ನವದೆಹಲಿ: ಬಾಂಗ್ಲಾದೇಶದಲ್ಲಿ ಉಂಟಾದ ಅರಾಜಕತೆಯಿಂದ ಪ್ರಧಾನಿ ಹುದ್ದೆ ಹಾಗೂ ದೇಶ ತೊರೆದ ಶೇಖ್ ಹಸೀನಾ ಅವರನ್ನು ದೆಹಲಿಯ ಗಾಜಿಯಾಬಾದ್ ಬಳಿಯ ಹಿಂಡನ್ ವಾಯುನೆಲೆಯಲ್ಲಿ ರಾಷ್ಟ್ರೀಯ ಭದ್ರತಾ ಸಲೆಹಗಾರ ಅಜಿತ್ ಡೊಭಾಲ್ ಸೋಮವಾರ ಭೇಟಿಯಾಗಿದ್ದಾರೆ.
ಸದ್ಯದ ಬೆಳವಣಿಗೆಗೆ ಸಂಬಂಧಿಸಿದಂತೆ ದೇಶದ ಪೂರ್ವ ಭಾಗದಲ್ಲಿ ಭಾರತೀಯ ವಾಯು ಸೇನೆ ನಿಗಾ ವಹಿಸಿದೆ. ಐಎಎಫ್ ಹಾಗೂ ಇತರ ಭದ್ರತಾ ಪಡೆಗಳು ಹಸೀನಾ ಅವರಿಗೆ ಭದ್ರತೆ ನೀಡಿವೆ. ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ ಎಂದು ಮೂಲಗಳು ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.
ಸೇನಾ ಹೆಲಿಕಾಪ್ಟರ್ ಸಿ–130 ಹರ್ಕ್ಯುಲಸ್‌ನಲ್ಲಿ ಹಸೀನಾ ಅವರು ನವದಹಲಿ ಬಳಿಯ ಹಿಂಡನ್ ಏರ್‌ಬೇಸ್‌ಗೆ ಸೋಮವಾರ ಸಂಜೆ ಬಂದಿಳಿದರು. ಭಾರತ ಹಾಗೂ ಬಾಂಗ್ಲಾ ಗಡಿಯಲ್ಲಿನ ಪರಿಸ್ಥಿತಿಗೆ ಸಂಬಂಧಿಸಿದಂತೆ ಗಡಿ ಭದ್ರತಾ ಪಡೆಯ ಯೋಧರು, ಬಾರ್ಡರ್ ಗಾರ್ಡ್ ಬಾಂಗ್ಲಾದೇಶ (ಬಿಜಿಬಿ) ಜತೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಬಿಎಸ್‌ಎಫ್‌ನ ಅಧಿಕಾರಿಗಳು ತಿಳಿಸಿದ್ದಾರೆ.
ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಬಾಂಗ್ಲಾದೇಶದ ಪರಿಸ್ಥಿತಿ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಹಿತಿ ನೀಡಿದ್ದಾರೆ. ಶೇಖ್ ಹಸೀನಾ ಅವರು ಭಾರತಕ್ಕೆ ಬಂದಿರುವುದರಿಂದ ರಾಜಕೀಯ ಪರಿಸ್ಥಿತಿ ಕುರಿತು ವಿವರಿಸಿದ್ದಾರೆ.
ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲಿದಾ ಝಿಯಾ ಅವರು ಶಾಂತಿ ಕಾಪಾಡುವಂತೆ ದೇಶದ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ದೇಶದ ಘಟನೆಯ ಲಾಭ ಪಡೆದು ಲೂಟಿ ಮಾಡುವವರನ್ನು ತಡೆಯಬೇಕು ಎಂದು ಪ್ರತಿಭಟನೆ ನಡೆಸಿದ ವಿದ್ಯಾರ್ಥಿ ಚಳವಳಿಕಾರರು ಹೇಳಿದ್ದಾರೆ.
ಬಾಂಗ್ಲಾದೇಶದ ಪ್ರಧಾನಮಂತ್ರಿ ಶೇಖ್ ಹಸೀನಾ ಅವರು ಇಂದು ರಾಜೀನಾಮೆ ನೀಡಿದ್ದು, ತಮ್ಮ ಸೋದರಿಯೊಂದಿಗೆ ದೇಶದಿಂದ ಪಲಾಯನ ಮಾಡಿದ್ದಾರೆ ಎಂದು ಬಾಂಗ್ಲಾದೇಶದ ಸೇನಾ ಮುಖ್ಯಸ್ಥ ತಿಳಿಸಿದ್ದಾರೆ.
ಸರ್ಕಾರದ ವಿರುದ್ಧ ಭಾನುವಾರದಿಂದ ಆರಂಭವಾಗಿರುವ ಬೃಹತ್ ಪ್ರತಿಭಟನೆಯಿಂದಾಗಿ ಇದುವರೆಗೆ 106 ಮಂದಿ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಹಸೀನಾ ಅವರು ಇಂದು (ಸೋಮವಾರ) ರಾಜೀನಾಮೆ ಸಲ್ಲಿಸಿ, ದೇಶ ತೊರೆದಿದ್ದಾರೆ ಎಂದು ವರದಿಯಾಗಿದೆ.
ಬಾಂಗ್ಲಾದೇಶದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ 4,096 ಕಿ.ಮೀ. ಉದ್ದದ ಭಾರತ-ಬಾಂಗ್ಲಾದೇಶ ಗಡಿಯುದ್ದಕ್ಕೂ ಗಡಿ ಭದ್ರತಾ ಪಡೆಯು (ಬಿಎಸ್‌ಎಫ್) ಹೈ ಅಲರ್ಟ್ ಘೋಷಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.