ADVERTISEMENT

Jharkhand: ಮೂವರು ಮಾಜಿ ಶಾಸಕರು ಸೇರಿ ಬಿಜೆಪಿಯ ಹಲವು ನಾಯಕರು ಜೆಎಂಎಂ ಸೇರ್ಪಡೆ

ಪಿಟಿಐ
Published 22 ಅಕ್ಟೋಬರ್ 2024, 5:40 IST
Last Updated 22 ಅಕ್ಟೋಬರ್ 2024, 5:40 IST
ಹೇಮಂತ್ ಸೊರೇನ್ –ಪಿಟಿಐ ಚಿತ್ರ
ಹೇಮಂತ್ ಸೊರೇನ್ –ಪಿಟಿಐ ಚಿತ್ರ   

ರಾಂಚಿ: ಜಾರ್ಖಂಡ್ ವಿಧಾನಸಭೆ ಚುನಾವಣೆ ಘೋಷಣೆಯಾದ ಬಳಿಕ ಜಾರ್ಖಂಡ್‌ನಲ್ಲಿ ಪಕ್ಷಾಂತರ ಪರ್ವ ಜೋರಾಗಿದೆ. ಮೂವರು ಮಾಜಿ ಶಾಸಕರು ಸೇರಿ ಬಿಜೆಪಿಯ ಹಲವು ನಾಯಕರು ಜಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎಂ) ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಲೂಯಿಸ್ ಮರಂಡಿ, ಕುನಾಲ್ ಸರಂಗಿ ಮತ್ತು ಲಕ್ಷ್ಮಣ್ ತುಡು ಪಕ್ಷ ಬದಲಿಸಿದ ಮಾಜಿ ಶಾಸಕರು. ಮೂರು ಬಾರಿಯ ಬಿಜೆಪಿ ಶಾಸಕ ಕೇದಾರ್ ಹಜರಾ, ಎಜೆಎಎಸ್‌ಯು ಪಕ್ಷದ ನಾಯಕ ಉಮಾಕಾಂತ್ ರಜಕ್ ಜೆಎಂಎಂ ಸೇರ್ಪಡೆಯಾಗಿ ಎರಡು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ.

‘ನಾವು ಇಂದು ಜೆಎಂಎಂ ಪಕ್ಷಕ್ಕೆ ಸೇರ್ಪಡೆಯಾದೆವು’ಎಂದು ಸರಂಗಿ ಹೇಳಿದ್ದಾರೆ.

ADVERTISEMENT

ದುಮ್ಕಾ ಕ್ಷೇತ್ರದಲ್ಲಿ 2014ರ ಚುನಾವಣೆಯಲ್ಲಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ವಿರುದ್ಧ 5,262 ಮತಗಳ ಅಂತರದಿಂದ ಬಿಜೆಪಿಯ ಮಾಜಿ ಶಾಸಕರಾದ ಲೂಯಿಸ್ ಮರಾಂಡಿ ಅವರು ಗೆಲುವು ಸಾಧಿಸಿದ್ದರು.

'ಬಿಜೆಪಿಯ ಮಾಜಿ ಉಪಾಧ್ಯಕ್ಷ ಮತ್ತು ಹಿರಿಯ ನಾಯಕ ಲೂಯಿಸ್ ಮರಾಂಡಿ ಅವರನ್ನು ಜೆಎಂಎಂ ಕುಟುಂಬಕ್ಕೆ ನಾವು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ ಎಂದು ಸೋರೆನ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

2019 ರಲ್ಲಿ ಸೊರೇನ್ 13,188 ಮತಗಳ ಅಂತರದಲ್ಲಿ ದುಮ್ಕಾ ಕ್ಷೇತ್ರದಲ್ಲಿ ಗೆದ್ದಿದ್ದರು. ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಅವರು ಬರ್ಹೈತ್ ಕ್ಷೇತ್ರವನ್ನು ಉಳಿಸಿಕೊಂಡಿದ್ದರು. ಬಳಿಕ ನಡೆದ ಉಪಚುನಾವಣೆಯಲ್ಲೂ ಅವರ ಸಹೋದರ ಬಸಂತ್ ಸೊರೇನ್ ಅವರು ಮರಾಂಡಿ ಅವರನ್ನು 6,842 ಮತಗಳಿಂದ ಸೋಲಿಸಿದ್ದರು.

ಲೂಯಿಸ್ ಮರಾಂಡಿ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಾಬುಲಾಲ್ ಮರಾಂಡಿ ಅವರಿಗೆ ಬರೆದ ಪತ್ರದಲ್ಲಿ ತಮ್ಮಂತಹ ಬದ್ಧತೆಯ ಕಾರ್ಯಕರ್ತರ ನಿರ್ಲಕ್ಷ್ಯ ಮತ್ತು ಬಿಜೆಪಿಯಲ್ಲಿ ಹೆಚ್ಚುತ್ತಿರುವ ಗುಂಪುಗಾರಿಕೆಯ ಬಗ್ಗೆ ಗಮನ ಸೆಳೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸ್ವಾತಂತ್ರ್ಯದ ನಂತರ 2014ರಲ್ಲಿ ಜೆಎಂಎಂ ಭದ್ರಕೋಟೆ ಎಂದು ಪರಿಗಣಿಸಲಾದ ದುಮ್ಕಾವನ್ನು ಬಿಜೆಪಿ ಮೊದಲ ಬಾರಿಗೆ ಹೇಗೆ ಗೆದ್ದಿದೆ ಎಂಬುದನ್ನು ಮರೆಯಬೇಡಿ ಎಂದು ಅವರು ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.