ADVERTISEMENT

Maharashtra: ಹೀನಾಯ ಸೋಲಿನ ಬೆನ್ನಲ್ಲೇ, ಶರದ್‌ ಪವಾರ್‌ಗೆ ಅಸ್ತಿತ್ವದ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2024, 23:30 IST
Last Updated 23 ನವೆಂಬರ್ 2024, 23:30 IST
<div class="paragraphs"><p>ಶರದ್‌ ಪವಾರ್</p></div>

ಶರದ್‌ ಪವಾರ್

   

ಮುಂಬೈ: ಮಹಾರಾಷ್ಟ್ರದಲ್ಲಿ ಶರದ್‌ ಪವಾರ್ ನೇತೃತ್ವದ ಎನ್‌ಸಿಪಿ ಬಣವು ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ಐದು ತಿಂಗಳ ಅಂತರದಲ್ಲೇ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದೆ. ಐದು ದಶಕದಿಂದ ಮರಾಠ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ 83 ವರ್ಷದ ಶರದ್‌ ‍ಪವಾರ್‌ ಕಂಡ ತೀವ್ರ ಹಿನ್ನಡೆ ಇದು ಎಂದೇ ವಿಶ್ಲೇಷಿಸಲಾಗಿದೆ.

ಇದರ ಬೆನ್ನಲ್ಲೇ, ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿ ಬಣದ ಭವಿಷ್ಯದ ರಾಜಕೀಯದ ಕುರಿತು ಹಲವು ಪ್ರಶ್ನೆಗಳು ಎದುರಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕುಸಿತ ಕಾಣುವ ಸಾಧ್ಯತೆಗಳಿವೆ ಎನ್ನಲಾಗಿದೆ. 

ADVERTISEMENT

2023ರ ಜುಲೈನಲ್ಲಿ ಎನ್‌ಸಿಪಿ ವಿಭಜಿಸಿ, ‘ಮಹಾಯುತಿ’ ಒಕ್ಕೂಟಕ್ಕೆ ಸೇರಿ ಉಪಮುಖ್ಯಮಂತ್ರಿಯಾದ ಅಜಿತ್‌ ಪವಾರ್‌ ಅವರೇ ಚಿಕ್ಕಪ್ಪನ ಮುಂದಿನ ರಾಜಕೀಯ ಉತ್ತರಾಧಿಕಾರಿ ಎಂದು ಮತದಾರರು ತೀರ್ಪು ನೀಡಿದ್ದಾರೆ.

ಅಂತಿಮ ಫಲಿತಾಂಶದ ಪ್ರಕಾರ, ಅಜಿತ್‌ ಪವಾರ್‌ ನೇತೃತ್ವದ ಎನ್‌ಸಿಪಿಯು 59 ಕ್ಷೇತ್ರಗಳಲ್ಲಿ ಸ್ಪರ್ಧಿಸಿ, 41  ವಿಧಾನಸಭಾ ಕ್ಷೇತ್ರಗಳಲ್ಲಿ ಜಯಗಳಿಸಿದೆ. ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿ (ಎಸ್‌ಪಿ) 86 ಕ್ಷೇತ್ರಗಳಲ್ಲಿ ಸ್ಪರ್ಧಿಸಿ, 10 ಕ್ಷೇತ್ರಗಳಲ್ಲಿ ಗೆಲುವು ಪಡೆದಿದೆ.

ಮುಖಭಂಗ: ಮಹಾರಾಷ್ಟ್ರ ವಿಕಾಸ್‌ ಆಘಾಡಿ (ಎಂವಿಎ) ಒಕ್ಕೂಟ ಸ್ಥಾಪನೆಯ ಹಿಂದಿನ ರೂವಾರಿ ಶರದ್‌ ಪವಾರ್‌. ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆಯಲ್ಲಿ 48 ಲೋಕಸಭಾ ಕ್ಷೇತ್ರಗಳ ಪೈಕಿ 30ರಲ್ಲಿ ಎಂವಿಎ ಗೆಲುವು ಪಡೆದಿತ್ತು. ಆದರೆ, ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಭಿನ್ನ ತೀರ್ಪು ನೀಡಿದ್ದಾರೆ.

