ADVERTISEMENT

10 ವರ್ಷಗಳಲ್ಲಿ ಹುತಾತ್ಮ ಯೋಧರ ಸಂಖ್ಯೆ ನೀಡಿ: ಸರ್ಕಾರಕ್ಕೆ ಸಂಜಯ್ ರಾವುತ್ ಮನವಿ

ಪಿಟಿಐ
Published 9 ಜುಲೈ 2024, 12:17 IST
Last Updated 9 ಜುಲೈ 2024, 12:17 IST
ಸಂಜಯ್‌ ರಾವುತ್
ಸಂಜಯ್‌ ರಾವುತ್   

ಮುಂಬೈ: ಕಳೆದ 10 ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಯ ಹುತಾತ್ಮರಾದ ಯೋಧರ ನಿಖರ ಸಂಖ್ಯೆ ನೀಡುವಂತೆ ಕೇಂದ್ರ ಸರ್ಕಾರವನ್ನು ಸಂಸದ ಸಂಜಯ್ ರಾವುತ್ ಮಂಗಳವಾರ ಒತ್ತಾಯಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಯೋಧರು ಅತಿ ಹೆಚ್ಚು ಹುತಾತ್ಮರಾಗಿದ್ದಾರೆ. 2019ರಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನ 370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ಕೇಂದ್ರಾಡಳಿತ ಪ್ರದೇಶದ ಪರಿಸ್ಥಿತಿ ಹದಗೆಡುತ್ತಿದೆ’ ಎಂದು ಹೇಳಿದ್ದಾರೆ.

ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹುತಾತ್ಮ ಯೋಧರ ಸಂಖ್ಯೆಯ ಮಾಹಿತಿ ನೀಡುವಂತೆ ನಾವು ಒತ್ತಾಯಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ADVERTISEMENT

ನಿನ್ನೆ (ಸೋಮವಾರ) ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಮಚೇಡಿ–ಕಿಂಡ್ಲಿ–ಮೊಲ್ಹಾರ್‌ ರಸ್ತೆಯಲ್ಲಿ ಯೋಧರು ಗಸ್ತು ತಿರುಗುತ್ತಿದ್ದ ವೇಳೆ ಭಯೋತ್ಪಾದಕರು ನಡೆಸಿದ ಗ್ರೆನೇಡ್‌ ಮತ್ತು ಗುಂಡಿನ ದಾಳಿಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದು, ಹಲವು ಯೋಧರು ಗಾಯಗೊಂಡಿದ್ದಾರೆ.

ಈ ಘಟನೆ ಬೆನ್ನಲ್ಲೇ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿರುವ ರಾವುತ್‌, ‘ಕೇಂದ್ರಾಡಳಿತ ಪ್ರದೇಶದಲ್ಲಿ ನಡೆಯುತ್ತಿರುವ ದಾಳಿಗಳನ್ನು ತಡೆಯುವ ಹೊಣೆಗಾರಿಕೆ ಯಾರದು?, ಆ ಜವಾಬ್ದಾರಿಯು ಪ್ರಧಾನ ಮಂತ್ರಿ, ಗೃಹ ಮಂತ್ರಿ ಮತ್ತು ರಕ್ಷಣಾ ಮಂತ್ರಿಯವರದ್ದಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.