ಮುಂಬೈ: ಪಕ್ಷ ವಿಭಜನೆಯ ಪೆಟ್ಟಿನಿಂದ ತತ್ತರಿಸಿರುವ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಶಿವಸೇನೆ ಮುಖಂಡ ಉದ್ಧವ್ ಠಾಕ್ರೆ ಅವರು ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯ ಪೂರ್ವದಲ್ಲಿ ತಮ್ಮ ಪಕ್ಷವನ್ನು ಬಲಪಡಿಸಲು ರಾಜ್ಯವ್ಯಾಪಿ ಪ್ರವಾಸ ನಡೆಸಲಿದ್ದಾರೆ.
82 ವರ್ಷ ವಯೋಮಾನದ ಪವಾರ್ ಮತ್ತು 62 ವರ್ಷದ ಉದ್ಧವ್ ಇಬ್ಬರೂ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ, ತಮ್ಮ ಪಕ್ಷದಲ್ಲಿನ ಬೆಳವಣಿಗೆಗಳು ಉಭಯ ಮುಖಂಡರಿಗೆ ರಾಜ್ಯವ್ಯಾಪಿ ಪ್ರವಾಸ ಮಾಡುವ ಸಂದರ್ಭಗಳನ್ನು ಸೃಷ್ಟಿಸಿವೆ.
ರಾಜ್ಯದಲ್ಲಿನ ಪ್ರಾದೇಶಿಕ ಮತ್ತು ಸಣ್ಣ ಪಕ್ಷಗಳನ್ನು ಗುರಿಯಾಗಿಸಿ ಬಿಜೆಪಿಯು ಚುನಾವಣಾ ಕಾರ್ಯತಂತ್ರವನ್ನು ರೂಪಿಸುವ ಮೊದಲೇ ಸದ್ಯದ ರಾಜಕೀಯ ಬೆಳವಣಿಗೆಗಳ ಕುರಿತಂತೆ ಜನರ ಬಳಿಗೇ ತೆರಳುವುದು ಮುಖಂಡರ ಪ್ರವಾಸದ ಉದ್ದೇಶ.
ಎರಡೂ ಪಕ್ಷಗಳು ಮಹಾ ವಿಕಾಸ ಆಘಾಡಿ (ಎಂವಿಎ) ಮೈತ್ರಿಕೂಟದ ಭಾಗವಾಗಿದ್ದು, ಕಾಂಗ್ರೆಸ್ ಪಕ್ಷ ಕೂಡಾ ಇದರಲ್ಲಿದೆ. ರಾಜ್ಯ ಪ್ರವಾಸದ ಜೊತೆಗೆ ಮೈತ್ರಿ ಪಕ್ಷಗಳ ಜೊತೆಗೂಡಿ ಪ್ರತ್ಯೇಕ ರ‍್ಯಾಲಿಗಳನ್ನು ಸಂಘಟಿಸಲು ಮುಖಂಡರು ನಿರ್ಧರಿಸಿದ್ದಾರೆ.
‘ಪವಾರ್ ಅವರು ಈಗಾಗಲೇ ಪ್ರವಾಸ ಆರಂಭಿಸಿದ್ದಾರೆ. ಪುಣೆಯಿಂದ ಕರಾಡ್‌ಗೆ ಪ್ರವಾಸ ತೆರಳಿದಾಗ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಬರುವ ದಿನಗಳಲ್ಲಿ ರಾಜ್ಯವ್ಯಾಪಿ ಪ್ರವಾಸ ತೆರಳುವರು’ ಎಂದು ಎನ್‌ಸಿಪಿ ಅಧ್ಯಕ್ಷ ಜಯಂತ್ ಪಾಟೀಲ್ ಹೇಳಿದರು.
ಇತ್ತ, ಶಿವಸೇನೆ (ಉದ್ಧವ್ ಬಣ) ಸಭೆಯಲ್ಲಿ ಮಾತನಾಡಿರುವ ಉದ್ಧವ್ ಠಾಕ್ರೆ ಅವರೂ, ರಾಜ್ಯ ಪ್ರವಾಸ ತೆರಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅವರ ಪುತ್ರ ಆದಿತ್ಯ ಠಾಕ್ರೆ ಈಗಾಗಲೇ ಕಳೆದೊಂದು ವರ್ಷದಿಂದ ಪ್ರವಾಸದಲ್ಲಿದ್ದು, ಹಲವು ಸಭೆಗಳನ್ನೂ ನಡೆಸಿದ್ದಾರೆ.