ಪಕ್ಷದ ಜೊತೆಗೆ ವೈಯಕ್ತಿಕವಾಗಿಯೂ ಶರದ್‌ ಪವಾರ್‌ ಹಿನ್ನಡೆ ಕಂಡಿದ್ದಾರೆ. ಬಾರಾಮತಿ ವಿಧಾನಸಭಾ ಕ್ಷೇತ್ರದಲ್ಲಿ ಉಪಮುಖ್ಯಮಂತ್ರಿ, ಎನ್‌ಸಿಪಿ ನಾಯಕ ಅಜಿತ್‌ ಪವಾರ್ ಅವರು ಒಂದು ಲಕ್ಷ ಮತಗಳ ಅಂತರದಿಂದ ಸಂಬಂಧಿ ಯುಗೇಂದ್ರ ಪವಾರ್‌ ಅವರನ್ನು ಮಣಿಸಿದ್ದಾರೆ.

ಐದು ತಿಂಗಳ ಹಿಂದೆ ಬಾರಾಮತಿ ಲೋಕಸಭಾ ಕ್ಷೇತ್ರದಿಂದ ಶರದ್‌ ಪವಾರ್‌ ಮಗಳು ಸುಪ್ರಿಯಾ ಸುಳೆ ಗೆದ್ದಿದ್ದರು. ಇವರ ವಿರುದ್ಧ ಸ್ಪರ್ಧಿಸಿದ್ದ ಅಜಿತ್‌ ಪವಾರ್‌ ಪತ್ನಿ ಸುನೇತ್ರಾ ಸೋಲುಂಡಿದ್ದರು. 

57 ವರ್ಷದ ರಾಜಕೀಯ ಜೀವನದಲ್ಲಿ ಶರದ್‌ ಪವಾರ್‌ ಅವರು ಬಾರಾಮತಿಯಿಂದ ಶಾಸಕರಾಗಿ, ಸಂಸದರಾಗಿಯೂ ಆಯ್ಕೆಯಾಗಿದ್ದರು. ಈಗ ರಾಜ್ಯಸಭಾ ಸದಸ್ಯರಾಗಿದ್ದು, ಮುಂದಿನ ವರ್ಷ ಸಂಸತ್‌ ಸದಸ್ಯತ್ವದ ಅವಧಿ ಮುಗಿಯಲಿದೆ. ಆನಂತರ ಚುನಾವಣಾ ರಾಜಕೀಯದಿಂದ ದೂರ ಸರಿಯುವುದಾಗಿ ಚುನಾವಣಾ ಪ್ರಚಾರದಲ್ಲಿ ಸುಳಿವು ನೀಡಿದ್ದರು.

ಲೋಕಸಭಾ ಚುನಾವಣೆಯ ನಂತರ ರಾಜ್ಯದ ಉದ್ದಗಲಕ್ಕೂ ಪ್ರವಾಸ ಕೈಗೊಂಡು, ಪಕ್ಷದ ಪರ ಪ್ರಚಾರ ನಡೆಸಿದ್ದ ಶರದ್‌ ಪವಾರ್‌ ಅವರು, ಬಿಜೆಪಿಯ ನಾಯಕರಾದ ಸಮರ್‌ಜಿತ್‌ ಘಾಟ್ಗೆ, ಹರ್ಷವರ್ಧನ್‌ ಪಾಟೀಲ್‌ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿದ್ದರು. ‘ವಿಶ್ವಾಸಘಾತುಕ’ರನ್ನು ಹೀನಾಯವಾಗಿ ಸೋಲಿಸಿ (ಅಜಿತ್‌ಪವಾರ್‌) ಎಂದು ಮತದಾರರಿಗೆ ಶರದ್ ಮಾಡಿದ್ದ ಮನವಿಗೆ  ಸ್ಪಂದನ ಸಿಕ್ಕಿಲ್ಲ. 

ನಾಲ್ಕು ಬಾರಿ ಮುಖ್ಯಮಂತ್ರಿ ಹಾಗೂ ಎರಡು ಅವಧಿಗೆ ಕೇಂದ್ರ ಸಚಿವರಾಗಿರುವ ಶರದ್‌ ಪವಾರ್ ಅವರ ರಾಜಕೀಯ ಮುಸ್ಸಂಜೆಯಲ್ಲಿ ಅವರ ಪಕ್ಷದ ಭವಿಷ್ಯವು ಅನಿಶ್ಚಿತತೆಯತ್ತ ವಾಲಿದೆ.

ಶರದ್‌ ಪವಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.