ADVERTISEMENT

ಗೊಗೊಯಿ ವಿರುದ್ಧ ಆರೋಪ: ನಿರ್ವಹಣೆ ಯಥೋಚಿತವಲ್ಲ

ಪ್ರಕರಣ ನಿರ್ವಹಣೆ ಸಹಜ ನ್ಯಾಯ ತತ್ವಕ್ಕೆ ವಿರುದ್ಧ: ಸುಪ್ರೀಂ ಕೋರ್ಟ್‌ ವಕೀಲರ ಸಂಘ

ಪಿಟಿಐ
Published 22 ಏಪ್ರಿಲ್ 2019, 20:06 IST
Last Updated 22 ಏಪ್ರಿಲ್ 2019, 20:06 IST
ರಂಜನ್ ಗೊಗೊಯಿ
ರಂಜನ್ ಗೊಗೊಯಿ   

ನವದೆಹಲಿ: ತಮ್ಮ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪವನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ಅವರು ನಿರ್ವಹಿಸಿದ ರೀತಿ ‘ಅನುಚಿತ’ ಮತ್ತು ‘ಯಥೋಚಿತ ಪ್ರಕ್ರಿಯೆಗಳ ಉಲ್ಲಂಘನೆ’ ಎಂದು ಸುಪ್ರೀಂ ಕೋರ್ಟ್‌ ವಕೀಲರ ಸಂಘ (ಎಸ್‌ಸಿಬಿಎ) ಮತ್ತು ಸುಪ್ರೀಂ ಕೋರ್ಟ್‌ ಅಡ್ವೊಕೇಟ್ಸ್‌ ಆನ್‌
ರೆಕಾರ್ಡ್‌ ಅಸೋಷಿಯೇಷನ್‌ (ಎಸ್‌ಸಿಎಒಆರ್‌ಎ) ಹೇಳಿವೆ.

ಇಂತಹ ಆರೋಪಗಳ ಸಂದರ್ಭದಲ್ಲಿ ಯಾವ ಕ್ರಮಗಳನ್ನು ಅನುಸರಿಸಬೇಕು ಎಂಬ ಬಗ್ಗೆ ಸುಪ್ರೀಂ ಕೋರ್ಟ್‌ ನಿರ್ಧಾರ ಕೈಗೊಳ್ಳಬೇಕು ಎಂದೂ ಈ ಸಂಘಟನೆಗಳು ಅಭಿಪ್ರಾಯಪಟ್ಟಿವೆ.

ಸುಪ್ರೀಂ ಕೋರ್ಟ್‌ನ ಮಾಜಿ ಸಿಬ್ಬಂದಿಯೊಬ್ಬರು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ಅವರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಕಳೆದ ಶನಿವಾರ ಮಾಡಿದ್ದರು. ಅದಾದ ಬಳಿಕ, ಗೊಗೊಯಿ ನೇತೃತ್ವದಲ್ಲಿ ಮೂವರು ನ್ಯಾಯಮೂರ್ತಿಗಳ ಪೀಠವು ‘ತುರ್ತು ಮತ್ತು ಅಸಾಮಾನ್ಯ’ ವಿಚಾರಣೆ ನಡೆಸಿತ್ತು. ಗೊಗೊಯಿ ವಿರುದ್ಧದ ಆರೋಪಗಳು ‘ನಂಬಲರ್ಹವಲ್ಲ’ ಎಂದು ಈ ಪೀಠವು ಅಭಿಪ್ರಾಯಪಟ್ಟಿತ್ತು.

ADVERTISEMENT

ಕಳೆದ ಅಕ್ಟೋಬರ್‌ನಲ್ಲಿ ಈ ದೌರ್ಜನ್ಯ ನಡೆದಿತ್ತು ಎಂದು ಮುಖ್ಯ ನ್ಯಾಯಮೂರ್ತಿಯ ಗೃಹ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಆರೋಪಿಸಿದ್ದರು.

