ADVERTISEMENT

ಒಡಿಶಾ: ಮೂರು ಲಕ್ಷ ಜನರ ಸ್ಥಳಾಂತರ

‘ಡಾನಾ’: ತೀವ್ರ ವೇಗದಲ್ಲಿ ಬೀಸುತ್ತಿರುವ ಗಾಳಿ, ಸುರಿಯುತ್ತಿದೆ ಭಾರಿ ಮಳೆ

ಪಿಟಿಐ
Published 24 ಅಕ್ಟೋಬರ್ 2024, 13:10 IST
Last Updated 24 ಅಕ್ಟೋಬರ್ 2024, 13:10 IST
ಕೋಲ್ಕತ್ತ ಬಳಿಯ ದಿಂಘಾ ಕಡಲತೀರದ ಬಳಿ ಗುರುವಾರ ನಿಂತಿದ್ದ ಜನರು –ಎಎಫ್‌ಪಿ ಚಿತ್ರ
ಕೋಲ್ಕತ್ತ ಬಳಿಯ ದಿಂಘಾ ಕಡಲತೀರದ ಬಳಿ ಗುರುವಾರ ನಿಂತಿದ್ದ ಜನರು –ಎಎಫ್‌ಪಿ ಚಿತ್ರ   

ಭುವನೇಶ್ವರ/ಕೋಲ್ಕತ್ತ/ರಾಂಚಿ (ಪಿಟಿಐ): ಒಡಿಶಾದ ಕರಾವಳಿಯಿಂದ ‘ಡಾನಾ’ ಚಂಡಮಾರುತವು 200 ಕಿ.ಮೀ ದೂರದಲ್ಲಿದೆ. ಇದರ ಪರಿಣಾಮ ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ವೇಗವಾಗಿ ಗಾಳಿ ಬೀಸುತ್ತಿದ್ದು, ಭಾರಿ ಮಳೆಯಾಗುತ್ತಿದೆ. ಗುರುವಾರ ರಾತ್ರಿ ಹೊತ್ತಿಗೆ ಜಾರ್ಖಂಡ್‌ನ ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ಮಳೆ ಆರಂಭವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

ಒಡಿಶಾದಲ್ಲಿ ಜನರನ್ನು ಸ್ಥಳಾಂತರಿಸುವ ಕಾರ್ಯ ತೀವ್ರಗತಿಯಿಂದ ಸಾಗಿದೆ. ಬುಧವಾರ ರಾತ್ರಿವರೆಗೂ ಸುಮಾರು 3 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ತೀವ್ರ ವೇಗದಲ್ಲಿ ಗಾಳಿ ಬೀಸುತ್ತಿರುವುದರಿಂದ ಮರಗಳು ರಸ್ತೆ ಮೇಲೆ ಬಿದ್ದಿವೆ. ಎನ್‌ಡಿಆರ್‌ಎಫ್‌, ಒಡಿಆರ್‌ಎಫ್‌ ಹಾಗೂ ಅಗ್ನಿ ಶಾಮಕ ಸಿಬ್ಬಂದಿ ರಸ್ತೆ ತೆರವು ಹಾಗೂ ಜನರನ್ನು ಸ್ಥಳಾಂತರಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ರಾಜ್ಯದ ಕೆಲವು ಜಿಲ್ಲೆಗಳಲ್ಲಿ 6.2 ಸೆಂ.ಮೀನಷ್ಟು ಮಳೆಯಾದರೆ, ಕೆಲವೆಡೆ 2.4 ಸೆಂ.ಮೀನಷ್ಟು ಮಳೆಯಾಗಿದೆ. ‘ಅ.26ರವರೆಗೂ ರಾಜ್ಯದಲ್ಲಿ ಮಳೆಯಾಗುವ ಸಂಭವವಿದೆ’ ಎಂದು ಇಲ್ಲಿನ ಪ್ರಾದೇಶಿಕ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 

ADVERTISEMENT

ಪಶ್ಚಿಮ ಬಂಗಾಳದ ದಕ್ಷಿಣದ ಜಿಲ್ಲೆಗಳಲ್ಲಿ ತೀವ್ರ ಗಾಳಿಯ ಜೊತೆಯಲ್ಲಿ ಭಾರಿ ಮಳೆಯಾಗುತ್ತಿದೆ. ಕೋಲ್ಕತ್ತದಲ್ಲಿ ಮಾತ್ರ ಆಗಾಗ್ಗೆ ಮಳೆ ಸುರಿಯುತ್ತಿದೆ. ಆಗ್ನೇಯ ರೈಲ್ವೆಯ ಸುಮಾರು 170 ಎಕ್ಸ್‌ಪ್ರೆಸ್‌ ಹಾಗೂ ಪ್ರಯಾಣಿಕ ರೈಲುಗಳನ್ನು ರದ್ದು ಮಾಡಲಾಗಿದೆ. ಜೊತೆಗೆ, ಪಶ್ಚಿಮ ರೈಲ್ವೆಯ ಹೌರಾ ವಿಭಾಗದ ವ್ಯಾಪ್ತಿಯ 68 ಉಪನಗರ ರೈಲುಗಳನ್ನು ರದ್ದು ಮಾಡಿದೆ. ಉತ್ತರ ಹಾಗೂ ದಕ್ಷಿಣ 24 ಪರಗಣ ಜಿಲ್ಲೆಗಳಲ್ಲಿನ ಹೂಗ್ಲಿ ನದಿಯಲ್ಲಿ ನಡೆಸುವ ದೋಣಿ ಸೇವೆಯನ್ನೂ ಸ್ಥಗಿತಗೊಳಿಸಲಾಗಿದೆ.