ಎನ್‌ಸಿಪಿಯಿಂದ ಅಜಿತ್ ಪವಾರ್, ಶಿವಸೇನೆಯಿಂದ ಏಕನಾಥ ಶಿಂದೆ ಅವರು ಬಂಡಾಯ ಎದ್ದಿದ್ದು, ಪ್ರತ್ಯೇಕ ಬಣ ರಚಿಸಿಕೊಂಡಿದ್ದಾರೆ.
ಶಿಂದೆ ಅವರ ಬಂಡಾಯ ಮಹಾರಾಷ್ಟ್ರದಲ್ಲಿ ರಾಜಕೀಯ ಚಿತ್ರಣವನ್ನೇ ಬದಲಿಸಿದೆ. ಶಿಂದೆ ಸದ್ಯ ರಾಜ್ಯದ ಮುಖ್ಯಮಂತ್ರಿ. ಶಿಂದೆ ನೇತೃತ್ವದ ಬಣವೇ ನಿಜವಾದ ಶಿವಸೇನೆ ಎಂದು ಮಾನ್ಯತೆ ನೀಡಿರುವ ಚುನಾವಣಾ ಆಯೋಗವು ‘ಬಿಲ್ಲು ಬಾಣ’ ಚಿಹ್ನೆಯನ್ನೂ ನೀಡಿದೆ.
ಇತ್ತ, ಅಜಿತ್ ಪವಾರ್ ನೇತೃತ್ವದ ಬಣದ ಬಂಡಾಯವು ಎನ್‌ಸಿಪಿಯನ್ನು ಸದ್ಯ ಸಂಕೀರ್ಣ ಸ್ಥಿತಿಗೆ ಒಯ್ದಿದೆ. ಬರುವ ದಿನಗಳಲ್ಲಿ ಯಾವ ರೂಪ ಪಡೆಯುವುದೋ ಎಂಬ ಕುತೂಹಲವನ್ನು ರಾಜಕೀಯ ವಲಯದಲ್ಲಿ ಕೆರಳಿಸಿದೆ.
ವಿರೋಧ ಪಕ್ಷದ ನಾಯಕ ಸ್ಥಾನ; ಸದ್ಯಕ್ಕೆ ಹಕ್ಕು ಪ್ರತಿಪಾದಿಸದಿರಲು ಕಾಂಗ್ರೆಸ್ ನಿರ್ಧಾರ
ಮುಂಬೈ (ಪಿಟಿಐ): ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿ ವಿರೋಧಪಕ್ಷದ ನಾಯಕನ ಸ್ಥಾನ ಕುರಿತಂತೆ ಹಕ್ಕು ಪ್ರತಿಪಾದಿಸದೇ ಕಾದು ನೋಡುವ ನಿಲುವನ್ನು ಕಾಂಗ್ರೆಸ್ ಪಕ್ಷ ಕೈಗೊಂಡಿದೆ.
ಬದಲಾದ ರಾಜಕೀಯ ಚಿತ್ರಣದಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷ ಹಕ್ಕು ಪ್ರತಿಪಾದಿಸಲಿದೆ ಎನ್ನಲಾಗಿತ್ತು. ಆದರೆ ಮಂಗಳವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ವಿಷಯ ಚರ್ಚೆಯಾಗಿಲ್ಲ. ಸಭೆಯಲ್ಲಿ ಎಐಸಿಸಿ ಉಸ್ತುವಾರಿ ಎಚ್.ಕೆ.ಪಾಟೀಲ್ ಸಿಎಲ್‌ಪಿ ನಾಯಕ ಭಾಳಾಸಾಹೇಬ್ ತೋರಟ್ ಸೇರಿ ಪಕ್ಷದ 39 ಶಾಸಕರು ಸಭೆಯಲ್ಲಿ ಭಾಗವಹಿಸಿದ್ದರು. ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷ ಒಟ್ಟು 45 ಸದಸ್ಯರನ್ನು ಹೊಂದಿದೆ.
