ಮುಂಬೈ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಆರೋಪಗಳಿಂದ ಆರ್ಯನ್ ಖಾನ್ ಮುಕ್ತರಾಗಿದ್ದು, ಅವರ ತಂದೆ ಶಾರುಖ್ ಖಾನ್ ನಿರಾಳರಾಗಿದ್ದಾರೆ ಎಂದು ಆರ್ಯನ್ ಪರ ವಕಾಲತ್ತು ಹಾಕಿ, ಜಾಮೀನು ಕೊಡಿಸುವಲ್ಲಿ ಯಶಸ್ವಿಯಾಗಿದ್ದ ಹಿರಿಯ ವಕೀಲ ಮುಕುಲ್ ರೋಹಟಗಿ ಹೇಳಿದ್ದಾರೆ.
ಆರ್ಯನ್ ಬಳಿ ಯಾವುದೇ ಮಾದಕ ವಸ್ತು ಪತ್ತೆಯಾಗಿರಲಿಲ್ಲ ಎಂದು ಮಾದಕ ವಸ್ತು ನಿಯಂತ್ರಣ ಘಟಕವು ತನ್ನ ದೋಷಾರೋಪಪಟ್ಟಿಯಲ್ಲಿ ಹೇಳಿದೆ. ಅವರು(ಆರ್ಯನ್ ಖಾನ್) ಮತ್ತು ಇತರೆ ಐವರ ವಿರುದ್ಧ ಯಾವುದೇ ಸೂಕ್ತ ಸಾಕ್ಷ್ಯಾಧಾರಗಳು ಇರಲಿಲ್ಲ ಎಂದು ರೋಹಟಗಿ ಹೇಳಿದ್ದಾರೆ. ಪ್ರಕರಣದಲ್ಲಿ ಇತರೆ 14 ಮಂದಿ ವಿರುದ್ಧ ಎನ್‌ಸಿಬಿ ಆರೋಪಗಳನ್ನು ಪಟ್ಟಿ ಮಾಡಿದೆ.
ಇದರಿಂದ ನಾನು ನಿರಾಳನಾಗಿದ್ದೇನೆ. ನನ್ನ ಕಕ್ಷಿದಾರರಾದ ಶಾರೂಖ್ ಖಾನ್ ಮತ್ತು ಆರ್ಯನ್ ಸಹ ನಿರಾಳರಾಗಿದ್ದಾರೆ. ಸತ್ಯಕ್ಕೆ ಜಯ ಸಿಕ್ಕಿದೆ ಎಂದು ಅವರು ಎನ್‌ಡಿಟಿವಿ ಜೊತೆ ಮಾತನಾಡುತ್ತಾ ಹೇಳಿದ್ದಾರೆ.
‘ಯುವಕ ಆರ್ಯನ್ ಅವರ ವಿರುದ್ಧ ಆರೋಪ ಹೊರಿಸಲು ಅಥವಾ ಬಂಧಿಸಲು ಯಾವುದೇ ಆಧಾರ ಇರಲಿಲ್ಲ. ಅವರ ಬಳಿ ಯಾವುದೇ ಮಾದಕ ವಸ್ತು ಪತ್ತೆಯಾಗಿರಲಿಲ್ಲ. ತಮ್ಮ ತಪ್ಪನ್ನು ಒಪ್ಪಿಕೊಳ್ಳುವ ಮೂಲಕ ಎನ್‌ಸಿಬಿ ವೃತ್ತಿಪರತೆಯನ್ನು ಪ್ರದರ್ಶಿಸಿದೆ’ ಎಂದು ರೋಹಟಗಿ ಪ್ರತಿಪಾದಿಸಿದ್ದಾರೆ.
ಅಕ್ಟೋಬರ್ 3, 2021ರಂದು ಡ್ರಗ್ಸ್ ಪಾರ್ಟಿ ನಡೆಯುತ್ತಿದ್ದ ಮುಂಬೈನ ಕ್ರೂಸ್ ಮೇಲೆ ದಾಳಿ ಮಾಡಿದ್ದ ಮಾದಕ ವಸ್ತು ನಿಯಂತ್ರಣ ಘಟಕದ ಅಧಿಕಾರಿಗಳು ಆರ್ಯನ್ ಅವರನ್ನು ವಶಕ್ಕೆ ಪಡೆದಿದ್ದರು. ಇದಾದ ಸ್ವಲ್ಪ ಹೊತ್ತಿನಲ್ಲೇ ಆರ್ಯನ್ ಜೊತೆ ಸ್ವತಂತ್ರ ಸಾಕ್ಷಿ ಕಿರಣ್ ಗೋಸಾವಿ ಅವರ ಸೆಲ್ಫಿ ವೈರಲ್ ಆಗಿತ್ತು. ಬಳಿಕ, ಆರ್ಯನ್ ಅವರನ್ನು ಬಂಧಿಸಲಾಗಿತ್ತು.
ಬಳಿಕ, ವಾಟ್ಸ್‌ಆ್ಯಪ್ ಚಾಟ್ ಆಧರಿಸಿ ಆರ್ಯನ್ ಖಾನ್ ಮತ್ತು ಇತರ ಆರೋಪಿಗಳನ್ನು ಎನ್‌ಸಿಬಿ ಮುಖ್ಯಸ್ಥ ಸಮೀರ್ ವಾಂಖೆಡೆ ಮತ್ತು ಅವರ ತಂಡ ತೀವ್ರ ವಿಚಾರಣೆಗೆ ಒಳಪಡಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.