ಕೋಲ್ಕತ್ತ: ಇಲ್ಲಿನ ಪಾರ್ಕ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಇಲಾಖೆಯ ನಾಗರಿಕ ಸ್ವಯಂಸೇವಕಿಗೆ ಸಬ್‌ಇನ್ಸ್‌ಪೆಕ್ಟರ್ (ಎಸ್‌ಐ) ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದ್ದು, ಇಲಾಖಾ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಅಕ್ಟೋಬರ್ 5ರ ಮಧ್ಯರಾತ್ರಿ 1.10ಕ್ಕೆ ಈ ಘಟನೆ ನಡೆದಿದೆ. ಠಾಣೆಯ ನಾಲ್ಕನೇ ಮಹಡಿಯಲ್ಲಿರುವ ರೆಸ್ಟ್‌ರೂಮ್‌ಗೆ ಸ್ವಯಂ ಸೇವಕಿಯನ್ನು ಕರೆದು, ಎಸ್‌ಐ ದೌರ್ಜನ್ಯವೆಸಗಿರುವುದಾಗಿ ಆರೋಪಿಸಲಾಗಿದೆ ಎಂದು ಹೇಳಿದ್ದಾರೆ.
'ಆರೋಪಿ ಎಸ್‌ಐ, ದುರ್ಗಾಪೂಜೆಗೆ ಉಡುಗೊರೆಯಾಗಿ ಬಟ್ಟೆ ನೀಡುವುದಾಗಿ ಕರೆದು ಸ್ವಯಂಸೇವಕಿ ಮೇಲೆ ದೌರ್ಜನ್ಯವೆಸಗಿದ್ದಾರೆ ಎನ್ನಲಾಗಿದೆ. ದೂರು ಆಧರಿಸಿ ತನಿಖೆ ನಡೆಸುತ್ತಿದ್ದೇವೆ. ಸಂತ್ರಸ್ತೆಯು 2017ರಲ್ಲಿ ನೇಮಕಗೊಂಡಾಗಿನಿಂದಲೂ ಪಾರ್ಕ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದಾರೆ' ಎಂದು ಮಾಹಿತಿ ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿರುವ ಸಂತ್ರಸ್ತೆ, ಪಾರ್ಕ್ ಸ್ಟ್ರೀಟ್ ಠಾಣೆಯ ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದ್ದರು. ಹೀಗಾಗಿ, ಲಾಲ್‌ಬಜಾರ್‌ನಲ್ಲಿರುವ ಕೋಲ್ಕತ್ತ ಪೊಲೀಸ್ ಪ್ರಧಾನ ಕಚೇರಿ ಮತ್ತು ದಕ್ಷಿಣ ಜಿಲ್ಲಾಧಿಕಾರಿ ಕಚೇರಿಗೆ ದೂರು ನೀಡಿರುವುದಾಗಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.