ADVERTISEMENT

ಹಿಂದಿ ಗೊತ್ತಿದ್ದರೆ ಮಾತ್ರ ಭಾರತೀಯರು ಎಂದು ಹೇಳುವುದು ನಾಚಿಕೆಗೇಡು: ಕನಿಮೋಳಿ

ಏಜೆನ್ಸೀಸ್
Published 13 ಆಗಸ್ಟ್ 2020, 1:44 IST
Last Updated 13 ಆಗಸ್ಟ್ 2020, 1:44 IST
ಕನಿಮೋಳಿ
ಕನಿಮೋಳಿ    

ಚೆನ್ನೈ: ಹಿಂದಿ ಭಾಷೆಯನ್ನು ರಾಷ್ಟ್ರೀಯತೆ ಜತೆ ತಳುಕು ಹಾಕುವುದು ನಾಚಿಕೆಗೇಡು ಎಂದು ಡಿಎಂಕೆ ಸಂಸದೆ ಕನಿಮೋಳಿ ಹೇಳಿದ್ದಾರೆ.

ಆಗಸ್ಟ್ 9ರಂದು ವಿಮಾನ ನಿಲ್ದಾಣದಲ್ಲಿ ತನಗಾದ ಅನುಭವವನ್ನು ಟ್ವೀಟಿಸಿದ್ದ ಕನಿಮೋಳಿ ಹಿಂದಿ ಹೇರಿಕೆಯನ್ನು ಖಂಡಿಸಿದ್ದರು.

'ವಿಮಾನ ನಿಲ್ದಾಣದಲ್ಲಿಕೇಂದ್ರ ಕೈಗಾರಿಕಾ ಭದ್ರತಾ ಮಂಡಳಿಯ ಮಹಿಳಾ ಅಧಿಕಾರಿಯೊಬ್ಬರಿಗೆ ತಮಿಳು ಅಥವಾ ಇಂಗ್ಲಿಷಿನಲ್ಲಿ ಮಾತನಾಡಿ, ನನಗೆ ಹಿಂದಿ ಗೊತ್ತಿಲ್ಲ’ ಎಂದು ಹೇಳಿದೆ. ಅದಕ್ಕೆ ಅವರು ‘ನೀವು ಭಾರತೀಯಳೇ’ ಎಂದು ಪ್ರಶ್ನಿಸಿದರು. ಭಾರತೀಯರಾಗಿದ್ದ ಮಾತ್ರಕ್ಕೆ ಎಲ್ಲರಿಗೂ ಹಿಂದಿ ಹೇಗೆ ಬರಲು ಸಾಧ್ಯ ಎಂಬುದನ್ನು ತಿಳಿಯಬಯಸುತ್ತೇನೆ‘ ಎಂದು ಕನಿಮೋಳಿ ಟ್ವೀಟಿಸಿದ್ದರು.

ADVERTISEMENT

ನಾವು ಭಾರತೀಯರಾಗಿದ್ದ ಮಾತ್ರಕ್ಕೆ ಹಿಂದಿ ಗೊತ್ತಿರಬೇಕೆಂದಿಲ್ಲ ಎಂದು ಕನಿಮೋಳಿ ಪ್ರಶ್ನಿಸಿದ್ದರು. ಈ ಬಗ್ಗೆ ತಮಿಳುನಾಡಿನ ತೂತುಕುಡಿ ಸಂಸದ, ಬಿಜೆಪಿ ಮುಖಂಡ ಎಚ್. ರಾಜಾ ಅವರು ಕನಿಮೋಳಿಯವರಿಗೆ ಹಿಂದಿ ಗೊತ್ತಿದೆ. ದಿವಂಗತ ಮಾಜಿ ಉಪ ಪ್ರಧಾನಿ ಚೌಧರಿ ದೇವಿ ಲಾಲ್ ತಮಿಳುನಾಡಿಗೆ ಭೇಟಿ ನೀಡಿದ್ದಾಗ ಅವರು ಹಿಂದಿಯಲ್ಲೇ ಭಾಷಣ ಮಾಡಿದ್ದರು. ಆಗ ಕನಿಮೋಳಿ ಅದನ್ನು ತಮಿಳಿಗೆ ತರ್ಜುಮೆ ಮಾಡಿದ್ದರು. ಈಗ ಆಕೆ ಹಿಂದಿ ಗೊತ್ತಿಲ್ಲ ಎಂದು ಹೇಳುತ್ತಿರುವುದು ಹಸಿ ಸುಳ್ಳು ಎಂದು ಟ್ವೀಟಿಸಿದ್ದಾರೆ.

