ತಿರುವನಂತಪುರ: ತಿರುವನಂತಪುರ ಲೋಕಸಭಾ ಕ್ಷೇತ್ರದಿಂದ ಮೂರನೇ ಸಲ ಸ್ಪರ್ಧಿಸಿ, ಹ್ಯಾಟ್ರಿಕ್ ಸಾಧನೆಗೆ ಯತ್ನಿಸುತ್ತಿರುವ ಕಾಂಗ್ರೆಸ್ ಮುಖಂಡ ಶಶಿ ತರೂರ್, ಮೀನು ಮಾರುಕಟ್ಟೆಗೆ ಭೇಟಿ ನೀಡಿದ್ದ ಬಗ್ಗೆ ಮಾಡಿದ ಟ್ವೀಟ್‌ನಿಂದ ಪೇಚಿಗೆ ಸಿಲುಕಿದ್ದಾರೆ.
ಈ ಟ್ವೀಟ್ ಈಗ ವಿವಾದಕ್ಕೂ ಕಾರಣವಾಗಿದ್ದು, ಆಡಳಿತಾರೂಢ ಸಿಪಿಎಂ ಹಾಗೂ ಬಿಜೆಪಿ, ತರೂರ್ ಅವರನ್ನು ತರಾಟೆಗೆ ತೆಗೆದುಕೊಂಡಿದೆ. ‘ತರೂರ್ ಮೀನುಗಾರರನ್ನು ಅವಮಾನಿಸಿದ್ದು, ಕೂಡಲೇ ಅವರ ಕ್ಷಮೆ ಕೇಳಬೇಕು’ ಎಂದು ಉಭಯ ಪಕ್ಷಗಳು ಆಗ್ರಹಿಸಿವೆ.
ಇತ್ತೀಚೆಗೆ ಮೀನು ಮಾರುಕಟ್ಟೆಗೆ ಹೋಗಿದ್ದ ತರೂರ್, ‘ನನ್ನಂತಹ ಶುದ್ಧ ಸಸ್ಯಹಾರಿ ಸಂಸದನಲ್ಲಿ ಅಸಹ್ಯ ಹುಟ್ಟಿಸುವಂತಿದ್ದರೂ ಮೀನು ಮಾರುಕಟ್ಟೆಯಲ್ಲಿ ಭಾರಿ ಉತ್ಸಾಹ ಕಂಡೆ’ ಎಂಬುದಾಗಿ ಟ್ವೀಟ್ ಮಾಡಿದ್ದರು.
‘ಇದು ಮೀನುಗಾರರಿಗೆ ಮಾಡಿದ ಅವಮಾನ. ಕೂಡಲೇ ತರೂರ್ ಕ್ಷಮೆಯಾಚಿಸಬೇಕು’ ಎಂದು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕುಮ್ಮನಂ ರಾಜಶೇಖರನ್ ಒತ್ತಾಯಿಸಿದ್ದಾರೆ. ‘ತರೂರ್ ನಮ್ಮನ್ನು ಅವಮಾನಿಸಿದ್ದಾರೆ’ ಎಂದು ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊಚ್ಚಿ, ಕೊಲ್ಲಂ, ಕೋಯಿಕ್ಕೋಡ್‌ನಲ್ಲಿ ಮೀನುಗಾರರು ಪ್ರತಿಭಟಿಸಿದ್ದಾರೆ.
ತಮ್ಮ ಟ್ವೀಟ್ ವಿವಾದಕ್ಕೆ ಕಾರಣವಾದ ನಂತರ ತರೂರ್ ಮತ್ತೊಂದು ಟ್ವೀಟ್ ಮಾಡಿದ್ದಾರೆ. ತಾವು ಬಳಸಿರುವ ಇಂಗ್ಲಿಷ್ ಪದಗಳಿಗೆ ಇಂಗ್ಲಿಷ್–ಮಲಯಾಳ ಆನ್‌ಲೈನ್ ನಿಘಂಟಿನಲ್ಲಿ ನೀಡಿರುವ ಅರ್ಥಗಳನ್ನು ಉಲ್ಲೇಖಿಸಿ, ‘ನನ್ನ ಇಂಗ್ಲಿಷ್ ಅನ್ನು ಅರ್ಥ ಮಾಡಿಕೊಳ್ಳಲು ಕಷ್ಟಪಡುತ್ತಿರುವ ಮಲಯಾಳಿ ಎಡಪಂಥೀಯರಿಗೆ ಈ ಶಬ್ದಾರ್ಥ’ ಎಂದು ತಿರುಗೇಟು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.