ಬೆಂಗಳೂರು: ಕೇರಳದಲ್ಲಿ ಶಾಸ್ತ್ರೀಯ ನೃತ್ಯಗಾರ್ತಿಯೊಬ್ಬರು ಹಿಂದೂ ಧರ್ಮಕ್ಕೆ ಸೇರಿದವರಲ್ಲ ಎಂಬ ಕಾರಣಕ್ಕೆ ದೇವಸ್ಥಾನದ ಉತ್ಸವದಲ್ಲಿ ಪ್ರದರ್ಶನ ನೀಡಲು ನಿರಾಕರಿಸಿದ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ಸಂಸದ ಶಶಿ ತರೂರ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಎಲ್ಲಿದೆ 'ವಸುಧೈವ ಕುಟುಂಬಕಂ'? ಎಂದು ಪ್ರಶ್ನಿಸಿದ್ದಾರೆ.
ಮದ್ರಾಸ್ ವಿ.ವಿಯಿಂದ ಎಂ.ಎ ಭರತನಾಟ್ಯಂ ಕೋರ್ಸ್‌ನಲ್ಲಿ ಮೊದಲ ರ‍್ಯಾಂಕ್ ಪಡೆದ ಶಾಸ್ತ್ರೀಯ ನೃತ್ಯಗಾರ್ತಿ ಮಾನ್ಸಿಯಾ ವಿ.ಪಿ ಅವರು ಹಿಂದೂ ಅಲ್ಲ ಎಂಬ ಕಾರಣಕ್ಕೆ ತ್ರಿಶ್ಶೂರು ಜಿಲ್ಲೆಯ ಇರಿಞಾಲಕೂಡದಲ್ಲಿರುವ ಕೂಡಲ್‌ಮಾಣಿಕ್ಯಂ ದೇವಸ್ಥಾನದಲ್ಲಿ ನೃತ್ಯ ಪ್ರದರ್ಶನಕ್ಕೆ ಅವಕಾಶ ನಿರಾಕರಿಸಲಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿ ಟ್ವೀಟ್ ಮಾಡಿರುವ ತಿರುವನಂತಪುರದ ಸಂಸದ ಶಶಿ ತರೂರ್, ಅನ್ಯ ಧಾರ್ಮಿಕ ನಂಬಿಕೆಯುಳ್ಳವರಿಂದಲೂ ತಮ್ಮ ಧರ್ಮಕ್ಕೆ ಗೌರವ ಪಡೆಯುವ ಸಲುವಾಗಿ ಮಸೀದಿ, ಚರ್ಚ್, ಗುರುದ್ವಾರಗಳನ್ನೆಲ್ಲ ತೆರೆದಿರುತ್ತಾರೆ. ಆದರೆ ಕೆಲವು ಹಿಂದೂಗಳು ಅನ್ಯ ಧರ್ಮದವರಿಗೆ ದೇವಸ್ಥಾನದ ಬಾಗಿಲು ಮುಚ್ಚುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
''ಅನ್ಯ ಧಾರ್ಮಿಕ ನಂಬಿಕೆಯುಳ್ಳವರು ಬೇರೆಯವರಿಂದ ತಮ್ಮ ಧರ್ಮಕ್ಕೆ ಗೌರವ ಪಡೆಯುವ ಸಲುವಾಗಿ ಮಸೀದಿ, ಚರ್ಚ್, ಗುರುದ್ವಾರ ಮತ್ತು ಸಿನಗಾಂಗ್‌ಗಳನ್ನು ಎಲ್ಲರಿಗೂ ಪ್ರವೇಶ ಮುಕ್ತಗೊಳಿಸಿರುತ್ತಾರೆ. ಆದರೆ ಕೆಲವು ಹಿಂದೂ ಒಡನಾಡಿಗಳು ಬೇರೆಯವರು ಪ್ರವೇಶಿಸದಂತೆ ದೇವಸ್ಥಾನಗಳ ಬಾಗಿಲು ಮುಚ್ಚುತ್ತಿದ್ದಾರೆ. ಎಲ್ಲಿದೆ ವಸುಧೈವ ಕುಟುಂಬಕಂ?'' ಎಂದು ಶಶಿ ತರೂರ್ ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.