‘ನಾವು ಪಕ್ಷ ಮತ್ತು ಎಂವಿಎ ಬಲಪಡಿಸುತ್ತೇವೆ. ಪಕ್ಷವು ಉದ್ಧವ್ ಠಾಕ್ರೆ ಮತ್ತು ಶರದ್ ಪವಾರ್ ಅವರನ್ನು ಬೆಂಬಲಿಸಿತ್ತು. ಬೆಳವಣಿಗೆ ಗಮನಿಸುತ್ತಿದ್ದೇವೆ. ವಿರೋಧ ಪಕ್ಷದ ನಾಯಕನ ವಿಷಯ ಚರ್ಚೆಯಾಗಿಲ್ಲ’ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ದಿನದ ಪ್ರಮುಖಾಂಶ
* ಪಕ್ಷದಲ್ಲಿ ಉದ್ಭವಿಸಿರುವ ಬಿಕ್ಕಟ್ಟು ಸಂವಿಧಾನದ 10ನೇ ಪರಿಚ್ಛೇದಕ್ಕೆ ಸಂಬಂಧಿಸಿರುವ ಕಾರಣ ಈ ವಿಷಯದಲ್ಲಿ ಕಾನೂನು ತಜ್ಞರ ಅಭಿಪ್ರಾಯವನ್ನು ಪಡೆಯಲಾಗುವುದು ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.
* ‘ಅಜಿತ್ ಪವಾರ್ ಬಣದಲ್ಲಿ 13ಕ್ಕಿಂತ ಹೆಚ್ಚು ಶಾಸಕರಿಲ್ಲ. ಶರದ್ ಪವಾರ್ ಅವರು ಬುಧವಾರ ಬೆಳಿಗ್ಗೆ ಸಭೆ ಕರೆದಿದ್ದು ಅಲ್ಲಿ ಸ್ಪಷ್ಟ ಚಿತ್ರಣ ದೊರೆಯಲಿದೆ’ ಎಂದು ಪಕ್ಷದ ರಾಷ್ಟ್ರೀಯ ವಕ್ತಾರ ಕ್ಲೈಡ್ ಕ್ರಾಸ್ಟ್ರೊ ತಿಳಿಸಿದರು.
* ಎನ್‌ಸಿಪಿ ರಾಜ್ಯ ಅಧ್ಯಕ್ಷ ಸ್ಥಾನದಿಂದ ತನ್ನನ್ನು ಪದಚ್ಯುತಗೊಳಿಸುವ ಯಾವುದೇ ಅಧಿಕಾರ ಅಜಿತ್ ಪವಾರ್ ನೇತೃತ್ವದ ಬಣಕ್ಕೆ ಇಲ್ಲ’ ಎಂದು ಜಯಂತ್ ಪಾಟೀಲ್ ಅವರು ಪ್ರತಿಪಾದಿಸಿದ್ದಾರೆ.
* ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಮತ್ತು ಕಾರ್ಯಾಧ್ಯಕ್ಷ ನಸೀಂ ಖಾನ್ ಅವರು ಶರದ್ ಪವಾರ್ ಅವರನ್ನು ಭೇಟಿಯಾಗಿ ಚರ್ಚಿಸಿದ್ದು ಕಾಂಗ್ರೆಸ್ ಎಂವಿಎ ಜೊತೆಗಿರಲಿದೆ ಎಂದು ಭರವಸೆ ನೀಡಿದ್ದಾರೆ.
* ಎನ್‌ಸಿಪಿಯ ಹೆಚ್ಚಿನ ಶಾಸಕರು ಅಜಿತ್ ಪವಾರ್ ಜೊತೆಗಿದ್ದಾರೆ. ತಮ್ಮ ಜೊತೆ ಎಷ್ಟು ಶಾಸಕರಿದ್ದಾರೆ ಎಂದು ಶರದ್ ಪವಾರ್ ಅವರು ಬಹಿರಂಗಪಡಿಸಲಿ ಎಂದು ಬಿಜೆಪಿ ಮುಖಂಡ ಸಚಿವ ಸುಧೀರ್ ಮುಂಗಟಿವಾರ್ ಸವಾಲೆಸೆದಿದ್ದಾರೆ.
