ADVERTISEMENT

ಇಂದಿರಾ ಗಾಂಧಿ ಗಮನ ಸೆಳೆದಿದ್ದ ಶೀಲಾ; ರಾಜಕೀಯ ಪ್ರವೇಶ ಆಕಸ್ಮಿಕ

ಏಜೆನ್ಸೀಸ್
Published 21 ಜುಲೈ 2019, 5:27 IST
Last Updated 21 ಜುಲೈ 2019, 5:27 IST
   

ಹಿರಿಯ ರಾಜಕಾರಣಿ ಶೀಲಾ ದೀಕ್ಷಿತ್‌ ’ಕಾಂಗ್ರೆಸ್ ಪಕ್ಷದ ಪ್ರೀತಿಯ ಮಗಳು‘ ಎಂದು ಕರೆಸಿಕೊಂಡರೂ ಎಲ್ಲ ಪಕ್ಷಗಳ ಮುಖಂಡರೊಂದಿಗೂ ಸೌಹಾರ್ದ ಸಂಬಂಧ ಹೊಂದಿದ್ದವರು. ಮೂರು ಬಾರಿ ದೆಹಲಿ ಮುಖ್ಯಮಂತ್ರಿಯಾಗಿ ಅಭಿವೃದ್ಧಿಗಾಗಿ ಶ್ರಮಿಸಿದರು. ದೆಹಲಿ ಕಾಂಗ್ರೆಸ್‌ ಅಧ್ಯಕ್ಷೆಯಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದ 81 ವರ್ಷ ವಯಸ್ಸಿನ ಶೀಲಾ ದೀಕ್ಷಿತ್‌ ಶನಿವಾರ ನಿಧನರಾದರು. 2019ರ ಲೋಕಸಭಾ ಚುನಾವಣೆಯಲ್ಲೂ ಕಣಕ್ಕಿಳಿದಿದ್ದರು ಶೀಲಾ...

ದೆಹಲಿ ಮುಖ್ಯಮಂತ್ರಿಯಾಗಿ ಹೆಚ್ಚಿನ ಅವಧಿಗೆ ಆಡಳಿತ ನಡೆಸಿದ ಹೆಗ್ಗಳಿಕೆ ಶೀಲಾ ದೀಕ್ಷಿತ್‌ ಅವರದು. ಸುಮಾರು 15 ವರ್ಷ ಅವರು ಮುಖ್ಯಮಂತ್ರಿಯಾಗಿದ್ದರು. 2015ರಲ್ಲಿ ಎಎಪಿ ವಿಧಾನಸಭಾ ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಪಡೆಯುವ ಮೂಲಕ ಅರವಿಂದ ಕೇಜ್ರಿವಾಲ್‌ ದೆಹಲಿ ಮುಖ್ಯಮಂತ್ರಿಯಾದರು.

ಶೀಲಾ ಅವರು ರಾಜಕೀಯ ಪ್ರವೇಶಿಸಿದ್ದು ಆಕಸ್ಮಿಕ. ದೇಶದ ಸ್ವತಂತ್ರ ಹೋರಾಟಗಳಲ್ಲಿ ಭಾಗಿಯಾಗಿದ್ದ ಅವರ ಮಾವ ಉಮಾ ಶಂಕರ್‌ ದೀಕ್ಷಿತ್‌, ಇಂದಿರಾ ಗಾಂಧಿ ಸರ್ಕಾರದಲ್ಲಿ ಕ್ಯಾಬಿನೆಟ್‌ ಸಚಿವರಾದರು. ಕೇಂದ್ರ ಸಚಿವರಾಗಿದ್ದ ತನ್ನ ಮಾವನಿಗೆ ಶೀಲಾ ಅವರು ಹಲವು ಕಾರ್ಯಗಳಲ್ಲಿ ಸಹಕಾರ ನೀಡುತ್ತಿದ್ದರು. ಶೀಲಾ ಅವರಲ್ಲಿದ್ದ ಆಡಳಿತ ಕೌಶಲ್ಯವನ್ನು ಗಮನಿಸಿದ್ದ ಆಗಿನ ಪ್ರಧಾನಿ ಇಂದಿರಾ ಗಾಂಧಿ, ಅವರನ್ನು ‘ಮಹಿಳೆಯ ಸ್ಥಾನಮಾನ‘ ವಿಚಾರವಾಗಿ ವಿಶ್ವಸಂಸ್ಥೆ ಆಯೋಗದ ಪ್ರತಿನಿಧಿಯಾಗಿ ಆಯ್ಕೆ ಮಾಡಿದರು. ಅಲ್ಲಿಂದ ಅವರ ರಾಜಕೀಯ ಯಾತ್ರೆ ಆರಂಭವಾಯಿತು.

ADVERTISEMENT

1970ರಲ್ಲಿ ಯುವ ಮಹಿಳಾ ಕೂಟದ ಮುಖ್ಯಸ್ಥರಾದರು. ಉತ್ತರ ಪ್ರದೇಶದ ಕನೌಜ್‌ ಲೋಕಸಭಾ ಕ್ಷೇತ್ರದಿಂದ 1984ರಲ್ಲಿ ಆಯ್ಕೆಯಾದರು. ಐದು ವರ್ಷ ಲೋಕಸಭಾ ಸದಸ್ಯೆಯಾಗಿದ್ದ ಅವರು ವಿಶ್ವಸಂಸ್ಥೆ ಆಯೋಗಕ್ಕೆ ಭಾರತದ ಪ್ರತಿನಿಧಿಯಾಗಿದ್ದರು.

ಆಡಳಿತ ಚುರುಕುತನ ಹೊಂದಿದ್ದ ಶೀಲಾ ಅವರಿಗೆ ಬಹುಬೇಗ ಕೇಂದ್ರ ಸಚಿವ ಸ್ಥಾನ ಒಲಿಯಿತು. 1986ರಿಂದ 1989ರ ವರೆಗೂ ಪ್ರಧಾನ ಮಂತ್ರಿಗಳ ಕಾರ್ಯಾಲಯ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾಗಿ ಜವಾಬ್ದಾರಿ ನಿರ್ವಹಿಸಿದರು.

ಮಹಿಳೆ ಮೇಲಿನ ದೌರ್ಜನ್ಯವನ್ನು ವಿರೋಧಿಸಿ 1990ರಲ್ಲಿ ನಡೆದ ಹೋರಾಟದ ನೇತೃತ್ವ ವಹಿಸಿದ್ದರು. 1998ರಲ್ಲಿ ದೆಹಲಿಯ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿದ ಅವರು, 15 ವರ್ಷ ಆಡಳಿತ ನಡೆಸಿದರು. 1998 ಮತ್ತು 2003ರಲ್ಲಿ ಗೋಲ್‌ ಮಾರ್ಕೆಟ್‌ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು ಹಾಗೂ 2008ರಲ್ಲಿ ನವದೆಹಲಿ ಕ್ಷೇತ್ರದಿಂದ ಕಣಕ್ಕಿಳಿದಿದ್ದರು.

2014ರ ಮಾರ್ಚ್‌ನಲ್ಲಿ ಕೇರಳ ರಾಜ್ಯಪಾಲರಾಗಿ ನೇಮಕಗೊಂಡಿದ್ದ ಶೀಲಾ ಅವರು ಐದು ತಿಂಗಳ ಅಂತರದಲ್ಲಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಮನೋಜ್‌ ತಿವಾರಿ ಎದುರು ಶೀಲಾ ದೀಕ್ಷಿತ್‌ ಪರಾಭವಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.