ADVERTISEMENT

ಭಾರತದ ಜಿಡಿಪಿಯಲ್ಲಿ ಕೃಷಿ ಪಾಲು ಶೇ 35ರಿಂದ ಶೇ 15ಕ್ಕೆ ಕುಸಿತ: ಕೇಂದ್ರ ಸರ್ಕಾರ

ಪಿಟಿಐ
Published 19 ಡಿಸೆಂಬರ್ 2023, 10:30 IST
Last Updated 19 ಡಿಸೆಂಬರ್ 2023, 10:30 IST
<div class="paragraphs"><p>ಗುಜರಾತ್‌ನ ಅಹಮದಾಬಾದ್‌ನಲ್ಲಿ ಮಾರುಕಟ್ಟೆಯಲ್ಲಿ ಗೋಧಿ ಸಂಸ್ಕರಣೆಯಲ್ಲಿ ನಿರತ ಕಾರ್ಮಿಕರು</p></div>

ಗುಜರಾತ್‌ನ ಅಹಮದಾಬಾದ್‌ನಲ್ಲಿ ಮಾರುಕಟ್ಟೆಯಲ್ಲಿ ಗೋಧಿ ಸಂಸ್ಕರಣೆಯಲ್ಲಿ ನಿರತ ಕಾರ್ಮಿಕರು

   

ರಾಯಿಟರ್ಸ್ ಚಿತ್ರ

ನವದೆಹಲಿ: ‘ಕೈಗಾರಿಕೆ ಮತ್ತು ಸೇವಾ ವಲಯದ ಕ್ಷಿಪ್ರ ಬೆಳವಣಿಗೆಯಿಂದಾಗಿ ಭಾರತದ ಜಿಡಿಪಿಯಲ್ಲಿ ಕೃಷಿ ವಲಯದ ಪಾಲು 2023ರಲ್ಲಿ ಶೇ 15ಕ್ಕೆ ಕುಸಿದಿದೆ. 1990–91ರಲ್ಲಿ ಕೃಷಿ ಕ್ಷೇತ್ರದ ಪಾಲು ಶೇ 35ರಷ್ಟಿತ್ತು’ ಎಂದು ಕೇಂದ್ರ ಸರ್ಕಾರ ಮಂಗಳವಾರ ಹೇಳಿದೆ.

ADVERTISEMENT

ಲೋಕಸಭೆಯಲ್ಲಿ ಮಂಗಳವಾರ ಲಿಖಿತ ರೂಪದಲ್ಲಿ ಉತ್ತರ ನೀಡಿರುವ ಕೃಷಿ ಸಚಿವ ಅರ್ಜುನ್ ಮುಂಡಾ, ‘ಈ ಕುಸಿತ ಕೃಷಿ ವಲಯದ ಉತ್ಪಾದನೆಯ ಒಟ್ಟು ಕುಸಿತ ಅಲ್ಲ. ಬದಲಿಗೆ ಕೈಗಾರಿಕಾ ವಲಯದ ಬೆಳವಣಿಗೆಯಿಂದ ಕೃಷಿ ವಲಯದ ಪಾಲು ಕುಸಿದಿದೆ’ ಎಂದಿದ್ದಾರೆ.

‘ಜಾಗತಿಕ ಮಾರುಕಟ್ಟೆಗೆ ಹೋಲಿಸಿದಲ್ಲಿ ಕೃಷಿ ಹಾಗೂ ಅದರ ಪೂರಕ ವಲಯವು ಕಳೆದ ಐದು ವರ್ಷಗಳಲ್ಲಿ ಶೇ 4ರ ವೃದ್ಧಿ ದರದ ಮೂಲಕ ಪ್ರಗತಿಯ ಹಾದಿಯಲ್ಲಿದೆ. ಕಳೆದ ಒಂದು ದಶಕದಲ್ಲಿ ಜಾಗತಿಕ ಮಟ್ಟದಲ್ಲೂ ಜಿಡಿಪಿಗೆ ಕೃಷಿ ವಲಯದ ಪಾಲು ಕುಸಿದಿದೆ. ಇತ್ತೀಚಿನ ವರ್ಷಗಳಲ್ಲಿ ಇದು ಶೇ 4ರ ದರದಲ್ಲಿದೆ’ ಎಂದಿದ್ದಾರೆ.

‘ಕೃಷಿ ವಲಯದ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರವು ಹಲವು ಕಾರ್ಯಕ್ರಮಗಳು, ಯೋಜನೆಗಳು ಮತ್ತು ನೀತಿಗಳನ್ನು ಜಾರಿಗೆ ತರುತ್ತಿದೆ. ಜತೆಗೆ ಸುಸ್ಥಿರ ಕೃಷಿಯನ್ನು ಉತ್ತೇಜಿಸುತ್ತಿದೆ. ಮೂಲಸೌಕರ್ಯಗಳನ್ನು ಬಲಗೊಳಿಸುತ್ತಿದೆ. ಆ ಮೂಲಕ ರೈತರಿಗೆ ಲಾಭದಾಯಕ ಕೃಷಿಯನ್ನು ಖಾತ್ರಿಪಡಿಸುತ್ತಿದೆ’ ಎಂದು ಹೇಳಿದ್ದಾರೆ.

‘2019ರಲ್ಲಿ ಕೃಷಿ ಸಮ್ಮಾನ್ ಯೋಜನೆ ಜಾರಿಗೊಳಿಸಲಾಯಿತು. ಯೋಜನೆ ಮೂಲಕ ಪ್ರತಿ ರೈತರಿಗೆ ಮೂರು ಕಂತುಗಳಲ್ಲಿ ವರ್ಷಕ್ಕೆ ₹6 ಸಾವಿರ ನೀಡುವ ಯೋಜನೆ ಇದಾಗಿದೆ. ಕಳೆದ ನವೆಂಬರ್ 30ರವರೆಗೆ 11 ಕೋಟಿ ರೈತರಿಗೆ ಒಟ್ಟು ₹2.81 ಲಕ್ಷ ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ’ ಎಂದು ಮುಂಡಾ ಲೋಕಸಭೆಗೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.