ಕೊಚ್ಚಿ: ಹಿಂದೂಗಳ ಏಕತೆಗೆ ಧಕ್ಕೆ ತಂದು ರಾಜಕೀಯ ಲಾಭ ಪಡೆಯಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಸಂಸದ ಶಶಿ ತರೂರ್ ಹೇಳಿದ್ದಾರೆ.ಉತ್ತರ ಭಾರತದಲ್ಲಿ ಬಿಜೆಪಿ ಇದೇ ಕಾರ್ಯತಂತ್ರದಿಂದ ಗೆಲುವು ಸಾಧಿಸಿತ್ತು.1986ರಿಂದ ಇಲ್ಲಿಯವರೆಗೆ ಬಿಜೆಪಿ ಜಾತಿ, ಧರ್ಮದ ಹೆಸರಲ್ಲಿ ತಂತ್ರ ರೂಪಿಸಿಕೊಂಡು ಬಂದಿದೆ. ಯಾವುದೋ ಒಂದು ಧರ್ಮ ಮಾತ್ರ ಇರುವ ದೇಶ ಅಲ್ಲ ಭಾರತ. ಶಬರಿಮಲೆಯಲ್ಲಿ ಬಿಜೆಪಿ ಮುಷ್ಕರ ಮಾಡುತ್ತಿರುವ ರೀತಿ ಬಗ್ಗೆ ನನಗೆ ಸಹಮತವಿಲ್ಲ.ಪವಿತ್ರ ಸ್ಥಳವಾದ ಶಬರಿಮಲೆಯಲ್ಲಿ ಹಿಂಸಾಚಾರ ನಡೆಸುವುದಕ್ಕಾಗಲೀ, ನಾಟಕದ ವೇದಿಕೆಯನ್ನಾಗಿ ಮಾಡುವುದಕ್ಕೆ ಕಾಂಗ್ರೆಸ್ ಸಿದ್ಧವಿಲ್ಲ ಎಂದು ಮಾಧ್ಯಮದವರೊಂದಿಗೆ ಮಾತನಾಡಿದ ತರೂರ್ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಶಬರಿಮಲೆ ವಿಷಯವನ್ನು ಲಿಂಗ ಸಮಾನತೆಯ ವಿಷಯವಾಗಿ ಪರಿಗಣಿಸಿತ್ತು.ಹಾಗಾಗಿಯೇ ಆತೀರ್ಪನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸ್ವಾಗತಿಸಿದ್ದರು.ಆದರೆ ಶಬರಿಮಲೆಯದ್ದು ಲಿಂಗ ಸಮಾನತೆಯ ವಿಷಯ ಅಲ್ಲ. ಅದು ಪಾವಿತ್ರ್ಯತೆ ಮತ್ತು ಸಂಪ್ರದಾಯದ ವಿಷಯವಾಗಿದೆ. ಕನ್ಯಾಕುಮಾರಿಯಲ್ಲಿ ಗಂಡಸರಿಗೆ ಪ್ರವೇಶ ನಿಷೇಧಿಸಿರುವ ದೇವಾಲಯವಿದೆ.ಅಲ್ಲಿ ಪ್ರವೇಶ ಬೇಕು ಎಂದು ಒತ್ತಾಯಿಸಿ ಯಾರೂ ನ್ಯಾಯಾಲಯದ ಮೆಟ್ಟಿಲೇರಲಿಲ್ಲ. ಅಯ್ಯಪ್ಪ ದೇವರಿಗೆ ನಮಿಸಬೇಕು ಎಂದು ಬಯಸುವ ಮಹಿಳೆಯರಿಗೆ ಬೇರೆ ಅಯ್ಯಪ್ಪ ದೇವಾಲಯಗಳು ಇವೆ. ಶಬರಿಮಲೆಯ ಸಂಪ್ರದಾಯ, ಆಚಾರ ವಿಚಾರಗಳನ್ನು ಎಲ್ಲರೂ ಪಾಲಿಸಬೇಕು ಎಂದಿದ್ದಾರೆ ತರೂರ್.
