ಮುಂಬೈ: ‘ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಮಹಾ ವಿಕಾಸ ಅಘಾಡಿಯ ಮಿತ್ರ ಪಕ್ಷವಾದ ಕಾಂಗ್ರೆಸ್‌ನ ಸ್ಥಳೀಯ ಮುಖಂಡರು ಸೀಟು ಹಂಚಿಕೆಯ ನಿರ್ಧಾರ ತೆಗೆದುಕೊಳ್ಳಲು ಅಸಮರ್ಥರು’ ಎಂದು ಶಿವಸೇನಾ (ಯುಬಿಟಿ) ಮುಖಂಡ ಸಂಜಯ ರಾವುತ್ ಶುಕ್ರವಾರ ಆರೋಪಿಸಿದ್ದಾರೆ.
ವಿಧಾನಸಭೆಯ ಒಟ್ಟು 288 ಕ್ಷೇತ್ರಗಳಲ್ಲಿ ಮಹಾವಿಕಾಸ ಅಘಾಡಿಯ ಮಿತ್ರ ಪಕ್ಷಗಳಾದ ಕಾಂಗ್ರೆಸ್, ಶಿವಸೇನಾ (ಯುಬಿಟಿ) ಹಾಗೂ ಎನ್‌ಸಿಪಿ (ಎಸ್‌ಪಿ) ಈವರೆಗೂ 200 ಕ್ಷೇತ್ರಗಳ ಸೀಟು ಹಂಚಿಕೆಯನ್ನು ಅಂತಿಮಗೊಳಿಸಿವೆ. ಸೀಟು ಹಂಚಿಕೆ ಕುರಿತಂತೆ ಕಾಂಗ್ರೆಸ್‌ನ ಕೆ.ಸಿ. ವೇಣುಗೋಪಾಲ, ಮುಕುಲ್ ವಾಸ್ನಿಕ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಮೇಶ್ ಚೆನ್ನಿತ್ತಾಲ ಅವರೊಂದಿಗೆ ಸಮಾಲೋಚನೆ ನಡೆಸಲಾಗಿದೆ. ರಾಹುಲ್ ಗಾಂಧಿ ಅವರೊಂದಿಗೂ ಮಾತನಾಡಲಿದ್ದೇನೆ’ ಎಂದಿದ್ದಾರೆ.
‘ಬಾಕಿ ಉಳಿದಿರುವ ಸೀಟುಗಳ ಹಂಚಿಕೆ ನಿರ್ಧಾರವನ್ನು ತ್ವರಿತವಾಗಿ ತೆಗೆದುಕೊಳ್ಳಬೇಕಿದೆ. ಸದ್ಯ ಸಮಯದ ಅಭಾವವಿದೆ. ಮಹಾರಾಷ್ಟ್ರದಲ್ಲಿರುವ ಕಾಂಗ್ರೆಸ್ ನಾಯಕರು ನಿರ್ಧಾರ ತೆಗೆದುಕೊಳ್ಳುತ್ತಿಲ್ಲ. ಪ್ರತಿ ಪ್ರಸ್ತಾವನೆಯನ್ನೂ ಅವರು ಪದೇ ಪದೇ ದೆಹಲಿಗೆ ಕಳುಹಿಸುತ್ತಿದ್ದಾರೆ. ಆನಂತರವಷ್ಟೇ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ. ಏನೇ ಆದರೂ, ತ್ವರಿತವಾಗಿ ನಿರ್ಧಾರ ತೆಗೆದುಕೊಳ್ಳಬೇಕಿದೆ’ ಎಂದು ರಾವುತ್ ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ, ‘20ರಿಂದ 25 ಕ್ಷೇತ್ರಗಳ ಕುರಿತು ನಿರ್ಧಾರ ತೆಗೆದುಕೊಳ್ಳಬೇಕಿದೆ. ಇವುಗಳ ಕುರಿತು ಕೇಂದ್ರ ಸಮಿತಿಯ ಮಾರ್ಗದರ್ಶನ ಕೋರಲಾಗಿದೆ’ ಎಂದಿದ್ದಾರೆ.
‘ಮಹಾ ವಿಕಾಸ ಅಘಾಡಿಯ ಪಕ್ಷಗಳ ನಡುವಿನ ಸೀಟು ಹಂಚಿಕೆಯ ಅಂತಿಮ ಸಭೆಯು ಗುರುವಾರ ನಡೆದಿದೆ. ಅ. 18 ಅಥವಾ 19ರೊಳಗೆ ಎಲ್ಲಾ 288 ಕ್ಷೇತ್ರಗಳಲ್ಲಿನ ಸೀಟು ಹಂಚಿಕೆ ನಿರ್ಧಾರ ಅಂತಿಮಗೊಳಿಸಲು ಪ್ರಯತ್ನಿಸಲಾಗುವುದು’ ಎಂದಿದ್ದಾರೆ.
2024ರ ಮೇನಲ್ಲಿ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ಮಹಾ ವಿಕಾಸ ಅಘಾಡಿಯು 48 ಕ್ಷೇತ್ರಗಳಲ್ಲಿ 30 ಕ್ಷೇತ್ರಗಳನ್ನು ಗೆದ್ದಿತ್ತು. ವಿಧಾನಸಭಾ ಚುನಾವಣೆಯಲ್ಲಿ ನ. 20ರಂದು ಮತದಾನ ನಡೆಯಲಿದೆ. ನ. 23ರಂದು ಮತ ಎಣಿಕೆಗೆ ಚುನಾವಣಾ ಆಯೋಗವು ದಿನಾಂಕ ನಿಗದಿಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.