ಶಹಜಹಾನ್‌ಪುರ್, ಉತ್ತರಪ್ರದೇಶ: ಹದಿನೆಂಟು ವರ್ಷದ ಹಿಂದೆ ನಡೆದಿದ್ದ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿ ಆಗಿನ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ 18 ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲಿಸಲು ಕೋರ್ಟ್ ಆದೇಶಿಸಿದೆ.
ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸ್ಥಳೀಯ ಜಲಾಲಬಾದ್ ಠಾಣೆಯಲ್ಲಿ 18 ಜನರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ. ಅಪರಾಧ ವಿಭಾಗವು ತನಿಖೆ ನಡೆಸಲಿದೆ ಎಂದು ಶಹಜಹಾನ್‌ಪುರ್ ಎಸ್‌ಪಿ ಎಸ್.ಆನಂದ್ ಅವರು ತಿಳಿಸಿದರು.
ಬಾಧಿತರ ಪರ ವಕೀಲ ಇಜಾಜ್ ಹಸನ್ ಖಾನ್ ಈ ಬಗ್ಗೆ ಮಾಹಿತಿ ನೀಡಿ, ಕೃತ್ಯವು ಅಕ್ಟೋಬರ್ 3, 2004ರಲ್ಲಿ ನಡೆದಿತ್ತು. ಡಕಾಯಿತಿ ಪ್ರಕರಣದಲ್ಲಿ ಭಾಗಿಯಾಗಿದ್ದ ಶಂಕೆ ಮೇಲೆ ಚಾಚುಪುರ್‌ನ ನಿವಾಸಿಗಳಾದ ಪ್ರಹ್ಲಾದ್ ಮತ್ತು ಧನ್‌ಪಾಲ್ ಅವರನ್ನು ಪೊಲೀಸರು ಬಂಧಿಸಿದ್ದರು. ನಂತರ ಎನ್‌ಕೌಂಟರ್‌ನಲ್ಲಿ ಇಬ್ಬರೂ ಸತ್ತಿದ್ದು, ಪೊಲೀಸರೇ ಶವವನ್ನು ಹೊತ್ತೊಯ್ದಿದ್ದರು ಎಂದರು.
ಪ್ರಹ್ಲಾದ್ ಸಹೋದರ ರಾಮ್‌ಕೀರ್ತಿ ಅವರು ವಿವಿಧ ತನಿಖಾ ಆಯೋಗ, ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಿದ್ದರು. ಬಳಿಕ ನವೆಂಬರ್ 24, 2012ರಂದು ಆರೋಪಿತ ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಲು ಕೋರ್ಟ್ ಮೊರೆ ಹೋಗಿದ್ದರು. ಸಾಕಷ್ಟು ವಿಳಂಬವಾಗಿದೆ ಎಂದು ಆಗ ಮ್ಯಾಜಿಸ್ಟ್ರೇಟ್ ಕೋರ್ಟ್ ಮನವಿ ತಿರಸ್ಕರಿಸಿತ್ತು. ಬಳಿಕ ಜಿಲ್ಲಾ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಸಿಜೆಎಂ ಕೋರ್ಟ್ ಅರ್ಜಿ ಪುರಸ್ಕರಿಸಿದ್ದು, ಐಪಿಸಿ 302ರ ಅನ್ವಯಆಗ ಎಸ್‌ಪಿ ಆಗಿದ್ದ ಸುಶೀಲ್ ಕುಮಾರ್, ಹೆಚ್ಚುವರಿ ಎಸ್‌ಪಿ ಆಗಿದ್ದ ಮಾತಾಪ್ರಸಾದ್ ಅವರು ಒಳಗೊಂಡು 18 ಜನರ ವಿರುದ್ಧ ಮೊಕದ್ದಮೆ ದಾಖಲಿಸಲು ಜನವರಿ 18ರಂದು ಆದೇಶಿಸಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.