ಠಾಣೆ: ‘ನನ್ನ ಮಗಳು ಇಸ್ಲಾಂಗೆ ಮತಾಂತರವಾಗಬೇಕು ಎಂದುಸಹ ನಟ ಶೀಜನ್ ಖಾನ್ ಹಾಗೂ ಆತನ ಕುಟುಂಬದ ಸದಸ್ಯರು ಒತ್ತಾಯಿಸುತ್ತಿದ್ದರು’ ಎಂದು ಶೂಟಿಂಗ್ ಸೆಟ್‌ನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದ ನಟಿ ತುನಿಷಾ ಶರ್ಮಾ ಅವರ ತಾಯಿ ವನಿತಾ ಶರ್ಮಾ ಶುಕ್ರವಾರ ಆರೋಪ ಮಾಡಿದ್ದಾರೆ.
ಇಲ್ಲಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ತುನಿಷಾ ಆತ್ಮಹತ್ಯೆ ಮಾಡಿಕೊಳ್ಳುವ ಹುಡುಗಿಯಲ್ಲ. ಇದೊಂದು ಕೊಲೆ. ಈ ಎಲ್ಲದಕ್ಕೂ ಶೀಜನ್ ಖಾನ್ ಅವರ ತಾಯಿ ಕಾರಣರಾಗಿದ್ದಾರೆ. ಆದ್ದರಿಂದ ಅವರ ಕುಟುಂಬದವರನ್ನೂ ಈ ಪ್ರಕರಣದಲ್ಲಿ ವಿಚಾರಣೆಗೆ ಒಳಪಡಿಸಬೇಕು’ ಎಂದು ಒತ್ತಾಯಿಸಿದರು.
‘ಆಕೆ ಬಹಳ ಸೂಕ್ಷ್ಮ ಸ್ವಭಾವದವಳು. ಕೆಲವು ತಿಂಗಳ ಹಿಂದಿನಿಂದ ಆಕೆಯ ಸ್ವಭಾವದಲ್ಲಿ ಬದಲಾವಣೆಗಳಾಗಿದ್ದವು. ಶೀಜನ್ ಕುಟುಂಬಕ್ಕೆ ಬಹಳ ಹತ್ತಿರವಾಗಿದ್ದ ತುನಿಷಾ, ಅವರ ಸಂಪ್ರದಾಯಗಳನ್ನು ಅನುಸರಿಸಲು ಪ್ರಾರಂಭಿಸಿದ್ದಳು. ಇದು, ಆಕೆ ನಿಧಾನವಾಗಿ ಮತಾಂತರವಾಗುತ್ತಿದ್ದಳು ಎನ್ನುವುದರ ಸಂಕೇತವಾಗಿತ್ತು’ ಎಂದರು. ಶೀಜನ್ ಕುಟುಂಬವು ಮತಾಂತರಕ್ಕೆ ಒತ್ತಾಯಪಡಿಸಿತ್ತೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ವನಿತಾ ಅವರು ‘ಹೌದು’ ಎಂದು ಉತ್ತರಿಸಿದರು.
‘ದುಬಾರಿ ಕೊಡುಗೆಗಳನ್ನು ಕೊಡುವಂತೆ ತುನಿಷಾಳನ್ನುಶೀಜನ್ ಕೇಳುತ್ತಿದ್ದ. ಈಕೆಯೂ ಕೊಡುತ್ತಿದ್ದಳು. ಇಬ್ಬರೂ ಪರಸ್ಪರರ ನಿವಾಸದಲ್ಲಿ ಆಗಾಗ ಉಳಿದುಕೊಳ್ಳುತ್ತಿದ್ದರು’ ಎಂದರು.
‘ಶೀಜನ್ ಖಾನ್ ಮೊಬೈಲ್ ಅನ್ನು ನನ್ನ ಮಗಳು ಒಮ್ಮೆ ಪರಿಶೀಲನೆ ಮಾಡಿದ್ದಳು. ಬೇರೆ ಮಹಿಳೆಯೊಂದಿಗೆ ಆತ ಸಂಪರ್ಕದಲ್ಲಿ ಇದ್ದದ್ದು ಆಗ ತಿಳಿಯಿತು. ಈ ಬಗ್ಗೆ ಮಗಳು ಪ್ರಶ್ನಿಸಿದಾಗ, ಆತ ಆಕೆಯ ಕೆನ್ನೆಗೆ ಹೊಡೆದಿದ್ದ. ನಿನಗೆ ಬೇಕಾದಂತೆ ಮಾಡಿಕೊಳ್ಳುವ ಸ್ವಾತಂತ್ರ್ಯ ಇದೆ ಎಂದೂ ಕೇಳಿದ್ದ’ ಎಂದರು.
ಕೇಂದ್ರ ಸಚಿವ ರಾಮದಾಸ್ ಆಠವಲೆ ಅವರು ತುನಿಷಾ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಈ ವೇಳೆ ಮಾತನಾಡಿದ ಅವರು, ‘ತುನಿಷಾ ತಾಯಿಗೆ ₹25 ಲಕ್ಷ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.