ಮುಂಬೈ: ಮಹಾರಾಷ್ಟ್ರದ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಮಾತುಗಳು ವಾಸ್ತವಕ್ಕೆ ವಿರುದ್ಧವಾಗಿದ್ದು, ಅರ್ಧ ಸತ್ಯದಿಂದ ಕೂಡಿವೆ. ಶಾಂತಿ ಸಂದೇಶ ನೀಡುವುದೆಂದರೆ ದುರ್ಬಲನಾಗಿದ್ದೇನೆ ಎಂದರ್ಥವಲ್ಲ ಎಂದು ಅಶೋಕ್ ಚೌಹಾಣ್ ಹರಿಹಾಯ್ದಿದ್ದಾರೆ.
ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ಅವರ ಶಾಂತಿ ಸಂದೇಶದಿಂದ ಭಾರತ ಹಲವು ವರ್ಷಗಳ ವರೆಗೆ ಪರಿಣಾಮ ಎದುರಿಸಬೇಕಾಯಿತು ಎಂಬ ಮಹಾರಾಷ್ಟ್ರದ ರಾಜ್ಯಪಾಲ ಕೋಶ್ಯಾರಿ ಹೇಳಿಕೆಗೆ ಪ್ರತಿಕ್ರಿಸಿದ ಕಾಂಗ್ರೆಸ್‌ನ ಹಿರಿಯ ನಾಯಕ ಮತ್ತು ಸಚಿವ, ಇದು ದುರದೃಷ್ಟಕರ ಹೇಳಿಕೆ ಎಂದಿದ್ದಾರೆ.
ಹಾಗಿದ್ದರೆ, ಅಟಲ್ ಬಿಹಾರಿ ವಾಜಪೇಯಿ ಅವರು ಶಾಂತಿಯ ಸಂದೇಶವಾಗಿ, ಉಭಯ ರಾಷ್ಟ್ರಗಳ ಮಾತುಕತೆ ಮತ್ತು ಸಾಮರಸ್ಯಕ್ಕಾಗಿ ಲಾಹೋರ್‌ಗೆ ಬಸ್ ವ್ಯವಸ್ಥೆ ಕಲ್ಪಿಸಿದರು. ಇದಕ್ಕೆ ಏನು ಹೇಳುತ್ತೀರಿ? ಪಾಕಿಸ್ತಾನ ನಿರ್ಮಾತೃ ಮೊಹಮ್ಮದ್ ಆಲಿ ಜಿನ್ನಾ ಅವರ ಸಮಾಧಿಗೆ ಎಲ್‌ಕೆ ಅಡ್ವಾಣಿ ಅವರು ಭೇಟಿ ನೀಡಿದ್ದಕ್ಕೆ ಏನು ಹೇಳುತ್ತೀರಿ? ಪ್ರಧಾನಿ ನರೇಂದ್ರ ಮೋದಿ ಅವರು ಆಹ್ವಾನವಿಲ್ಲದೆಯೇ ನವಾಜ್ ಶರೀಫ್ ಅವರ ಜನ್ಮದಿನದ ಕೂಟದಲ್ಲಿ ಭಾಗವಹಿಸಿದಕ್ಕೆ ಏನು ಹೇಳುತ್ತೀರಿ? ಕೋಶ್ಯಾರಿ ಪ್ರಕಾರ ಇದೆಲ್ಲದರಿಂದ ರಾಷ್ಟ್ರ ಬಲಹೀನವಾಗಿದೆ ಎಂದರ್ಥವೇ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಶಾಂತಿಗೆ ಹೆಚ್ಚು ಪ್ರಾಶಸ್ತ್ಯ ನೀಡಿದ ನೆಹರು ದುರ್ಬಲರೆಂದು ಪರಿಗಣಿಸುವುದಾದರೆ ಮಾಜಿ ಪ್ರಧಾನಿ ವಾಜಪೇಯಿ, ಮಾಜಿ ಗೃಹ ಸಚಿವ ಅಡ್ವಾಣಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರೂ ಕೂಡ ದುರ್ಬಲರೇ? ಎಂದು ಚೌಹಾಣ್ ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.