ADVERTISEMENT

ದೆಹಲಿಯ ವಿವಿಧೆಡೆ ವಿದ್ಯುತ್‌ ಸ್ಥಗಿತ: ಜನ ಹೈರಾಣು

​ಪ್ರಜಾವಾಣಿ ವಾರ್ತೆ
Published 11 ಜೂನ್ 2024, 19:32 IST
Last Updated 11 ಜೂನ್ 2024, 19:32 IST
.
.   

ನವದೆಹಲಿ: ಉತ್ತರ ಪ್ರದೇಶದ ಮಂಡೋಲಾದಲ್ಲಿ ವಿದ್ಯುತ್‌ ಗ್ರಿಡ್‌ನ ಸಬ್‌ಸ್ಟೇಷನ್‌ಗೆ ಬೆಂಕಿ ತಗುಲಿದ ಪರಿಣಾಮ ದೇಶದ ರಾಜಧಾನಿ ದೆಹಲಿಯಲ್ಲಿ ಲೆಫ್ಟಿನೆಂಟ್‌ ಜನರಲ್‌ ಮತ್ತು ಮುಖ್ಯಮಂತ್ರಿ ಅವರ ನಿವಾಸದ ಪ್ರದೇಶ ಸೇರಿದಂತೆ ಹಲವೆಡೆ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿತ್ತು.

ಕೇಂದ್ರ ಮತ್ತು ಪೂರ್ವ ದಹೆಲಿಯ ಹಲವೆಡೆ ಹಾಗೂ ಉತ್ತರ ದೆಹಲಿ ಕೆಲ ಪ್ರದೇಶಗಳಲ್ಲಿ ವಿದ್ಯುತ್‌ ಕಡಿತವಾಗಿತ್ತು.

ಮಂಡೋಲಾ ಸಬ್‌ಸ್ಟೇಷನ್‌ನಿಂದ ದೆಹಲಿ 1,200 ಮೆಗಾವಾಟ್‌ ವಿದ್ಯುತ್ ಪಡೆಯುತ್ತದೆ. ಇಲ್ಲಿ ಬೆಂಕಿ ತಗುಲಿದ್ದರಿಂದ ದೆಹಲಿಯ ವಿವಿಧೆಡೆ ಸುಮಾರು ಒಂದು ಗಂಟೆಗಳ ಕಾಲ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು. ಬಳಿಕ ಪೂರೈಕೆ ಪುನರಾರಂಭವಾಯಿತು ಎಂದು ಡಿಸ್ಕಾಂ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ADVERTISEMENT

ದೆಹಲಿಯ ಅನೇಕ ಸ್ಥಳಗಳು ಉಷ್ಣಗಾಳಿಯ ಪ್ರಕೋಪಕ್ಕೆ ತುತ್ತಾಗಿವೆ. ಸಫ್ದರ್‌ಜಂಗ್‌ ಆಬ್ಸರ್ವೇಟರಿಯಲ್ಲಿ ಮಂಗಳವಾರ 43.8 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ದಾಖಲಾಗಿದೆ. ಇದರ ಜತೆಗೆ ವಿದ್ಯುತ್‌ ಕಡಿತವು ಜನರನ್ನು ಹೈರಾಣಾಗಿಸಿದೆ.

ದೆಹಲಿ ಇಂಧನ ಸಚಿವೆ ಆತಿಶಿ, ‘ಮಾಂಡೋಲಾದಲ್ಲಿನ ಸಬ್‌ಸ್ಟೇಷನ್‌ನಲ್ಲಿ ಬೆಂಕಿ ಬಿದ್ದಿದ್ದರಿಂದ ದೆಹಲಿಯ ಹಲವು ಭಾಗಗಳಲ್ಲಿ ವಿದ್ಯುತ್ ಕಡಿತವಾಗಿತ್ತು. ಇದು ಅತ್ಯಂತ ಕಳವಳಕಾರಿ ವಿಷಯವಾಗಿದ್ದು, ಅಂತಹ ಪರಿಸ್ಥಿತಿಯನ್ನು ತಡೆಗಟ್ಟಲು ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಇಂಧನ ಸಚಿವರು ಮತ್ತು ಪವರ್‌ ಗ್ರಿಡ್‌ ಕಾರ್ಪೊರೇಷನ್‌ ಅಧ್ಯಕ್ಷರನ್ನು ಭೇಟಿ ಮಾಡಿ ಮನವಿ ಮಾಡಿರುವುದಾಗಿ ‘ಎಕ್ಸ್‌’ನಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.