ನವದೆಹಲಿ:ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ಕುರಿತ ಕಾನೂನಾತ್ಮಕ ಪ್ರಶ್ನೆಗಳನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಬಹುದು ಎಂದು ಸುಪ್ರೀಂ ಕೋರ್ಟ್‌ನ ಐವರು ಸದಸ್ಯರ ಪೀಠ ಸೋಮವಾರ ತಿಳಿಸಿದೆ.
ಒಂಬತ್ತು ನ್ಯಾಯಮೂರ್ತಿಗಳನ್ನೊಳಗೊಂಡ ವಿಸ್ತೃತ ಪೀಠವು ಫೆ. 17ರಿಂದ ಶಬರಿಮಲೆ ವಿಚಾರವಾಗಿ ಪ್ರತಿದಿನವೂ ವಿಚಾರಣೆ ನಡೆಸಲು ಮುಂದಾಗಿದೆ. ಸಂವಿಧಾನದ 25ನೇ ವಿಧಿ ಅಡಿ ಇರುವ ಧಾರ್ಮಿಕ ಹಕ್ಕು ಸ್ವಾತಂತ್ರ್ಯವನ್ನು ವಿವಿಧ ಧರ್ಮಗಳ ಆಧಾರದಲ್ಲಿ ವ್ಯಾಖ್ಯಾನಿಸುವುದಾಗಿ ಪೀಠ ಹೇಳಿದೆ.
ಸಂವಿಧಾನ ಮತ್ತು ನಂಬಿಕೆಗಳಡಿ, ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಷಯಗಳ ವಿಚಾರಣೆ ನಡೆಸುವಾಗ ಕೆಲವು ಪ್ರಮುಖ ವಿಚಾರಗಳತ್ತ ಗಮನಹರಿಸುವಂತೆ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬಡೆ ನೇತೃತ್ವದ ಪೀಠ ಸೂಚಿಸಿದೆ. ಈ ಬಗ್ಗೆ ಏಳು ಪ್ರಶ್ನೆಗಳನ್ನು ರೂಪಿಸಲಾಗಿದ್ದು, ವಿಚಾರಣೆಯ ವೇಳೆ ಇವುಗಳನ್ನು ಪರಿಗಣಿಸಬೇಕು ಎಂದಿದೆ.
ಶಬರಿಮಲೆ ಪ್ರಕರಣದ ಜತೆಗೆ, ಮಸೀದಿ ಹಾಗೂ ದರ್ಗಾಗಳಿಗೆ ಮಹಿಳೆಯರಿಗೆ ಪ್ರವೇಶ ನಿರಾಕರಣೆ, ಪಾರ್ಸಿ ಮಹಿಳೆಯು ಬೇರೆ ಸಮುದಾಯದ ಪುರುಷನನ್ನು ಮದುವೆಯಾದರೆ ಅಂಥ ಮಹಿಳೆಗೆ ಪವಿತ್ರ ಅಗ್ನಿ ಇರುವ ದೇಗುಲಕ್ಕೆ ಪ್ರವೇಶ ನಿರಾಕರಿಸುವುದೇ ಮುಂತಾದ ವಿಚಾರಗಳನ್ನೂ ವಿಸ್ತೃತ ಪೀಠಕ್ಕೆ ಒಪ್ಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.