ಸತಾರಾ/ಮುಂಬೈ: ಸುರಿಯುವ ಜೋರು ಮಳೆಯಲ್ಲಿ ನೆನೆಯುತ್ತಲೇ ರ್‍ಯಾಲಿಯನ್ನು ಉದ್ದೇಶಿಸಿ ನ್ಯಾಷನಲ್ ಕಾಂಗ್ರೆಸ್ ಪಾರ್ಟಿ(ಎನ್‌ಸಿಪಿ) ಅಧ್ಯಕ್ಷ ಶರದ್ ಪವಾರ್ ಭಾಷಣ ಮಾಡಿದ್ದಾರೆ. ಅದರ ವಿಡಿಯೊ ಮತ್ತು ಚಿತ್ರಗಳು ಶುಕ್ರವಾರ ರಾತ್ರಿಯಿಂದ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.
ಸತಾರಾದಲ್ಲಿ ನಡೆದ ರ್‍ಯಾಲಿಯಲ್ಲಿ 79 ವರ್ಷ ವಯಸ್ಸಿನ ರಾಜಕಾರಣಿ ಮಳೆಯಲ್ಲಿ ತೋಯುತ್ತಿದ್ದರೂ ಮಾತು ಮುಂದುವರಿಸುವುದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯನ್ನೇ ಹುಟ್ಟುಹಾಕಿದೆ. ನೆಟಿಜನ್‌ಗಳ ವಾದ–ಪ್ರತಿವಾದಗಳ ನಡುವೆಯೂ ಶರದ್ ಪವಾರ್ ಅನೇಕರ ಮನಸ್ಸು ಗೆಲ್ಲುವಲ್ಲಿ ಈ ವಿಡಿಯೊ ಕಾರಣವಾಗಿದೆ.
‘ವರುಣ ರಾಜ ನಮಗೆ ಆಶೀರ್ವದಿಸಿದ್ದಾನೆ...ಇದು ಮಹಾರಾಷ್ಟ್ರ ರಾಜಕಾರಣದಲ್ಲಿ ಅದ್ಭುತವನ್ನು ಸೃಷ್ಟಿಸಲಿದೆ...ಅಕ್ಟೋಬರ್ 21ರಿಂದ ಇದರ ಆರಂಭವಾಗಲಿದೆ. ಆ ಬಗ್ಗೆ ನನಗೆ ನಂಬಿಕೆಯಿದೆ..‘ ಎಂಬ ಮಾತುಗಳಿಂದ ಪವಾರ್ ಜನರ ಕರತಾಡನ ಪಡೆದುಕೊಂಡರು.
ಕಳೆದ ಐವತ್ತು ವರ್ಷಗಳಿಂದ ಸಾರ್ವಜನಿಕ ರಂಗದಲ್ಲಿರುವ ಶರದ್ ಪವಾರ್ ಯಾವುದೇ ಚುನಾವಣೆಯಲ್ಲಿಯೂ ಸೋಲು ಕಂಡಿಲ್ಲ. ‘ಸತಾರಾ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳು ನಮಗೆ ಬಹುಮುಖ್ಯವಾದವು...ನಮ್ಮ ಅಭ್ಯರ್ಥಿಗಳಾದ ಶ್ರೀನಿವಾಸ್ ಪಾಟೀಲ್ ಮತ್ತು ದೀಪಕ್ ಪವಾರ್ ಗೆಲುವನ್ನು ನಾವು ಖಚಿತಪಡಿಸಬೇಕು‘ ಎಂದು ಪವಾರ್ ಮತದಾರರಿಗೆ ಹೇಳಿದರು.
ಮಹಾರಾಷ್ಟ್ರದ ನಾಲ್ಕು ಅವಧಿಗೆ ಮುಖ್ಯಮಂತ್ರಿಯಾಗಿದ್ದ, ಲೋಕಸಭೆಯಲ್ಲಿ ವಿರೋಧ ಪಕ್ಷದ ಮುಖಂಡ ಹಾಗೂ ಕೇಂದ್ರದಲ್ಲಿ ರಕ್ಷಣಾ ಸಚಿವ, ಕೃಷಿ ಸಚಿವನಾಗಿ ಅಧಿಕಾರ ನಿರ್ವಹಿಸಿರುವ ಶರದ್ ಪವಾರ್ ಮಳೆಯಲ್ಲಿ ನಡೆಸಿರುವ ಭಾಷಣಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟ್ರು ಪ್ರಶಂಸೆ ಪಡೆದಿದ್ದಾರೆ.
ಮಹಾರಾಷ್ಟ್ರ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಗಿರುವ ಬೆನ್ನಲೇ ಎನ್‌ಸಿಪಿಯ ಹಲವು ಸದಸ್ಯರು ಬಿಜೆಪಿ ಸೇರ್ಪಡೆಯಾಗಿದ್ದಾರೆ. 20 ವರ್ಷ ರಾಜಕೀಯ ಅನುಭವ ಹೊಂದಿರುವ ಎನ್‌ಸಿಪಿ ಪಕ್ಷಕ್ಕೆ ಸತಾರಾ ಕ್ಷೇತ್ರವು ಚುನಾವಣಾ ಸ್ಪರ್ಧೆಯ ನಿಟ್ಟಿನಲ್ಲಿ ಮಹತ್ವದ್ದಾಗಿದೆ.
ಸತಾರಾ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಉದಯನ್‌ರಾಜೇ ಭೋಸಲೆ ಮತ್ತು ವಿಧಾನಸಭಾ ಚುನಾವಣೆಗೆ ಶಿವೇಂದ್ರರಾಜೇ ಭೋಸಲೆ ಅವರನ್ನು ಕಣಕ್ಕಿಳಿಸಿದೆ. ಉದಯನ್‌ರಾಜೇ ಎದುರು ಎನ್‌ಸಿಪಿಯ ಶ್ರೀನಿವಾಸ್ ಪಾಟೀಲ್ ಮತ್ತು ಶಿವೇಂದ್ರರಾಜೇ ಎದುರು ದೀಪಕ್ ಸಾಹೇಬ್‌ರಾವ್ ಪವಾರ್ ಸ್ಪರ್ಧಿಸುತ್ತಿದ್ದಾರೆ.
ಮಹಾರಾಷ್ಟ್ರದ ಪಶ್ಚಿಮ ವಲಯದಲ್ಲಿ ಎನ್‌ಸಿಪಿ ತನ್ನ ಸ್ಥಾನಗಳನ್ನು ಉಳಿಸಿಕೊಳ್ಳುವುದು ಈಗ ಸವಾಲಿನ ಸ್ಪರ್ಧೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.