ADVERTISEMENT

ಎಸ್‌ಸಿಒ ಶೃಂಗ | ಭಯೋತ್ಪಾದನೆ ಸಮರ್ಥನೀಯವಲ್ಲ: ಸದಸ್ಯ ರಾಷ್ಟ್ರಗಳ ನಾಯಕರ ಒಕ್ಕೊರಲ ಮಾತು

ಪಿಟಿಐ
Published 4 ಜುಲೈ 2023, 23:30 IST
Last Updated 4 ಜುಲೈ 2023, 23:30 IST
ವರ್ಚುವಲ್‌ ವಿಧಾನದ ಮೂಲಕ ಮಂಗಳವಾರ ನಡೆದ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು
ವರ್ಚುವಲ್‌ ವಿಧಾನದ ಮೂಲಕ ಮಂಗಳವಾರ ನಡೆದ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು    –ಪಿಟಿಐ ಚಿತ್ರ

ನವದೆಹಲಿ: ‘ತಮ್ಮ ರಾಜಕೀಯ ಹಾಗೂ ಜಾಗತಿಕ ರಾಜಕಾರಣದ ಗುರಿಗಳ ಸಾಧನೆಗಾಗಿ ಉಗ್ರರನ್ನು ಹಾಗೂ ಭಯೋತ್ಪಾದಕ ಗುಂಪುಗಳನ್ನು ಬಳಸಿಕೊಳ್ಳುವುದನ್ನು ಒಪ್ಪಲಾಗದು. ಇಂಥ ಕೃತ್ಯ ಅಪರಾಧ ಮತ್ತು ಸಮರ್ಥನೀಯವಲ್ಲ’

ಮಂಗಳವಾರ ನಡೆದ ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಶೃಂಗಸಭೆಯಲ್ಲಿ ಸದಸ್ಯ ರಾಷ್ಟ್ರಗಳ ನಾಯಕರ ಒಕ್ಕೊರಲ ಮಾತಿದು.

ತಮ್ಮ ದೇಶಗಳಲ್ಲಿ ಜಾರಿಯಲ್ಲಿ ಇರುವ ಕಾನೂನುಗಳ ಚೌಕಟ್ಟಿಗೆ ಅನುಗುಣವಾಗಿ ಭಯೋತ್ಪಾದಕ ಸಂಘಟನೆಗಳ ಏಕೀಕೃತ ಪಟ್ಟಿಯನ್ನು ಸಿದ್ಧಪಡಿಸಲು ಸಮ್ಮತಿಸಿದರು. ‘ಭಯೋತ್ಪಾದನೆ, ಪ್ರತ್ಯೇಕವಾದ ಮತ್ತು ತೀವ್ರವಾದಕ್ಕೆ ಮೂಲಭೂತವಾದವೇ ಕಾರಣ. ಇದರ ನಿರ್ಮೂಲನೆ ಅಗತ್ಯ’ ಎಂಬ ಹೇಳಿಕೆಯನ್ನು ಶೃಂಗಸಭೆ ಕೊನೆಗೆ ಬಿಡುಗಡೆ ಮಾಡಿದರು.

ADVERTISEMENT

ಇದಕ್ಕೂ ಮುನ್ನ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ‘ಭಯೋ ತ್ಪಾದನೆ ಮತ್ತು ಭಯೋತ್ಪಾದನೆಗೆ ಹಣಕಾಸು ನೆರವು ನೀಡುವುದನ್ನು ನಿಗ್ರಹಿಸಲು ನಿರ್ಣಾಯಕ ಕ್ರಮದ ಅಗತ್ಯವಿದೆ’ ಎಂದರು.

ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದವನ್ನು ಸೂಚ್ಯವಾಗಿ ಪ್ರಸ್ತಾಪಿಸಿದ ಮೋದಿ, ‘ನಮ್ಮ ಅಗತ್ಯಗಳು, ಸೂಕ್ಷ್ಮ ವಿಷಯಗಳನ್ನು ಅರ್ಥ ಮಾಡಿಕೊಳ್ಳುವುದು ಪ್ರತಿ ಸದಸ್ಯ ರಾಷ್ಟ್ರದ ಜವಾಬ್ದಾರಿ’ ಎಂದರು.