ಪ್ರಜಾಪ್ರಭುತ್ವ ಎಂದರೆ ಇಲ್ಲಿನ ಧರ್ಮಗಳ ನಂಬಿಕೆ, ಸಂವಿಧಾನ, ಕಾನೂನು, ನ್ಯಾಯಾಲದ ತೀರ್ಪು ಮೊದಲಾದವುಗಳನ್ನು ಗೌರವಿಸಬೇಕು.ಇದೆಲ್ಲವನ್ನೂ ಸಮಾನವಾಗಿ ಮುನ್ನಡೆಸುವುದೇ ಪ್ರಜಾಪ್ರಭುತ್ವ. ಶಬರಿಮಲೆ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ಅನುಷ್ಠಾನ ಮಾಡಿದ್ದು ಹಲವಾರು ಭಕ್ತರಿಗೆ ನೋವುಂಟು ಮಾಡಿದೆ.ಆದರೆ ಇದರ ಹೆಸರಿನಲ್ಲಿ ಹಿಂಸಾಚಾರ ಮಾಡಲು ಕಾಂಗ್ರೆಸ್ ಸಿದ್ಧವಿಲ್ಲ.ಶಬರಿಮಲೆ ಈಗ ಪೊಲೀಸ್ ಶಿಬಿರದಂತಾಗಿದೆ.ಅಲ್ಲಿ ಹೋಗಿ ಸಮಾಧಾನವಾಗಿ ಪ್ರಾರ್ಥಿಸುವುದಾದರೂ ಹೇಗೆ?
ಎಲ್ಲ ವಿಭಾಗದ ಜನರೊಂದಿಗೆ ಚರ್ಚಿಸಿ ತೀರ್ಪು ಅನುಷ್ಠಾನಕ್ಕೆ ಮುಂದಾಗಬೇಕಿತ್ತು. ನಾನು ಮತ್ತು ನನ್ನ ಪಕ್ಷ ರಾಜ್ಯ ಸರ್ಕಾರಕ್ಕೆ ಇದೇ ಮಾತನ್ನು ಹೇಳಿದ್ದೆವು.ಕಾನೂನು ರೀತಿಯಲ್ಲಿ ಮಾತ್ರ ನ್ಯಾಯಾಲಯದ ತೀರ್ಪು ಅನುಷ್ಠಾನ ಮಾಡಲು ಸಾಧ್ಯ.ನ್ಯಾಯಾಲಯದ ಮೂಲಕ ಸಾಧ್ಯವಾಗದೇ ಇದ್ದರೆ ಸಂಸತ್ ನಲ್ಲಿ ಈ ವಿಷಯ ಚರ್ಚಿಸಿ ಅದಕ್ಕಿರುವ ಮಾರ್ಗ ಕಂಡುಕೊಳ್ಳಬೇಕು.
ಶಬರಿಮಲೆಯಲ್ಲಿ ಹಿಂಸಾಚಾರ ಮಾಡುವುದಾಗಲೀ, ಭಕ್ತರಿಗೆ ತಡೆಯೊಡ್ಡುವ ಕಾರ್ಯಗಳಿಂದಾಗಿ ಸಮಸ್ಯೆ ಪರಿಹಾರವಾಗುವುದಿಲ್ಲ.ಎಲ್ಲರನ್ನೂ ಒಟ್ಟಿಗೆ ಕರೆದು ಸಮಾಲೋಚನೆ ನಡೆಸಬೇಕು . ಇದರ ಬದಲು ದಿಢೀರನೆ ಸುಪ್ರೀಂ ತೀರ್ಪನ್ನು ಅನುಷ್ಠಾನಕ್ಕೆ ತರಲು ಯತ್ನಿಸಿದ್ದೇ ಕೇರಳ ಸರ್ಕಾರ ಮಾಡಿದ ತಪ್ಪು ಎಂದು ತರೂರ್ ಹೇಳಿರುವುದಾಗಿ ಮಲಯಾಳ ಮನೋರಮ ಪತ್ರಿಕೆ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.