ನವದೆಹಲಿ:ಬಿಜೆಪಿಯ ಹಾಲಿ ಸಂಸದ ಶತ್ರುಘ್ನ ಸಿನ್ಹಾ ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನುಗುರುವಾರ ಭೇಟಿ ಮಾಡಿ ಮಾತುಕತೆ ನಡೆಸಿದರು.
ಕಾಂಗ್ರೆಸ್ ಸೇರುವ ಬಗ್ಗೆ ಅವರು ಚರ್ಚೆ ನಡೆಸಿದರು. ಬಹುಶಃ ಏಪ್ರಿಲ್ 6ರಂದು ಅವರು ಕಾಂಗ್ರೆಸ್ ಸೇರಬಹುದು ಎಂದು ಮೂಲಗಳು ಹೇಳಿವೆ.
ಬಿಹಾರದ ಪಟ್ನಾ ಸಾಹಿಬ್‌ನ ಸಂಸದರಾಗಿರುವ ಸಿನ್ಹಾ ಅವರು, ಈ ಬಾರಿಯೂ ಅದೇ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದಾರೆ. ಆದರೆ, ಸಿನ್ಹಾ ಅವರ ಬದಲಿಗೆ ಸಚಿವ ರವಿಶಂಕರ್ ಪ್ರಸಾದ್ ಅವರನ್ನು ಈ ಕ್ಷೇತ್ರದಿಂದಬಿಜೆಪಿ ಕಣಕ್ಕೆ ಇಳಿಸಿದೆ. ಸಿನ್ಹಾ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಕಡು ಟೀಕಾಕಾರರಾಗಿದ್ದರು. ಹೀಗಾಗಿಯೇ ಅವರಿಗೆ ಟಿಕೆಟ್ ತಪ್ಪಿತ್ತು.
ಗುರುವಾರ ಅವರು ರಾಹುಲ್ ಗಾಂಧಿಯನ್ನು ಭೇಟಿ ಮಾಡುವಾಗ ಬಿಹಾರ ಕಾಂಗ್ರೆಸ್‌ನ ಹಲವು ನಾಯಕರೂ ಉಪಸ್ಥಿತರಿದ್ದರು. ಈ ಭೇಟಿ ಮುಗಿಸಿ ಹೊರಬಂದ ಸಿನ್ಹಾ ಅವರು ಪತ್ರಕರ್ತರ ಜತೆ ಮಾತನಾಡಿದರು.
‘ಬಹಳ ನೋವು ತುಂಬಿಕೊಂಡು ಬಿಜೆಪಿಯಿಂದ ಹೊರಬರುತ್ತಿದ್ದೇನೆ. ಆದರೆ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿದ್ದೇನೆ. ಏಪ್ರಿಲ್ 6ರಂದು ನಿಮಗೆ ಒಳ್ಳೆಯ ಸುದ್ದಿ ಕೊಡುತ್ತೇನೆ. ಪರಿಸ್ಥಿತಿ ಎಂಥದ್ದೇ ಆಗಿರಲಿ, ನಾನು ಪಟ್ನಾ ಸಾಹಿಬ್‌ನಿಂದಲೇ ಸ್ಪರ್ಧಿಸುತ್ತೇನೆ’ ಎಂದು ಅವರು ಹೇಳಿದರು.
‘ನನ್ನ ಹೋರಾಟ ಬಿಜೆಪಿ ವಿರುದ್ಧವಾಗಿರಲಿಲ್ಲ. ನನ್ನ ಆಕ್ಷೇಪ ಇದ್ದದ್ದು ಇಬ್ಬರೇ ವ್ಯಕ್ತಿಗಳ (ಮೋದಿ, ಶಾ) ಬಗ್ಗೆ ಮಾತ್ರ. ಅವರಿಬ್ಬರು ಪ್ರಜಾಪ್ರಭುತ್ವವನ್ನು ಸರ್ವಾಧಿಕಾರವನ್ನಾಗಿ ಬದಲಿಸಿದರು’ ಎಂದು ಅವರು ಟೀಕಿಸಿದರು.
ಬಿಹಾರದಲ್ಲಿ ಕಾಂಗ್ರೆಸ್ ಮತ್ತು ಆರ್‌ಜೆಡಿ ಮೈತ್ರಿಕೂಟ ರಚಿಸಿಕೊಂಡಿವೆ.ಸಿನ್ಹಾ ಅವರನ್ನು ತಮ್ಮದೇ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಬೇಕು ಎಂದು ಎರಡು ಪಕ್ಷಗಳೂ ಪೈಪೋಟಿ ನಡೆಸಿದ್ದವು. ಆದರೆ ಅಂತಿಮವಾಗಿ ಕಾಂಗ್ರೆಸ್ ಕೈ ಮೇಲಾಗಿದೆ.
* ಬಿಜೆಪಿಯಲ್ಲಿ ಈಗಲೂ ಇಬ್ಬರದ್ದೇ ಸರ್ವಾಧಿಕಾರ ಮುಂದುವರಿಯುತ್ತಿದೆ. ಹೀಗಾಗಿಯೇ ನಾನು ಬಿಜೆಪಿ ಬಿಡುತ್ತಿದ್ದೇನೆ. ದೇಶದ ಹಿತಾಸಕ್ತಿ ರಕ್ಷಣೆಗಾಗಿ ಕಾಂಗ್ರೆಸ್ ಸೇರಲು ನಿರ್ಧರಿಸಿದ್ದೇನೆ
- ಶತ್ರುಘ್ನ ಸಿನ್ಹಾ, ಪಟ್ನಾ ಸಾಹಿಬ್ ಸಂಸದ
ಸಿನ್ಹಾ ಅವರು ಏಪ್ರಿಲ್ 6ಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಸೇರಲಿದ್ದಾರೆ ಎಂದು ಕಾಂಗ್ರೆಸ್‍ನ ಹಿರಿಯ ನೇತಾರ ಶಕ್ತಿಸಿಂಗ್ ಗೋಹಿಲ್ ಟ್ವೀಟ್ ಮಾಡಿದ್ದಾರೆ.
ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಅವರು ನಮ್ಮ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಇಂದು ಭೇಟಿಯಾಗಿದ್ದಾರೆ.ದೇಶದ ಹಿತಾಸಕ್ತಿಯನ್ನು ಪರಿಗಣಿಸಿ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಲಿದ್ದಾರೆ.ಏಪ್ರಿಲ್ 6ರಂದು ಅಧಿಕೃತವಾಗಿ ಅವರು ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಗೋಹಿಲ್ ಟ್ವೀಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.