಥಳೀಯ ಪಂಚಾಯಿತಿ, ಸಮುದಾಯದ ಮುಖಂಡರು, ಕಾನೂನು ಜಾರಿ ಸಂಸ್ಥೆಗಳು, ಜಿಲ್ಲಾಡಳಿತದ ಸಹಾಯವನ್ನು ಪಡೆಯಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.