ಅನರ್ಹತೆ: ಸ್ಪೀಕರ್‌ಗೆ ಸ್ಪಷ್ಟ ನಿರ್ದೇಶನ ಕೋರಿ ‘ಸುಪ್ರೀಂ’ ಮೆಟ್ಟಿಲೇರಿದ ಶಿವಸೇನೆ (ಉದ್ಧವ್)
ನವದೆಹಲಿ: ‘ಶಿಂದೆ ನೇತೃತ್ವದ ಪಕ್ಷದ ಬಂಡಾಯ ಶಾಸಕರ ಅನರ್ಹತೆಗೆ ಸಂಬಂಧಿಸಿ ತ್ವರಿತ ನಿರ್ಧಾರ ತೆಗೆದುಕೊಳ್ಳಲು ಸ್ಪೀಕರ್ ಅವರಿಗೆ ನಿರ್ದೇಶಿಸಬೇಕು‘ ಎಂದು ಶಿವಸೇನೆ (ಉದ್ಧವ್ ಬಣ) ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
‘ಸ್ಪೀಕರ್ ರಾಹುಲ್ ನಾರ್ವೇಕರ್ ಪಕ್ಷಪಾತ ಧೋರಣೆ ಹೊಂದಿದ್ದಾರೆ ಸುಪ್ರೀಂ ಕೋರ್ಟ್‌ನ ಮೇ 11ರ ತೀರ್ಪಿನ ನಂತರವು ಈ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳುವುದನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದ್ದಾರೆ’ ಎಂದು ಆರೋಪಿಸಿದೆ.
ಶಿವಸೇನೆ (ಉದ್ಧವ್ ಬಣ) ಶಾಸಕ ಸುನೀಲ್ ಪ್ರಭು ಅವರ ಅರ್ಜಿ ಸಲ್ಲಿಸಿದ್ದಾರೆ. ಇವರು ಶಿವಸೇನೆ ವಿಭಜನೆ ಪೂರ್ವದಲ್ಲಿ ಮುಖ್ಯ ಸಚೇತಕರಾಗಿದ್ದರು. ಅನರ್ಹತೆ ಕೋರಿದ್ದ ಅರ್ಜಿ ಒಂದು ವರ್ಷದಿಂದ ಬಾಕಿ ಉಳಿದಿದೆ ಎಂದು ಪಕ್ಷ ಹೇಳಿದೆ.
‘ತೀರ್ಮಾನ ತೆಗೆದುಕೊಳ್ಳಲು ಸ್ಪೀಕರ್ ಅವರು ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿರುವ ಕಾರಣ ಸಂವಿಧಾನದ ವಿಧಿ 32ರ ಅನ್ವಯ ದತ್ತವಾಗಿರುವ ಅಧಿಕಾರ ಬಳಸಿ ಕೋರ್ಟ್ ಅನರ್ಹತೆ ಕುರಿತು ತೀರ್ಮಾನ ಪ್ರಕಟಿಸಬೇಕು’ ಎಂದು ವಕೀಲರಾದ ನಿಶಾಂತ್ ಪಾಟೀಲ್ ಮತ್ತು ಅಮಿತ್ ಆನಂದ್ ತಿವಾರಿ ಮೂಲಕ ಸಲ್ಲಿರುವ ಅರ್ಜಿಯಲ್ಲಿ ವಿನಂತಿಸಿದ್ದಾರೆ.
‘ನಿಗದಿತ ಅವಧಿಯಲ್ಲಿ ಸ್ಪೀಕರ್ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಿದೆ. ಆದರೆ ಸ್ಪೀಕರ್ ಅವರು ಈ ಕುರಿತು ಒಂದೂ ಸಭೆ ನಡೆಸಿಲ್ಲ. ಮೇ 15 ಮೇ 23 ಮತ್ತು ಜೂನ್ 2ರಂದು ಪ್ರತ್ಯೇಕವಾಗಿ ಮನವಿ ಸಲ್ಲಿಸಲಾಗಿದೆ. ಆದರೂ ಸಾಂವಿಧಾನಿಕ ಕರ್ತವ್ಯ ನಿಭಾಯಿಸುವಲ್ಲಿ ಅವರು ವಿಫಲರಾಗಿದ್ದಾರೆ’ ಎಂದು ಹೇಳಿದೆ.