ಪುರ್ಬಾ ಮೇಧಿನಿಪುರ ಜಿಲ್ಲೆಯಲ್ಲಿ ರಕ್ಷಣಾ ಕಾರ್ಯಕ್ಕೆ ತೆರಳುವ ಮುನ್ನ ಎನ್‌ಡಿಆರ್‌ಎಫ್‌ ಸಿಬ್ಬಂದಿ ಗುರುವಾರ ಸಿದ್ಧತೆ ನಡೆಸಿದರು –ಪಿಟಿಐ ಚಿತ್ರ
ಒಡಿಶಾದ ಬಾಲೇಶ್ವರ ಜಿಲ್ಲೆಯ ನಿರಾಶ್ರಿತ ಶಿಬಿರವೊಂದರಲ್ಲಿ ಮಕ್ಕಳು ಆಶ್ರಯ ಪಡೆದರು –ಎಎಫ್‌ಪಿ ಚಿತ್ರ
ಒಡಿಶಾದ ಬಾಲೇಶ್ವರ ಜಿಲ್ಲೆಯ ನಿರಾಶ್ರಿತ ಶಿಬಿರವೊಂದರಲ್ಲಿ ವೃದ್ಧರು ಆಶ್ರಯ ಪಡೆದರು –ಎಎಫ್‌ಪಿ ಚಿತ್ರ
ಒಡಿಶಾದ ಬಾಲೇಶ್ವರ ಜಿಲ್ಲೆಯ ನಿರಾಶ್ರಿತ ಶಿಬಿರವೊಂದರಲ್ಲಿ ನಿರಾಶ್ರಿತರಿಗಾಗಿ ಸಿಬ್ಬಂದಿ ಗುರುವಾರ ಆಹಾರ ತಯಾರಿಸಿದರು –ಎಎಫ್‌ಪಿ ಚಿತ್ರ

ಪ್ರವಾಸಿತಾಣಗಳಲ್ಲಿ ಸುರಕ್ಷತಾ ಕ್ರಮ

ಪ್ರಸಿದ್ಧ ಪುರಿ ಜಗನ್ನಾಥ ದೇವಾಲಯ ಹಾಗೂ ಕೋನಾರ್ಕ್‌ನ ಸೂರ್ಯ ದೇವಾಲಯಗಳ ಸುರಕ್ಷತೆ ಕುರಿತು ಆಯಾ ಜಿಲ್ಲಾಡಳಿತವು ಹಲವು ಕ್ರಮಗಳನ್ನು ಕೈಗೊಂಡಿವೆ. ಪುರಿ ನಗರವನ್ನು ತೊರೆಯಲು ಭಕ್ತರಿಗೆ ಈಗಾಗಲೇ ಸೂಚಿಸಲಾಗಿದೆ. ಸೂರ್ಯ ದೇವಾಲಯದಲ್ಲಿ ಎರಡು ದಿನಗಳವರೆಗೆ ಭಕ್ತರ ಭೇಟಿಗೆ ನಿರ್ಬಂಧ ಹೇರಲಾಗಿದೆ. ಜೊತೆಗೆ ಒಡಿಶಾದ ಕಡಲಕಿನಾರೆ ಪ್ರವೇಶಕ್ಕೂ ಪ್ರವಾಸಿಗರನ್ನು ನಿರ್ಬಂಧಿಸಲಾಗಿದೆ.

ಚುನಾವಣಾ ಪ್ರಕ್ರಿಯೆಗೆ ತೊಡಕು

ಜಾರ್ಖಂಡ್‌ನ ದಕ್ಷಿಣ ಭಾಗದ ಕೆಲವು ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ 11.5 ಸೆಂ.ಮೀನಿಂದ 20.4 ಸೆಂ.ಮೀನಷ್ಟು ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಜೆಮ್‌ಶೆಡ್‌ಪುರ ಹಾಗೂ ಛಾಯಿಬಸಾ ಜಿಲ್ಲೆಗಳಲ್ಲಿ ಎನ್‌ಡಿಆರ್‌ಎಫ್‌ನ 6 ತಂಡಗಳನ್ನು ಈಗಾಗಲೇ ನಿಯೋಜಿಸಲಾಗಿದೆ. ರಾಜ್ಯದ ಹಲವು ಭಾಗಗಳಲ್ಲಿ ಶುಕ್ರವಾರ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಮಾಹಿತಿ ನೀಡಿದೆ. ಜಾರ್ಖಂಡ್‌ನಲ್ಲಿ ವಿಧಾನಸಭೆ ಚುನವಾಣೆಯ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯುತ್ತಿದೆ. ಮೊದಲ ಹಂತದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯು ಶುಕ್ರವಾರ ಕೊನೆಗೊಳ್ಳಲಿದೆ. ಅ.22ರಿಂದ ಎರಡನೇ ಹಂತದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದ್ದು ಅ.29ಕ್ಕೆ ಕೊನೆಗೊಳ್ಳಲಿದೆ. ‘ಡಾನಾ’ದ ಕಾರಣದಿಂದಾಗಿ ಈ ಪ್ರಕ್ರಿಯೆಗಳಿಗೆ ತೊಡಕಾಗಬಹುದು ಎಂದು ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.