ನವದೆಹಲಿ: ‘ದೇಶವೊಂದನ್ನು ಕಟ್ಟುವ ವಿಚಾರ ವೆಬ್‌ಸೈಟ್ ಮಾಡಿದಂತೆ ಅಲ್ಲ. ದೇಶ ಕಟ್ಟುವುದೇ ಬೇರೆ, ವೆಬ್‌ಸೈಟ್ ಮಾಡುವುದೇ ಬೇರೆ’ ಎನ್ನುವ ಮೂಲಕ ಹೊಸ ದೇಶ ಕಟ್ಟಿಕೊಳ್ಳುವ ಸ್ವಯಂ ಘೋಷಿಸಿ ದೇವಮಾನವನಿತ್ಯಾನಂದ ಅವರ ಘೋಷಣೆಯನ್ನು ಕೇಂದ್ರ ಸರ್ಕಾರ ಗೇಲಿ ಮಾಡಿದೆ.
ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿರುವ ವಿದೇಶಾಂಗ ಇಲಾಖೆಯ ವಕ್ತಾರ ರವೀಶ್ ಕುಮಾರ್, ‘ಸರ್ಕಾರ ಈಗಾಗಲೇ ನಿತ್ಯಾನಂದಅವರ ಪಾಸ್‌ಪೋರ್ಟ್ ರದ್ದುಗೊಳಿಸಿದೆ. ಪೊಲೀಸರ ನಿರಾಪೇಕ್ಷೇಣೆ ಇಲ್ಲದೇ ಇರುವುದರಿಂದ ಪಾಸ್‌ಪೋರ್ಟ್‌ಗೆ ಅವರು ಸಲ್ಲಿಸಿದ್ದ ಅರ್ಜಿನ್ನು ನಿರಾಕರಿಸಿದ್ದೇವೆ. ಅವರನ್ನುಪತ್ತೆ ಹಚ್ಚುವ ಕಾರ್ಯವನ್ನು ಕೇಂದ್ರ ಚುರುಕುಗೊಳಿಸಿದೆ. ಸದ್ಯ ನಿತ್ಯಾನಂದ ಎಲ್ಲಿದ್ದಾರೆ ಎಂದು ಊಹಿಸಿ ಹೇಳುವುದು ಕಷ್ಟ. ಅದು ವಿದೇಶಾಂಗ ಇಲಾಖೆ ಕೆಲಸವೂ ಅಲ್ಲ. ನಿತ್ಯಾನಂದನ ಬಗ್ಗೆ ಮಾಹಿತಿ ನೀಡುವಂತೆ ನಾವು ವಿದೇಶದ ಸರ್ಕಾರಗಳನ್ನು ಕೋರಿದ್ದೇವೆ. ಮಾಹಿತಿಗಾಗಿ ಕಾಯುತ್ತಿದ್ದೇವೆ’ ಎಂದು ರವೀಶ್ ಕುಮಾರ್ ಹೇಳಿದ್ದಾರೆ.
ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ನಿತ್ಯಾನಂದ, ಹೊಸ ದೇಶ ಕಟ್ಟುವ ಘೋಷಣೆಯೊಂದಿಗೆ ಕಳೆದೆರಡು ದಿನಗಳಿಂದ ಹೆಚ್ಚು ಪ್ರಚಲಿತದಲ್ಲಿದ್ದಾರೆ. ಕೈಲಾಸ ಎಂಬ ಹೆಸರಿನಲ್ಲಿ ಹಿಂದೂ ರಾಷ್ಟ್ರ ಕಟ್ಟುವುದಾಗಿ ಕೈಲಾಸ ಒಆರ್‌ಜಿ ಎಂಬ ವೆಬ್‌ಸೈಟ್‌ನಲ್ಲಿ ಘೋಷಿಸಿಕೊಂಡಿರುವಅವರು, ತಮ್ಮ ದೇಶಕ್ಕೆ ಪ್ರಧಾನಿ, ಮಂತ್ರಿ ಮಂಡಲ ಇರಲಿದೆ ಎಂದೂ ತಿಳಿಸಿದ್ದಾರೆ. ಎಲ್ಲೆಗಳಿಲ್ಲದ ಹಿಂದೂ ರಾಷ್ಟ್ರ ತಮ್ಮದು ಎಂದೂ ನಿತ್ಯಾನಂದ ಹೇಳಿಕೊಂಡಿದ್ದರು. ತಮ್ಮ ದೇಶಕ್ಕೆ ಧ್ವಜ, ಚಿಹ್ನೆಯನ್ನೂ ರಚಿಸಿಕೊಂಡಿದ್ದರು.
ಇನ್ನಷ್ಟು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.