ADVERTISEMENT

ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದ ಸ್ಪರ್ಧೆಗೆ ಅರ್ಜಿ ಪಡೆದ ಶಶಿ ತರೂರ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಸೆಪ್ಟೆಂಬರ್ 2022, 14:09 IST
Last Updated 24 ಸೆಪ್ಟೆಂಬರ್ 2022, 14:09 IST
ಚುನಾವಣಾ ಅಧಿಕಾರಿ ಮಧುಸೂದನ ಮಿಸ್ತ್ರಿ ಅವರೊಂದಿಗೆ ಶಶಿ ತರೂರ್‌ ಮಾತುಕತೆ
ಚುನಾವಣಾ ಅಧಿಕಾರಿ ಮಧುಸೂದನ ಮಿಸ್ತ್ರಿ ಅವರೊಂದಿಗೆ ಶಶಿ ತರೂರ್‌ ಮಾತುಕತೆ    

ದೆಹಲಿ: ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯು ಶನಿವಾರ ಆರಂಭಗೊಂಡಿದ್ದು, ಹಿರಿಯ ಸಂಸದ ಶಶಿ ತರೂರ್ ಅವರು ಎಐಸಿಸಿ ಪ್ರಧಾನ ಕಚೇರಿಯಿಂದ ನಾಮಪತ್ರ ಅರ್ಜಿ ಪಡೆದಿದ್ದಾರೆ.

ಪಕ್ಷದ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಅವರ ಕಚೇರಿಯಿಂದ ಐದು ಸೆಟ್ ಅರ್ಜಿಗಳನ್ನು ಶಶಿ ತರೂರ್‌ ಪಡೆದುಕೊಂಡಿದ್ದಾರೆ. ತರೂರ್ ತಮ್ಮ ಆಪ್ತ ಸಹಾಯಕ ಆಲಿಮ್ ಜವೇರಿ ಅವರನ್ನು ಅರ್ಜಿಗಾಗಿ ಕಚೇರಿಗೆ ಕಳುಹಿಸಿದ್ದರು.

ತಮ್ಮ ಸ್ಪರ್ಧೆಗೆ ದೇಶಾದ್ಯಂತ ಪಕ್ಷದ ಪ್ರತಿನಿಧಿಗಳಿಂದ ಅನುಮೋದನೆ ಪಡೆಯಲು ಯೋಜಿಸಿರುವ ತರೂರ್ ಸೆಪ್ಟೆಂಬರ್ 30 ರಂದು ನಾಮಪತ್ರ ಸಲ್ಲಿಸುವ ಸಾಧ್ಯತೆಯಿದೆ. ನಾಮಪತ್ರ ಸಲ್ಲಿಸಲು ಅಂದು ಕೊನೆಯ ದಿನವೂ ಆಗಿರಲಿದೆ.

ADVERTISEMENT

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್‌ ಅವರು ನಾಮಪತ್ರ ಸಲ್ಲಿಸುವುದಾಗಿ ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ಅಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್‌ನಲ್ಲಿ 22 ವರ್ಷಗಳ ನಂತರ ಚುನಾವಣೆ ನಡೆಯುವುದು ನಿಚ್ಚಳವಾಗಿದೆ.

2000ನೇ ಇಸವಿಯಲ್ಲಿ ನಡೆದಿದ್ದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಅವರು ಜಿತೇಂದ್ರ ಪ್ರಸಾದ್‌ ಅವರನ್ನು ಸೋಲಿಸಿದ್ದರು. 1997 ರ ಸಾಂಸ್ಥಿಕ ಚುನಾವಣೆಯಲ್ಲಿ ಶರದ್ ಪವಾರ್ ಮತ್ತು ರಾಜೇಶ್ ಪೈಲಟ್ ಅವರನ್ನು ಸೀತಾರಾಮ್ ಕೇಸರಿ ಅವರು ಮಣಿಸಿದ್ದರು.

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಅವರು ಸೆಪ್ಟೆಂಬರ್ 26 ಮತ್ತು 28 ರ ನಡುವೆ ನಾಮಪತ್ರ ಸಲ್ಲಿಸುವ ಸಾಧ್ಯತೆಯಿದೆ.

ಗೆಹಲೋತ್‌ ಅವರು ಒಂದು ವೇಳೆ ಚುನಾವಣೆ ಗೆದ್ದರೆ, ರಾಜಸ್ಥಾನದ ಮುಖ್ಯಮಂತ್ರಿ ಸ್ಥಾನ ಯಾರಿಗೆ ಒಲಿಯಲಿದೆ ಎಂಬುದರ ಕುತೂಹಲವೂ ಈಗ ಮನೆ ಮಾಡಿದೆ.

ಇವುಗಳನ್ನೂ ಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.