ಎಸ್‌ಸಿಬಿಎಯ ಕಾರ್ಯಕಾರಿ ಸಮಿತಿಯ ತುರ್ತು ಸಭೆಯನ್ನು ಸೋಮವಾರ ನಡೆಸಲಾಗಿದೆ. ಯಾವುದೇ ಪೂರ್ವಗ್ರಹ ಇಲ್ಲದೆ ತನಿಖೆಗೆ ನ್ಯಾಯಾಲಯವು ಚಾಲನೆ ನೀಡಬಹುದು. ಅಂತಹ ತನಿಖೆ ನಡೆಯುವಾಗ, ಆರೋಪಕ್ಕೆ ಸಂಬಂಧಿಸಿದಂತೆ ಲಭ್ಯವಾಗಬಹುದಾದ ಎಲ್ಲ ಸಾಕ್ಷ್ಯಗಳನ್ನೂ ಸಂಗ್ರಹಿಸಬೇಕು ಎಂದು ಎಸ್‌ಸಿಬಿಎ ಹೇಳಿದೆ.

ಇದೇ 20ರಂದು ಸುಪ್ರೀಂ ಕೋರ್ಟ್‌ ನಡೆಸಿದ ತುರ್ತು ಮತ್ತು ಅಸಾಮಾನ್ಯ ವಿಚಾರಣೆಯು ಸಹಜ ನ್ಯಾಯದ ತತ್ವಕ್ಕೆ ವಿರುದ್ಧವಾದುದಾಗಿದೆ ಎಂದೂ ಎಸ್‌ಸಿಬಿಎ ಕಾರ್ಯದರ್ಶಿ ವಿಕ್ರಾಂತ್‌ ಯಾದವ್‌ ಹೇಳಿದ್ದಾರೆ.

ಸ್ಥಾಪಿತ ನ್ಯಾಯ ವ್ಯವಸ್ಥೆಗೆ ಅನುಗುಣವಾಗಿಯೇ ಗೊಗೊಯಿ ವಿರುದ್ಧದ ಆರೋಪವನ್ನೂ ನಿರ್ವಹಿಸಬೇಕು. ಪ್ರತಿಯೊಬ್ಬರಿಗೂ ನ್ಯಾಯವು ಒಂದೇ ರೀತಿಯಲ್ಲಿ ಅನ್ವಯ ಆಗಬೇಕು ಎಂದು ಎಸ್‌ಸಿಎಒಆರ್‌ಎ ಹೇಳಿದೆ.

ರಾಷ್ಟ್ರಪತಿ ಗಮನ ಹರಿಸಬೇಕು: ಗೊಗೊಯಿ ವಿರುದ್ಧದ ಆರೋಪಗಳ ಬಗ್ಗೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಗಮನ ಹರಿಸಬೇಕು ಎಂದು ದೆಹಲಿಯ ಪ್ರಗತಿಶೀಲ ಮಹಿಳಾ ಸಂಘಟನೆ ಒತ್ತಾಯಿಸಿದೆ.

‘ಗೊಗೊಯಿ ತಲೆದಂಡಕ್ಕೆ ಪಿತೂರಿ’

ಲೈಂಗಿಕ ದೌರ್ಜನ್ಯದ ಸುಳ್ಳು ಪ್ರಕರಣದಲ್ಲಿ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ಅವರನ್ನು ಸಿಲುಕಿಸಿ, ಅವರು ರಾಜೀನಾಮೆ ನೀಡುವಂತೆ ಮಾಡುವ ಪಿತೂರಿ ನಡೆದಿದೆ ಎಂದು ವಕೀಲ ಉತ್ಸವ್‌ ಸಿಂಗ್‌ ಬೈನ್ಸ್‌ ಸುಪ್ರೀಂ ಕೋರ್ಟ್‌ನಲ್ಲಿ ಹೇಳಿದ್ದಾರೆ.

