ADVERTISEMENT

ಕಾಳಿ ಮಾತೆ ಕುರಿತಾದ ಹೇಳಿಕೆ: ಮಹುವಾ ಮೊಯಿತ್ರಾ ಬೆಂಬಲಕ್ಕೆ ನಿಂತ ಶಶಿ ತರೂರ್‌

ಪಿಟಿಐ
Published 6 ಜುಲೈ 2022, 10:54 IST
Last Updated 6 ಜುಲೈ 2022, 10:54 IST
ಕಾಂಗ್ರೆಸ್‌ ಸಂಸದ ಶಶಿ ತರೂರ್‌ | ಪ್ರಜಾವಾಣಿ ಚಿತ್ರ
ಕಾಂಗ್ರೆಸ್‌ ಸಂಸದ ಶಶಿ ತರೂರ್‌ | ಪ್ರಜಾವಾಣಿ ಚಿತ್ರ   

ನವದೆಹಲಿ: ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅವರು ತೃಣಮೂಲ ಕಾಂಗ್ರೆಸ್‌ ಸಂಸದೆ ಮಹುವಾ ಮೊಯಿತ್ರಾ ಅವರ ಬೆಂಬಲಕ್ಕೆ ನಿಂತಿದ್ದಾರೆ. ಕಾಳಿ ಮಾತೆ ಕುರಿತಾದ ಮಹುವಾ ಹೇಳಿಕೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ದಾಳಿ ನಡೆಸುತ್ತಿರುವವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವೈಯಕ್ತಿಕ ಧಾರ್ಮಿಕ ಆಚರಣೆಗಳನ್ನು ಅವರವರ ಇಚ್ಛೆಯಂತೆ ಖಾಸಗಿಯಾಗಿ ಆಚರಿಸಲು ಬಿಡಬೇಕು. ಇದರ ಬಗ್ಗೆ ಗಂಭೀರವಾಗಿ ಆಲೋಚಿಸಬಾರದು ಎಂದು ಶಶಿ ತರೂರ್‌ ಒತ್ತಿ ಹೇಳಿದ್ದಾರೆ.

ಮೊಯಿತ್ರಾ ಅವರು ಮಂಗಳವಾರ, ಕಾಳಿ ಮಾತೆಯನ್ನು ಮಾಂಸಾಹಾರ ಮತ್ತು ಮದ್ಯ ಸೇವನೆ ಮಾಡುವ ದೇವತೆ ಎಂದು ಪೂಜಿಸುತ್ತೇನೆ ಎಂದು ಟ್ವೀಟ್‌ ಮಾಡಿದ್ದರು. ಪ್ರತಿಯೊಬ್ಬರಿಗೂ ತಮ್ಮಿಚ್ಛೆಯಂತೆ ದೇವರನ್ನು ಪೂಜಿಸುವ ಹಕ್ಕು ಇದೆ ಎಂದಿದ್ದರು.

ADVERTISEMENT

ಮಹುವಾ ಟ್ವೀಟ್‌ ವಿರುದ್ಧ ಟೀಕೆಗಿಳಿದ ಬಿಜೆಪಿ ನಾಯಕರು, ಹಿಂದೂ ದೇವರನ್ನು ಅವಮಾನಿಸಿದ್ದಾರೆ, ಆಡಳಿತ ಪಕ್ಷವು ಈ ಕುರಿತು ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಹೇಳಿಕೆಯಿಂದ ಟಿಎಂಸಿ ಅಂತರ ಕಾಯ್ದುಕೊಂಡಿದೆ.