‘ಸದಸ್ಯ ರಾಷ್ಟ್ರಗಳ ನಡುವೆ ಸಂವಹನಕ್ಕೆ ಭಾಷೆ ತೊಡಕಾ ಗಬಾರದು. ಹೀಗಾಗಿ ‘ಭಾಷಿಣಿ’ ಎಂಬ ಕೃತಕಬುದ್ಧಿಮತ್ತೆ (ಎಐ) ಆಧಾರಿತ ವೇದಿಕೆಯನ್ನು ಭಾರತ ಅಭಿವೃದ್ಧಿಪಡಿಸಿದೆ’ ಎಂದೂ ಹೇಳಿದರು. ಕಜಕಸ್ತಾನ, ಕಿರ್ಗಿಸ್ತಾನ, ತಜ ಕಿಸ್ತಾನ, ಉಜ್ಬೇಕಿಸ್ತಾನದ ನಾಯಕರು ಪಾಲ್ಗೊಂಡಿದ್ದರು. ನೂತನ ಸದಸ್ಯ ರಾಷ್ಟ್ರವಾದ ಇರಾನ್‌ ಪ್ರತಿನಿಧಿ ಸಹ ಪಾಲ್ಗೊಂಡಿದ್ದರು.

‘ಶೀತಲ ಸಮರ’ಕ್ಕೆ ಪ್ರಚೋದನೆ: ಷಿ ಎಚ್ಚರಿಕೆ

ಬೀಜಿಂಗ್ (ಪಿಟಿಐ): ‘ಪ್ರಾದೇಶಿಕ ಶಾಂತಿಗೆ ಭಂಗ ತರುವುದಕ್ಕಾಗಿ ಕೆಲ ಬಾಹ್ಯ ಶಕ್ತಿಗಳು ಶೀತಲ ಸಮರಕ್ಕೆ ಪ್ರಚೋದಿಸುತ್ತಿವೆ. ಈ ಬಗ್ಗೆ ಎಸ್‌ಸಿಒ ಸದಸ್ಯ ರಾಷ್ಟ್ರಗಳು ಎಚ್ಚರದಿಂದ ಇರಬೇಕು’ ಎಂದು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಹೇಳಿದರು.

ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು,‘ಜಂಟಿ ಕಾರ್ಯಾಚರಣೆಗಳ ಮೂಲಕ ಭಯೋತ್ಪಾದನೆಯನ್ನು ಮಟ್ಟ ಹಾಕಬೇಕು’ ಎಂದರು. ‘ಸಂಘಟನೆಯ ಸದಸ್ಯ ರಾಷ್ಟ್ರಗಳು ತಮ್ಮ ಆರ್ಥಿಕತೆ ಪುನಶ್ಚೇತನಕ್ಕೆ ವೇಗ ನೀಡುವ ಜೊತೆಗೆ ಪ್ರಾದೇಶಿಕ ಶಾಂತಿ ಹಾಗೂ ಭದ್ರತೆ ಬಗ್ಗೆಯೂ ಗಮನ ಹರಿಸಬೇಕು’ ಎಂದರು.

ತಕ್ಕ ಉತ್ತರ- ಪುಟಿನ್:

ಮಾಸ್ಕೊ(ಎಎಫ್‌ಪಿ): ‘ಉಕ್ರೇನ್‌ ವಿರುದ್ಧ ಸೇನಾ ಕಾರ್ಯಾಚರಣೆ ಕೈಗೊಂಡಿರುವ ಹಿನ್ನೆಲೆಯಲ್ಲಿ ತನ್ನ ಮೇಲೆ ಪಶ್ಚಿಮ ರಾಷ್ಟ್ರಗಳು ಹೇರುತ್ತಿರುವ ಒತ್ತಡ, ನಿರ್ಬಂಧಗಳಿಗೆ ‍ರಷ್ಯಾ ತಕ್ಕ ಉತ್ತರ ನೀಡುವುದನ್ನು ಮುಂದುವರಿಸಲಿದೆ’ ಎಂದು ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.