ಶಾಸಕರ ಅನರ್ಹತೆ ಕೋರಿ ಒಟ್ಟು 16 ಅರ್ಜಿಗಳನ್ನು ಜೂನ್ 23 2022ರಂದು ಸಲ್ಲಿಸಲಾಗಿತ್ತು. ಆಗ ಸ್ಪೀಕರ್ ಸ್ಥಾನದಲ್ಲಿದ್ದ ಡೆಪ್ಯುಟಿ ಸ್ಪೀಕರ್ ಅವರಿಗೆ ಜೂನ್ 25 2022ರಂದು ನೋಟಿಸ್ ಜಾರಿಯಾಗಿದ್ದು ಪ್ರತಿಕ್ರಿಯೆ ದಾಖಲಿಸಲು ಬಂಡಾಯ ಶಾಸಕರಿಗೆ ಜೂನ್ 27 2022ರವರೆಗೂ ಅವಕಾಶ ನೀಡಲಾಗಿತ್ತು. ಜೂನ್ 27 2022ರ ಆದೇಶದಲ್ಲಿ ಶಿಂದೆ ಭರತ್ ಗೋಗವಾಲೆ ಮತ್ತಿತರರಿಗೆ ಜುಲೈ 2022ರವರೆಗೂ ಸುಪ್ರೀಂ ಕೋರ್ಟ್ ಅವಕಾಶ ನೀಡಿತ್ತು. ಆದರೆ ಈ ದಿನದವರೆಗೂ ಯಾವುದೇ ಪ್ರತಿಕ್ರಿಯೆ ದಾಖಲಾಗಿಲ್ಲ. ಹೀಗಾಗಿ ಪ್ರತಿಕ್ರಿಯೆ ದಾಖಲಿಸಲು ಅವರಿಗಿದ್ದ ಅವಕಾಶ ಮುಗಿದಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.
ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪರ್ಯಾಯವಾಗಿ ಯಾರೊಬ್ಬರೂ ಇಲ್ಲ. ಅದೇ ವಾಸ್ತವ ಸ್ಥಿತಿ.-ಅಜಿತ್ ಪವಾರ್ ಉಪ ಮುಖ್ಯಮಂತ್ರಿ.
ನನ್ನ ಚಿಂತನೆ ಸಿದ್ಧಾಂತವನ್ನು ಕಡೆಗಣಿಸಿದವರು ನನ್ನ ಭಾವಚಿತ್ರ ಬಳಸಬಾರದು. ನಾನು ಸ್ಥಾಪಿಸಿರುವ ಜಯಂತ್ ಪಾಟೀಲ್ ಅಧ್ಯಕ್ಷರಾಗಿರುವ ಪಕ್ಷ ಮಾತ್ರವೇ ಭಾವಚಿತ್ರ ಬಳಸಬೇಕು.-ಶರದ್ ಪವಾರ್, ಎನ್‌ಸಿಪಿ ಮುಖ್ಯಸ್ಥ
ನಮ್ಮದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ). ಅವರದು ನೋಷನಲ್ ಪಾರ್ಟಿ (ಕಾಲ್ಪನಿಕ). ಒಂಭತ್ತು ಶಾಸಕರನ್ನು ಹೊರತುಪಡಿಸಿ ಪಕ್ಷದ ಉಳಿದೆಲ್ಲಾ ಶಾಸಕರು ನಮ್ಮ ಜೊತೆಗೇ ಇದ್ದಾರೆ.-ಜಯಂತ್ ಪಾಟೀಲ್ ಅಧ್ಯಕ್ಷ ಎನ್‌ಸಿಪಿ
ಸಿಬಿಐ ಇ.ಡಿ ಮತ್ತು ಐ.ಟಿ ವರ್ತುಲ ಕುರಿತಂತೆ ಮಹಾರಾಷ್ಟ್ರದ ಜನತೆಗೆ ಅರಿವಿದೆ. ರಾಜ್ಯದ ಜನರು ಬಿಜೆಪಿಗೆ ವಿರುದ್ಧವಾಗಿ ಇದ್ದಾರೆ.-ನಾನಾ ಪಟೋಲೆ ಅಧ್ಯಕ್ಷ ಮಹಾರಾಷ್ಟ್ರ ಕಾಂಗ್ರೆಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.