'ದುರುದ್ದೇಶದಿಂದ ವಿವಾದವನ್ನು ಹುಟ್ಟುಹಾಕುವುದರ ಬಗ್ಗೆ ನನಗೆ ಅರಿವಿದೆ. ಆದರೆ ಮಹುವಾ ಮೊಯಿತ್ರಾ ಅವರ ಹೇಳಿಕೆ ವಿರುದ್ಧ ದಾಳಿ ನಡೆಸುತ್ತಿರುವುದನ್ನು ನೋಡಿ ಅಚ್ಚರಿಯಾಗಿದೆ. ರಾಷ್ಟ್ರದಾದ್ಯಂತ ಹಲವಾರು ಪ್ರಕಾರಗಳಲ್ಲಿ ದೇವರನ್ನು ಪೂಜಿಸುತ್ತಿರುವ ಬಗ್ಗೆ ಪ್ರತಿಯೊಬ್ಬ ಹಿಂದೂವಿಗೂ ಗೊತ್ತಿದೆ. ಅದೇ ವಿಚಾರವನ್ನು ಮಹುವಾ ಪ್ರಸ್ತಾಪಿಸಿದ್ದಾರೆ. ದೇವತೆಗೆ ಅರ್ಪಿಸುವ ವಸ್ತುಗಳಿಗೆ ಭಕ್ತರು ಹೆಚ್ಚಿನ ಮಹತ್ವವನ್ನು ಕೊಡುತ್ತಾರೆ' ಎಂದು ಶಶಿ ತರೂರ್‌ ಟ್ವೀಟ್‌ ಮಾಡಿದ್ದಾರೆ.

ನಾವಿಂದು ಯಾವುದೇ ಧರ್ಮದ ಬಗ್ಗೆ ಸಾರ್ವಜನಿಕವಾಗಿ ಏನನ್ನೂ ಹೇಳದಂತಹ ಹಂತಕ್ಕೆ ತಲುಪಿದ್ದೇವೆ. ಏನೇ ಹೇಳಿದರೂ ಅದಕ್ಕೆ ಧಾರ್ಮಿಕ ಅವಹೇಳನವೆಂದು ಯಾರಾದರೊಬ್ಬರು ಆರೋಪಿಸುವುದು ಸಾಮಾನ್ಯವಾಗಿದೆ. ಮಹುವಾ ಅವರು ಖಂಡಿತವಾಗಿಯೂ ಯಾರ ಮನಸ್ಸನ್ನು ನೋಯಿಸುವ ಉದ್ದೇಶ ಹೊಂದಿಲ್ಲ. ಖಾಸಗಿಯಾಗಿ ಅವರವರ ಇಚ್ಛೆಯಂತೆ ದೇವರನ್ನು ಪೂಜಿಸಲು ಬಿಡುವಂತೆ ಎಲ್ಲರಿಗೂ ಒತ್ತಾಯಿಸುತ್ತಿದ್ದೇನೆ ಎಂದಿದ್ದಾರೆ.

ಕೋಲ್ಕತ್ತದಲ್ಲಿ ನಡೆದ 'ಇಂಡಿಯಾ ಟುಡೇ' ವಾಹಿನಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹುವಾ ಮೊಯಿತ್ರಾ ಅವರು ಪ್ರದೇಶಕ್ಕೆ ಅನುಗುಣವಾಗಿ ಪೂಜಿಸುವ ಕ್ರಮ ಹೇಗೆ ವ್ಯತ್ಯಾಸವಿರುತ್ತದೆ ಎಂಬುದನ್ನು ವಿವರಿಸಿದ್ದರು.

'ಭೂತಾನ್ ಅಥವಾ ಸಿಕ್ಕಿಂಗೆ ಭೇಟಿ ನೀಡಿದರೆ, ಪೂಜೆಯ ವೇಳೆ ದೇವರಿಗೆ ಭಕ್ತರು ವಿಸ್ಕಿಯನ್ನು ಅರ್ಪಿಸುವುದನ್ನು ಕಾಣಬಹುದು. ಈಗ, ನೀವು ಉತ್ತರ ಪ್ರದೇಶಕ್ಕೆ ಹೋಗಿ, ದೇವರಿಗೆ ಪ್ರಸಾದವಾಗಿ ವಿಸ್ಕಿಯನ್ನು ಅರ್ಪಿಸಿದ್ದಾಗಿ ಹೇಳಿದರೆ ಅದು ದೇವರನ್ನು ಅವಮಾನಿಸಿದಂತೆ ಎನ್ನುತ್ತಾರೆ' ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.