ಅಜಯ್‌ ಎಂಬ ವ್ಯಕ್ತಿಯೊಬ್ಬರು ತಮ್ಮನ್ನ ಸಂಪರ್ಕಿಸಿದ್ದರು. ಗೊಗೊಯಿ ಅವರ ವಿರುದ್ಧದ ಪ್ರಕರಣದಲ್ಲಿ ಸಂತ್ರಸ್ತೆಯ ಪರ ವಾದಿಸಬೇಕು ಮತ್ತು ಮಾಧ್ಯಮಗೋಷ್ಠಿ ನಡೆಸಬೇಕು. ಇದಕ್ಕಾಗಿ ₹1.5 ಕೋಟಿ ನೀಡುವುದಾಗಿ ಆ ವ್ಯಕ್ತಿ ಆಮಿಷ್ ಒಡ್ಡಿದ್ದರು ಎಂದು ಬೈನ್ಸ್‌ ಪ್ರಮಾಣಪತ್ರ ಸಲ್ಲಿಸಿದ್ದಾರೆ.

ಗೊಗೊಯಿ ಅವರ ವಿರುದ್ಧದ ಆರೋಪವನ್ನು ಕೇಳಿದಾಗ ತಮಗೆ ಆಘಾತವಾಗಿತ್ತು. ಸಂತ್ರಸ್ತೆ ಪರ ವಾದಿಸಲು ತಾವು ಸಿದ್ಧವಾಗಿದ್ದೆವು. ಆದರೆ, ಇತರ ವಿಚಾರಗಳನ್ನು ಅಜಯ್‌ ವಿವರಿಸಿದಾಗ ತಮಗೆ ಆರೋಪಗಳ ಬಗ್ಗೆಯೇ ಅನುಮಾನ ಬಂತು. ಅಜಯ್‌ ಹೇಳಿದ ಕತೆಯಲ್ಲಿ ಹಲವು ಲೋಪಗಳಿದ್ದವು ಎಂದು ಬೈನ್ಸ್‌ ವಿವರಿಸಿದ್ದಾರೆ.

ಹಾಗಾಗಿ ಸಂತ್ರಸ್ತೆಯನ್ನು ಭೇಟಿಯಾಗಲು ತಾವು ಬಯಸಿದರೂ ಅದಕ್ಕೆ ಅಜಯ್‌ ಅವಕಾಶ ಕೊಡಲಿಲ್ಲ. ಆದ್ದರಿಂದ ಅನುಮಾನ ಇನ್ನಷ್ಟ ಗಟ್ಟಿಯಾಯಿತು ಎಂದು ಬೈನ್ಸ್‌ ಹೇಳಿದ್ದಾರೆ.

‘ರಾಷ್ಟ್ರಪತಿ ಗಮನ ಹರಿಸಬೇಕು’

ಗೊಗೊಯಿ ವಿರುದ್ಧದ ಆರೋಪಗಳ ಬಗ್ಗೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಗಮನ ಹರಿಸಬೇಕು ಎಂದು ದೆಹಲಿಯ ಪ್ರಗತಿಶೀಲ ಮಹಿಳಾ ಸಂಘಟನೆ ಒತ್ತಾಯಿಸಿದೆ.

ಸಂಘಟನೆಯ ಸದಸ್ಯರು ಸುಪ್ರೀಂ ಕೋರ್ಟ್‌ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ಜ್ಯೇಷ್ಠತೆಯಲ್ಲಿ ಮುಖ್ಯ ನ್ಯಾಯಮೂರ್ತಿಯ ನಂತರದ ಸ್ಥಾನದಲ್ಲಿರುವವರು ಪ್ರಕರಣದ ವಿಚಾರಣೆ ನಡೆಸುವಂತೆ ರಾಷ್ಟ್ರಪತಿ ಆದೇಶಿಸಬೇಕು ಎಂದು ಸಂಘಟನೆ ಹೇಳಿದೆ.

‘ಸಂತ್ರಸ್ತೆ ಮತ್ತು ಅವರ ಕುಟುಂಬದ ಸದಸ್ಯರ ಜೀವ ಮತ್ತು ಸ್ವಾತಂತ್ರ್ಯದ ರಕ್ಷಣೆಗೆ ಇಡೀ ದೇಶವೇ ಒಂದಾಗಿ ನಿಲ್ಲಬೇಕು’ ಎಂದೂ ಸಂಘಟನೆ ಒತ್ತಾಯಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.