ಹಲ್ದವಾನಿ: ಕೋರ್ಟ್ ಆದೇಶದಂತೆ ಉತ್ತರಾಖಂಡದ ಹಲ್ದವಾನಿ ನಗರದಲ್ಲಿ ಅಕ್ರಮವಾಗಿ ಕಟ್ಟಲಾಗಿದ್ದ ಮದರಸಾ ಮತ್ತು ಮಸೀದಿಯನ್ನು ತೆರವುಗೊಳಿಸಿದ ಬೆನ್ನೆಲ್ಲೇ ಹಿಂಸಾಚಾರ ಭುಗಿಲೆದ್ದಿದೆ.
ಸ್ಥಳೀಯರು, ವಾಹನ ಮತ್ತು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ, ಕಲ್ಲು ತೂರಾಟ ನಡೆಸಿದ್ದು, ಘಟನೆಯಲ್ಲಿ 60 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಹಲ್ದವಾನಿ ನಗರದಾದ್ಯಂತ ಗುರುವಾರ ಕರ್ಫ್ಯೂ ಹೇರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿಂಸಾಚಾರದಲ್ಲಿ ಗಾಯಗೊಂಡವರಲ್ಲಿ ಹೆಚ್ಚಿನವರು ಪೊಲೀಸ್ ಸಿಬ್ಬಂದಿ. ಉಳಿದವರು ಸ್ಥಳೀಯ ಮದರಸಾವನ್ನು ನೆಲಸಮಗೊಳಿಸುವಲ್ಲಿ ಭಾಗಿಯಾಗಿರುವ ಪುರಸಭೆಯ ಕಾರ್ಮಿಕರು. ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ಕುರಿತು ಡೆಹರಾಡೂನ್‌ನಲ್ಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಮುಖ್ಯ ಕಾರ್ಯದರ್ಶಿ ರಾಧಾ ರತುರಿ ಮತ್ತು ಡಿಜಿಪಿ ಅಭಿನವ್ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ್ದಾರೆ.
ಬಳಿಕ ಸುದ್ದಿಗರಾರೊಂದಿಗೆ ಮಾತನಾಡಿದ ಅವರು, ‘ಆಡಳಿತದ ತಂಡವೊಂದು ನ್ಯಾಯಾಲಯದ ಆದೇಶಕ್ಕೆ ಅನುಸಾರವಾಗಿ ಅತಿಕ್ರಮಣ ಕಟ್ಟಡ ತೆರವುಗೊಳಿಸಲು ಬನ್‌ಭೂಲ್‌ಪುರ ಪ್ರದೇಶಕ್ಕೆ ಹೋಗಿತ್ತು. ಆದರೆ ಅಲ್ಲಿಯ ಜನ ಗಲಾಟೆ ನಡೆಸಿದ್ದು, ಹಿಂಸಾಚಾರ ಸ್ವರೂಪ ಪಡೆದಿದೆ. ಸದ್ಯ ಸ್ಥಳದಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಹೆಚ್ಚುವರಿ ಪೊಲೀಸ್ ಮತ್ತು ಅರೆ ಸೇನಾ ಪಡೆಗಳನ್ನು ನಿಯೋಜಿಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.