ಪ್ರಯಾಗ್‌ರಾಜ್: ಮಹಿಳೆ ಭಯ ಅಥವಾ ತಪ್ಪುಕಲ್ಪನೆಯಲ್ಲಿದ್ದಾಗ ಆಕೆಯ ಒಪ್ಪಿಗೆ ಪಡೆದೂ ನಡೆಸುವ ಲೈಂಗಿಕ ಸಂಪರ್ಕವು ಅತ್ಯಾಚಾರವಾಗಲಿದೆ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.
ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆಯೊಬ್ಬರು ದಾಖಲಿಸಿರುವ ಕ್ರಿಮಿನಲ್ ಪ್ರಕರಣವನ್ನು ರದ್ದು ಕೋರಿ ರಾಘವ್ ಕುಮಾರ್ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಅನೀಸ್ ಕುಮಾರ್ ಗುಪ್ತಾ ವಜಾ ಮಾಡಿದ್ದಾರೆ.
ಆಗ್ರಾ ಜಿಲ್ಲೆಯ ಪೊಲೀಸ್ ಠಾಣೆಯೊಂದರಲ್ಲಿ ತಮ್ಮ ವಿರುದ್ಧ ಐಪಿಸಿ ಸೆಕ್ಷನ್ 376(ಅತ್ಯಾಚಾರ)ರ ಅಡಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 2018ರಲ್ಲಿದಾಖಲಾಗಿರುವ ಚಾರ್ಜ್‌ಶೀಟ್ ರದ್ದು ಕೋರಿ ಆರೋಪಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಮಹಿಳೆಯನ್ನು ಪ್ರಜ್ಞೆತಪ್ಪಿಸಿ ಲೈಂಗಿಕ ಸಂಪರ್ಕ ನಡೆಸಿರುವ ಆರೋಪಿಯು, ಬಳಿಕ, ಮದುವೆಯಾಗುವುದಾಗಿ ಹೇಳಿ ದೈಹಿಕವಾಗಿ ಶೋಷಣೆ ಮಾಡಿದ್ದಾನೆ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನು ತಳ್ಳಿಹಾಕಿರುವ ಆರೋಪಿ ಪರ ವಕೀಲ, ಈ ಇಬ್ಬರೂ ಲೋಕಸೇವಾ ಆಯೋಗದ ಪರೀಕ್ಷೆಗೆ ಒಟ್ಟಿಗೆ ತಯಾರಿ ನಡೆಸುತ್ತಿದ್ದರು. ಒಪ್ಪಿಗೆ ಮೇರೆಗೆ ದೈಹಿಕ ಸಂಬಂಧ ಹೊಂದಿದ್ದಾರೆ, ಹಾಗಾಗಿ, ಅತ್ಯಾಚಾರದ ಪ್ರಶ್ನೆಯೇ ಬರುವುದಿಲ್ಲ ಎಂದು ವಾದಿಸಿದ್ದರು.
ಈ ವಾದವನ್ನು ವಿರೋಧಿಸಿದ ಮಹಿಳೆ ಪರ ವಕೀಲ, ಈ ಇಬ್ಬರ ನಡುವೆ ಸಂಬಂಧವು ಮೋಸದಿಂದ ಆಗಿದೆ. ಒತ್ತಾಯಪೂರ್ವಕವಾಗಿ ಬೆಳೆಸಿದ ದೈಹಿಕ ಸಂಬಂಧವಾಗಿದೆ ಎಂದು ವಾದಿಸಿದ್ದರು.
ವಾದಗಳು ಮತ್ತು ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ಬಳಿಕ, ‘ಅರ್ಜಿದಾರನು ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ವಂಚನೆ, ಬೆದರಿಕೆ ಮೂಲಕ ಸಂಬಂಧವನ್ನು ಆರಂಭಿಸಿರುವ ಕಾರಣ, ಪ್ರಾಥಮಿಕ ಅಂಶಗಳ ಆಧಾರದ ಮೇಲೆ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಅಡಿಯಲ್ಲಿ ಅಪರಾಧ ಸಾಬೀತಾಗಿದೆ’ಎಂದು ನ್ಯಾಯಾಲಯ ಹೇಳಿದೆ.
‘ನಂತರದ ಸಂಬಂಧವು ಮದುವೆಯ ಭರವಸೆಯ ಅಡಿಯಲ್ಲಿ ಒಮ್ಮತದ ಸಂಬಂಧವೆಂದು ತೋರುತ್ತದೆ, ಆದರೆ, ಅರ್ಜಿದಾರರು ಹಾಕಿದ ಬೆದರಿಕೆ ಬಳಿಕವೇ ಮಹಿಳೆ ಒಪ್ಪಿಗೆ ಸೂಚಿಸಿರುವುದು ಸ್ಪಷ್ಟವಾಗಿದೆ. ಹಾಗಾಗಿ, ಅರ್ಜಿದಾರರ ಮನವಿ ಮೇರೆಗೆ ಚಾರ್ಜ್‌ಶೀಟ್ ರದ್ಧತಿಗೆ ಯಾವುದೇ ಕಾರಣಗಳು ಕಂಡುಬಂದಿಲ್ಲ’ಎಂದೂ ನ್ಯಾಯಾಲಯ ತನ್ನ ತೀರ್ಪಿನಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.