ಈ ಬಗ್ಗೆ ಬುಧವಾರ ಸಂಜೆ ಮಾಧ್ಯಮದವರಲ್ಲಿ ಮಾತನಾಡಿದ ಕನಿಮೋಳಿ, ಇಲ್ಲಿ ಹಿಂದಿ ಗೊತ್ತಿದೆಯೋ ಇಲ್ಲವೋ ಎಂಬುದು ಪ್ರಶ್ನೆಯಲ್ಲ. ಆದರೆ ಹಿಂದಿ ಗೊತ್ತಿದ್ದರೆ ಮಾತ್ರ ಭಾರತೀಯರು ಎಂದು ಹೇಳುವುದು ನಾಚಿಕೆಗೇಡು ಎಂದಿದ್ದಾರೆ.

ನಾನು ಶಾಲೆಯಲ್ಲಿ ಹಿಂದಿ ಕಲಿಯಲೇ ಇಲ್ಲ, ನಾನು ಯಾರೊಬ್ಬರಿಗೂ ಹಿಂದಿ ತರ್ಜುಮೆ ಮಾಡಿಕೊಟ್ಟಿಲ್ಲ.ಇಂಗ್ಲಿಷ್ ತರ್ಜುಮೆ ಕೂಡಾ ಮಾಡಿಲ್ಲ.ಆ ಭಾಷೆ ಗೊತ್ತಿಲ್ಲದೆ ಅನುವಾದ ಹೇಗೆ ಸಾಧ್ಯ?ನಾನು ಶಾಲೆಯಲ್ಲಿ ತಮಿಳು ಮತ್ತು ಇಂಗ್ಲಿಷ್ ಮಾತ್ರ ಕಲಿತಿದ್ದೆ. ದೆಹಲಿಯಲ್ಲಿ ಹಲವು ವರ್ಷ ಇದ್ದರೂ ನನಗೆ ಹಿಂದಿ ಬರುವುದಿಲ್ಲ ಎಂದು ಕನಿಮೋಳಿ ಹೇಳಿರುವುದಾಗಿ ಎಎನ್‌ಐಸುದ್ದಿಸಂಸ್ಥೆ ಹೇಳಿದೆ.

ನನಗೆ ಹಿಂದಿ ಬರುವುದಿಲ್ಲ ಎಂದು ಹಲವಾರು ನಾಯಕರಿಗೆ ಗೊತ್ತು. ನನಗೆ ಅಥವಾ ಯಾರಿಗಾದರೂ ಹಿಂದಿ ಗೊತ್ತಿದೆಯೋ ಇಲ್ಲವೋ ಎಂಬುದು ವಿಷಯವಲ್ಲ. ಹಿಂದಿ ಕಲಿತರೆ ಮಾತ್ರ ಭಾರತೀಯ ಆಗುವುದು ಹೇಗೆ ಎಂಬುದು ವಿಷಯ.ಒಂದೇ ವಿಚಾರಧಾರೆ, ಹಿಂದಿ ಮಾತನಾಡುವುದು, ಒಂದೇ ಧರ್ಮವನ್ನು ಪಾಲಿಸಿದರೆ ಮಾತ್ರ ಭಾರತೀಯ ಎಂದು ಪರಿಗಣಿಸುವುದು..ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದಿದ್ದಾರೆ ಕನಿಮೋಳಿ.

ಇನ್ನಷ್ಟು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.